ವಿಚ್ಛೇದನ ಬೇಡ; ಶಾದಿಭಾಗ್ಯ ಮುಂದುವರಿಸಿ ಎಂದ ಜಸ್ಟೀಸ್

Stay together: Karnataka High Court advises divorce seeking Mysore doctor couple
ಬೆಂಗಳೂರು, ನ. 7: ಮೊದಲು ಅಹಂ ಬಿಡಿ. ಆಗಿದ್ದು ಆಗಿ ಹೋಯ್ತು, ಎಲ್ಲ ಮರೆತು ಇಬ್ಬರೂ ಒಂದಾಗಿ ಸುಖ-ಸಂತೋಷದಿಂದ ಬಾಳು ನಡೆಸಿ - ಇದು ವಿವಾಹ ವಿಚ್ಛೇದನದ ಹೊಸ್ತಿಲಲ್ಲಿದ್ದ ವೈದ್ಯ ದಂಪತಿಗೆ ಇಬ್ಬರು ನ್ಯಾಯಮೂರ್ತಿಗಳು ತಮ್ಮ ವೃತ್ತಿಯನ್ನು ಬದಿಗಿಟ್ಟು ಮಾನವೀಯತೆಯ ಮರುಸ್ಥಾಪನೆಗಾಗಿ ನೀಡಿದ ಆಪ್ತ/ಆತ್ಮೀಯ ಸಲಹೆ.

ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯಮೂರ್ತಿ ಕೆಎಲ್ ಮಂಜುನಾಥ್ ಅವರು (ಚಿತ್ರದಲ್ಲಿರುವವರು) ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ಮೈಸೂರಿನ ವೈದ್ಯ ದಂಪತಿಗೆ ಈ 'ಜೀವನ ಪಾಠ' ಹೇಳಿದ್ದಾರೆ.

ಅಷ್ಟೇ ಅಲ್ಲ. 'ಇಬ್ಬರೂ 2-3 ದಿನ ಬೆಂಗಳೂರಲ್ಲೇ ಹೋಟೆಲಿನಲ್ಲಿ ರೂಂ ಮಾಡಿಕೊಂಡು ಇರಿ. ಆಮೇಲೆ ಬನ್ನಿ ನೋಡೋಣ' ಎಂದು ನ್ಯಾಯಮೂರ್ತಿ ಹೇಳಿದರು. ಅದಕ್ಕೆ ಯುವತಿ ಸಮ್ಮತಿಸಿದರು. ಆದರೆ ಪತಿಯೂ ಒಲ್ಲದ ಮನಸ್ಸಿನಿಂದ, 'ಆಕೆ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದರು' ಎಂದು ಗೊಣಗುತ್ತಿದ್ದರು.

ಈ ಮಧ್ಯೆ, ತಮ್ಮ ಮುದ್ದು ಮಗನಿಗೆ ಸ್ಕೂಲು ಹೋಗುತ್ತದೆ. ರಜೆ ಸಿಗೋಲ್ಲ ಎಂದು ಪತ್ನಿ ಕೋರ್ಟ್ ಗಮನ ಸೆಳೆದರು. ತಕ್ಷಣ ಸ್ಪಂದಿಸಿದ ನ್ಯಾ. ಮಂಜುನಾಥ್ ಅವರು 'ಕೋರ್ಟ್ ಹೇಳಿದೆ ಅಂತ ಸ್ಕೂಲಿಗೆ ಹೇಳಿ ಅವರ ಮಗನಿಗೆ ರಜೆ ಕೊಡಿಸ್ರೀ. ಮೂವರೂ ಮೂರು ದಿನ ಒಟ್ಟಿಗಿರಲಿ ಎಲ್ಲಾ ಸರಿಹೋಗುತ್ತೆ' ಎಂದು ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.

ಏನಾಗಿತ್ತೆಂದರೆ... ತಮ್ಮ ವೈದ್ಯ ಪತ್ನಿಯಿಂದ ವಿವಾಹ ವಿಚ್ಛೇದನ ಕೋರಿ ವೈದ್ಯ ಮಹಾಶಯರೊಬ್ಬರು ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ ಅದು ವಜಾಗೊಂಡಿತ್ತು.

ಮೇಲ್ಮನವಿ ಸಲ್ಲಿಸಿದ ಸದರಿ ವೈದ್ಯ ಮಹಾಶಯ ವಿಚಾರಣೆಗೆಂದು ನಿನ್ನೆ ಹೈಕೋರ್ಟಿಗೆ ಬಂದಿದ್ದರು. ಆಗ ನ್ಯಾಯಮೂರ್ತಿ 'ಆಗಿದ್ದು ಆಗಿ ಹೋಗಿದೆ. ನ್ಯಾಯಾಲಯವೇನೋ ಕಾನೂನು ಚೌಕಟ್ಟಿನಲ್ಲಿ ವಿವಾಹ ವಿಚ್ಛೇದನದ ಬಗ್ಗೆ ಪರಿಶೀಲಿಸಿ ತೀರ್ಪು ನೀಡಲಿದೆ. ಆದರೆ ಅದಕ್ಕೂ ಮುನ್ನ ಒಂದು ಅವಕಾಶ ನೀಡಲಾಗುವುದು. ಇಬ್ಬರೂ ಒಂದಾಗುವಿರಾ?' ನಿರ್ಮಲ ಅಂತಃಕರಣದೊಂದಿಗೆ ದಂಪತಿಯನ್ನುದ್ದೇಶಿಸಿ ಕೇಳಿದರು.

ಅದಕ್ಕೆ ಥಟ್ಟನೇ ತಲೆದೂಗಿದ ವೈದ್ಯ ಪತ್ನಿ 'ನಾನು ಸಿದ್ಧಳಿದ್ದೇನೆ. ಆದರೆ ಪತಿಯೇ ಅದಕ್ಕೆ ಒಪ್ಪುತ್ತಿಲ್ಲ. ಹಿಂದೆಯೂ ಎರಡು ಮೂರು ಬಾರಿ ಸಂಧಾನ ಪ್ರಕ್ರಿಯೆ ನಡೆಸುವ ಯತ್ನ ನಡೆಸಲಾಯಿತು. ಆದರೂ ಅದು ಫಲ ನೀಡಲಿಲ್ಲ' ಎಂದು ಅಲವತ್ತುಕೊಂಡರು. ಆಗ ನ್ಯಾಯಮೂರ್ತಿ 'ಏನ್ರಿ, ಏಕೆ ವಿಚ್ಛೇದನ ಬೇಕು? ಯಾವ ಆಧಾರದ ಮೇಲೆ ವಿಚ್ಛೇದನ ಕೇಳಿದ್ದೀರಿ' ಎಂದು ಪತಿ ಮಜಹಾಶಯನ ಪರ ವಕೀಲರನ್ನು 'ವಿಚಾರಿಸಿಕೊಂಡರು'.

ಅದಕ್ಕೆ 'ಮಾನಸಿಕ ಹಾಗೂ ದೈಹಿಕ ಕಿರುಕುಳ ಆಧಾರದ ಮೇಲೆ' ಎಂಬ ಮಾರುತ್ತರ ಬಂದಿತ್ತು. ಆಗ ಅರ್ಜಿಯಲ್ಲಿನ ದಾಖಲೆ ಗಮನಿಸಿದ ನ್ಯಾ. ಕೆಎಲ್ ಮಂಜುನಾಥ್ ಮತ್ತು ನ್ಯಾ. ಎವಿ ಚಂದ್ರಶೇಖರ್ ಅವರ ನ್ಯಾಯಪೀಠ '2006ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಾಗಿದ್ದ ಮೇಲೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಎಲ್ಲಿಂದ ಬಂತು? ಬೇರೆ ಬೇರೆ ಇದ್ದರು ಎಂಬುದೇ ವಿಚ್ಛೇದನಕ್ಕೆ ಆಧಾರವಾಗುವುದಿಲ್ಲ. ಅದು ಪರಿತ್ಯಕ್ತ ಆಗುತ್ತೆ ಅಷ್ಟೆ.

'ನೀವು ಬೇಕು ಎಂದಾಗ ಡೈವೋರ್ಸ್ ಕೊಡೋಕೆ, ಬೇಡ ಎಂದಾಗ ಬಿಡೋಕೆ ಆಗೋಲ್ಲ. ಕಾನೂನುಬದ್ಧವಾಗಿ ಸರಿ ಇದ್ದರೆ ವಿಚ್ಛೇದನ ನೀಡಲಾಗುವುದು, ಇಲ್ಲವಾದರೆ ಇಲ್ಲ' ಎಂದು ಹೇಳಿದರು. 'ಅವರಿಬ್ಬರನ್ನು ಒಂದಾಗಿಸಲು ಪ್ರಯತ್ನಿಸಿ' ಎಂದು ವಕೀಲರಿಗೂ ನ್ಯಾಯಮೂರ್ತಿ ಕಿವಿಮಾತು ಹೇಳಿದರು.

ಆತ ಮೈಸೂರಿನಲ್ಲಿ ವೈದ್ಯ. ಈಕೆ ಬೆಂಗಳೂರಿನಲ್ಲಿ ವೈದ್ಯೆ. 2003ರಲ್ಲಿ ಈ ಯುವ ವೈದ್ಯ ಜೋಡಿ ಮದುವೆಯಾಗಿದ್ದರು. 2006ರಲ್ಲಿ ಇಬ್ಬರೂ ದೂರವಾಗಿರಲು ನಿರ್ಧರಿಸಿದರು. 2007ರಲ್ಲಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ಬಿದ್ದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+