ಅಪ್ಲಿಕೇಷನ್ ಸಿದ್ದವಾಗುತ್ತಿದೆ, ಶೀಘ್ರವೇ 'ಗೃಹಲಕ್ಷ್ಮೀ'ಗಾಗಿ ಅರ್ಜಿ ಆಹ್ವಾನ: ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ, ಜೂನ್ 18: ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಯೋಜನೆಗಳಲ್ಲಿ ಒಂದಾಗಿರುವ ''ಗೃಹಜ್ಯೋತಿ'' ಯೋಜನೆಗೆ ಲಾಭಪಡೆಯಲು ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಆದಷ್ಟು ಶೀಘ್ರವೇ ''ಗೃಹ ಲಕ್ಷ್ಮೀ'' ಯೋಜನೆಗಾಗಿ ಪಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗುವುದು. ಈ ಪ್ರಕ್ರಿಯೆ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಮಹಿಳೆ ಮತ್ತು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದ್ದಾರೆ.
ಭಾನುವಾರ ಜಿಲ್ಲೆಯ ಬಸ್ತವಾಡದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ 'ಗೃಹ ಜ್ಯೋತಿ' ಯೋಜನೆಗೆ ಅರ್ಜಿ ಸಲ್ಲಿಕೆ ವಿಳಂಬವಾಗಿದೆ. ಜೂನ್ 15 ರಂದು ಅರ್ಜಿ ಸಲ್ಲಿಕೆ ಆರಂಭ ಎಂದು ಹೇಳಲಾಗಿತ್ತು, ಕೆಲ ಕಾರಣಗಳಿಂದ ಇಂದು ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭಿಸಿದ್ದೇವೆ ಎಂದರು.

ಇನ್ನೂ ಗೃಹ ಜ್ಯೋತಿ ನಂತರ 'ಗೃಹ ಲಕ್ಷ್ಮಿ' ಯೋಜನೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಿದ್ದೇವೆ. ಸಾಫ್ಟವೇರ್, ಆಪ್ ರೆಡಿ ಮಾಡಲಾಗುತ್ತಿದೆ. ಈ ಸಂಬಂಧ ವಿಳಂಬವಾಗಿದೆ. ಈಗಾಗಲೇ ಜಾಹೀರಾತು ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಯಿತು. 'ಗೃಹ ಲಕ್ಷ್ಮೀ' ಅಪ್ಲಿಕೇಶನ್ ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ.
'ಗೃಹ ಲಕ್ಷ್ಮೀ' ಯೋಜನೆ: ಸಿಬ್ಬಂದಿ ನೇಮಕ
'ಗೃಹ ಲಕ್ಷ್ಮೀ' ಯೋಜನೆ ಸಂಬಂಧ ಪ್ರತಿ ಬೂತ್ ಮಟ್ಟದಲ್ಲಿ ಮಹಿಳೆ ಸೇರಿದಂತೆ ಒಟ್ಟು 4 ಮಂದಿ ನೇಮಕ ಮಾಡಲಾಗಿದೆ. ರಾಜ್ಯಾದ್ಯಂತ ಸುಮಾರು 1,13 ಲಕ್ಷ ಕುಟುಂಬದ ಯನಿಮಾನಿಯರು ಯೋಜನೆ ಲಾಭ ಪಡೆಯಲಿದ್ದಾರೆ. ಅವರೆಲ್ಲರ ಖಾತೆಗೂ ಸರ್ಕಾರವು ಮಾಸಿಕ 2000 ರೂ. ಜಮೆ ಮಾಡಲಿದೆ.
ಗೃಹ ಲಕ್ಷ್ಮಿ ಯೋಜನೆ ವಿಚಾರವಾಗಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಸೂಕ್ಷ್ಮವಾಗಿ ಸಾಪ್ಟವೇರ್ ಸಿದ್ದಪಡಿಸುತ್ತಿದ್ದೇವೆ. ಆದಷ್ಟು ಶೀಘ್ರವೇ ಅದನ್ನು ಬಿಡುಗಡೆ ಮಾಡಿ, ಅರ್ಜಿ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಮೊದಲು ಜಾರಿಯಾದ 'ಶಕ್ತಿ ಯೋಜನೆ'ಯಿಂದ ಮಹಿಳೆಯರು ಪುಣ್ಯಕ್ಷೇತ್ರಗಳಿಗೆ ತೆರಳುತ್ತಿದ್ದಾರೆ. ಬಸ್ ಗಳು ರಷ್ ಆಗಿವೆ. ''ಮಹಿಳೆಯರು ಕೇವಲ ಮನೆಯಲ್ಲಿ ಕೆಲಸ ಮಾಡಲು, ಸಂಸಾರ ಮಾಡಿ ಮಕ್ಕಳು ಹೆರಲು ಮಾತ್ರ ಸೀಮಿತವಾಗುವ ಕಾಲ ಈಗಿಲ್ಲ. ಅವರು ಸಹ ಎಲ್ಲರಂತೆ ಬದುಕು ನಡೆಸಬೇಕು. ಮಹಿಳೆಯರು ನೆಮ್ಮದಿಯಿಂದ ಜೀವನ ಮಾಡಬೇಕೆಂಬುದು ಸಿದ್ದರಾಮಯ್ಯ ಅವರ ಸರ್ಕಾರದ ಉದ್ದೇಶವಾಗಿದೆ.
ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣ ಮಾಡಿ ಮಹಿಳೆಯರು ರಾಜ್ಯದ ಪುಣ್ಯ ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗಿ, ಎಲ್ಲರೂ ಪುನೀತರಾಗಲಿ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿ ಎಂದು ನಾನು ಸಹ ಕೇಳಿಕೊಳ್ಳುವೆ ಎಂದರು.
ಅಕ್ಕಿ ವಿತರಣೆಯಲ್ಲಿ ಕೇಂದ್ರದಿಂದ ರಾಜಕೀಯ
ಕೇಂದ್ರದಿಂದ ರಾಜ್ಯ ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಇದರಲ್ಲೂ ಸಹ ರಾಜಕಾರಣ ಮಾಡುತ್ತಿದೆ. FC ಅಧಿಕಾರಿಗಳು ಅಕ್ಕಿ ಕೊಡುವುದಾಗಿ ಹೇಳಿದ್ದರು. ನಂತರ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ.
ರಾಜ್ಯದಲ್ಲಿ ಬಡವರಿಗೆ ತಲಾ 10 ಕೇಜಿ ಅಕ್ಕಿ ವಿತರಣೆಗೆ ಅಕ್ಕಿ ತರುವ ಬಗ್ಗೆ ಕಾಂಗ್ರೆಸ್ ಸರ್ಕಾರವು ಜಾರ್ಖಂಡ್, ತೆಲಂಗಾಣ, ಪಂಜಾಬ್ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸುತ್ತಿದೆ. ಈ ಬಗ್ಗೆ ಆಹಾರ ಇಲಾಖೆ ಸಚಿವ ಮಾಹಿತಿ ನೀಡುತ್ತಾರೆ ಎಂದು ಹೇಳಿದರು.












Click it and Unblock the Notifications