ರಾಜ್ಯ ಸಚಿವ ಸಂಪುಟ ಸಭೆಯ ನಿರ್ಣಯಗಳು
ಬೆಂಗಳೂರು, ಆ.7: 2011 ನೇ ಸಾಲಿನ ಗೆಜೆಟೆಡ್ ಪ್ರೋಬೇಷನ್‌ರುಗಳ ನೇಮಕಾತಿ ಅಂತಿಮ ಆಯ್ಕೆ ಪಟ್ಟಿ ರದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1298 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ವಿಶೇಷ ನೇಮಕಾತಿಗೆ ಒಪ್ಪಿಗೆ ಸೇರಿದಂತೆ ಹಲವಾರು ತೀರ್ಮಾನಗಳನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಟಿ.ಬಿ. ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಸಂಪುಟ ಸಭೆಯ ವಿವರಗಳನ್ನು ತಿಳಿಸಿದರು.[ಕೆಪಿಎಸ್‌ಸಿ ನೇಮಕಾತಿ ರದ್ದು, ಸಿಡಿದೆದ್ದ ಅಭ್ಯರ್ಥಿಗಳು]

*2011 ನೇ ಸಾಲಿನ ಗೆಜೆಟೆಡ್ ಪ್ರೋಬೇಷನ್‌ರುಗಳ ನೇಮಕಾತಿ ಅಂತಿಮ ಆಯ್ಕೆ ಪಟ್ಟಿಯನ್ನು ರದ್ದು ಪಡಿಸಲು ತೀರ್ಮಾನ
*2014-15 ನೇ ಬಜೆಟ್‌ನಲ್ಲಿ ಘೋಷಣೆಯಾದಂತೆ ರಾಜ್ಯದ ಕುಶಲಕರ್ಮಿಗಳಿಗೆ ರಾಜ್ಯಾದ್ಯಂತ 1 ಸಾವಿರ ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ.
*ಮೈಸೂರು ಸಕ್ಕರೆ ಕಾರ್ಖಾನೆ ನಿಯಮಿತ ಇದರ 30 ಮೆಟ್ರಿಕ್ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು 82 ಕೋಟಿ ರೂ. ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಪುನರ್ ರಚಿಸಲು ಅಸ್ತು.
*ಜ್ಯೋತಿ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆಗೆ ಒಪ್ಪಿಗೆ. ಸುಮಾರು 6 ಲಕ್ಷ ಜನರಿಗೆ ಇದರ ಅನುಕೂಲ.
*ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1298 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ವಿಶೇಷ ನೇಮಕಾತಿಗೆ ಒಪ್ಪಿಗೆ.
*ನರಗುಂದ, ಚಳ್ಳಕೆರೆ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಗ್ ಕಾಲೇಜು ಪ್ರಾರಂಭಿಸಲು ತೀರ್ಮಾನ
*ಬೆಂಗಳೂರಿನ ಹೆಣ್ಣೂರು ಕೆರೆ ಪ್ರದೇಶವನ್ನು ಸಸ್ಯೋಧ್ಯಾನವನ್ನಾಗಿಸಲು ಹಾಗೂ ಅದರ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ
*ವನ್ಯಜೀವಿಗಳ ಸಂಘರ್ಷದಿಂದಾಗಿ ದನಕರುಗಳು, ಸಾಕು ಪ್ರಾಣಿಗಳು, ಮೃತಪಟ್ಟಲ್ಲಿ ಹಾಗೂ ಬೆಳೆಹಾನಿ ಉಂಟಾದಲ್ಲಿ ಪರಿಹಾರ ಧನವನ್ನು ಹೆಚ್ಚಿಸಲು ತೀರ್ಮಾನ. ದನ, ಎಮ್ಮೆ ಸತ್ತರೆ 10 ಸಾವಿರ ರೂ. ಕುರಿಗಳು ಸತ್ತಲ್ಲಿ 5ಸಾವಿರ ರೂ. ಹಾಗೂ ಬೆಳೆಹಾನಿಯಾದಲ್ಲಿ 1 ಲಕ್ಷ ರೂ. ವರೆಗೆ ಪರಿಹಾರ ನೀಡಲು ಸಚಿವ ಸಂಪುಟದ ಒಪ್ಪಿಗೆ.
*ಹಿಮೋಫಿಲಿಯಾ, ಕೆನಿಮಿಯಾ ಹಾಗೂ ಎಮಿನೋಡಿಫಿಶಿಯೆನ್ಸಿ ರೋಗಗಳನ್ನು ಗುರುತಿಸಿ ಔಷಧಿ ನೀಡಲು ಸಚಿವ ಸಂಪುಟದ ಒಪ್ಪಿಗೆ. 10 ಕೋಟಿ ರೂ.ಮೀಸಲು.
*ಸುಮಾರು 37.50 ಕೋಟಿ ರೂ. ವೆಚ್ಚದಲ್ಲಿ ಮೈಸೂರು ನಗರದ ಕನ್ನೇಗೌಡನ ಕೊಪ್ಪಲಿನಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡಗಳ 2, 3, ಹಾಗೂ 4ನೇ ಮಹಡಿ ಕಟ್ಟಡ ಕಟ್ಟಲು ಸಂಪುಟದ ತೀರ್ಮಾನ
*ಜಲಸಂಪನ್ಮೂಲ ಇಲಾಖೆಯಲ್ಲಿ ಭೂಸ್ವಾಧೀನ ಮತ್ತು ಅರಣ್ಯಕೋಶ ಪ್ರಾರಂಭಿಸಲು ಒಪ್ಪಿಗೆ.
*ರಾಜ್ಯದಲ್ಲಿ ತಾಲ್ಲೂಕು ಕಚೇರಿಗಳಿಗೆ ಸೌರಶಕ್ತಿ, ಅಳವಡಿಸಿ ವಿದ್ಯುತ್ ನೀಡಲು ಸಚಿವ ಸಂಪುಟದ ಅಸ್ತು
*ನಮ್ಮ ಗ್ರಾಮ - ನಮ್ಮ ರಸ್ತೆ ಯೋಜನೆಯ 34.72ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಸಂಪುಟದ ಒಪ್ಪಿಗೆ.
*ಪ್ರತಿ ಮತ ಕ್ಷೇತ್ರಗಳ 20 ಕಿಲೋ ಮೀಟರ್ ರಸ್ತೆ ನಿರ್ಮಾಣ. ರೂ. 266.65 ಕೋಟಿ ಅಂದಾಜಿನಲ್ಲಿ 3715 ಕಿ.ಮೀ ರಸ್ತೆ ನಿರ್ಮಾಣ.
*2014-15 ನೇ ಸಾಲಿಗೆ ಭಾಗ್ಯಲಕ್ಷ್ಮಿ ಯೋಜನೆ ಮುಂದುವರಿಸಲು ಸಚಿವ ಸಂಪುಟದ ಒಪ್ಪಿಗೆ.












Click it and Unblock the Notifications