ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಎಸ್‌ಸಿ ನೇಮಕಾತಿ ರದ್ದು, ಸಿಡಿದೆದ್ದ ಅಭ್ಯರ್ಥಿಗಳು

|
Google Oneindia Kannada News

ಬೆಂಗಳೂರು, ಆ.7 : ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ. 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ರದ್ದುಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ವಿರೋಧಿಸಿ ಅಭ್ಯರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ರದ್ದುಪಡಿಸಿ ಮರು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಕೆಲವರು ಸ್ವಾಗತಿಸಿದ್ದರೆ, ಕೆಲವರು ವಿರೋಧಿಸಿದ್ದಾರೆ.

KPSC

ನಗರದ ಫ್ರೀಡಂ ಪಾರ್ಕ್ ನಲ್ಲಿ ನೇಮಕಾತಿಯನ್ನು ರದ್ದುಗೊಳಿಸಬೇಡಿ ಎಂದು ನೂರಾರು ಅಭ್ಯರ್ಥಿಗಳು 22 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ತೀರ್ಮಾನ ಹೊರಬಿದ್ದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. [ಕೆಪಿಎಸ್ ಸಿ ನೇಮಕ: ಪರ ವಿರೋಧ ಪ್ರತಿಭಟನೆ]

ವಿವಾದವೇನು : ಹಣ ನೀಡಿದರೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುತ್ತೇವೆ ಎಂದು ಮೂವರು ಅಧಿಕಾರಿಗಳು ಲಂಚ ಕೇಳುವುದು ಖಾಸಗಿ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿತ್ತು. ತಕ್ಷಣ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಿತ್ತು. ಉಭಯ ಸದನದಲ್ಲಿಯೂ ಕೆಪಿಎಸ್‌ಸಿ ಹಗರಣ ಭಾರೀ ಸದ್ದು ಮಾಡಿತ್ತು.[ಕೆಪಿಎಸ್ ಸಿ ಅಕ್ರಮವೇನು?]

ಕೆಪಿಎಸ್‌ಸಿ ಸದಸ್ಯರೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಆಯ್ಕೆಗಾಗಿ ಲಕ್ಷಾಂತರ ರುಪಾಯಿ ಅಪೇಕ್ಷಿಸುತ್ತಿದ್ದಾರೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದರು. ಈ ಬಗ್ಗೆ ಸರಣಿ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ಸರ್ಕಾರ ಅಕ್ರಮದ ತನಿಖೆಯನ್ನು ಸಿಐಡಿ ಹೆಗಲಿಗೆ ವಹಿಸಿತ್ತು.

ಸದ್ಯ 2011ರ ಪರೀಕ್ಷೆಯಲ್ಲಿ ಆಯ್ಕೆಯಾದ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ಸರ್ಕಾರ ರದ್ದುಗೊಳಿಸಲಿ ತೀರ್ಮಾನ ಕೈಗೊಂಡಿದೆ. ಆದರೆ, ಅಕ್ರಮದಲ್ಲಿ ಏಳು ಅಭ್ಯರ್ಥಿಗಳು ಮಾತ್ರ ಭಾಗಿಯಾಗಿದ್ದಾರೆ. ಇದಕ್ಕಾಗಿ ಉಳಿದ ಅಭ್ಯರ್ಥಿಗಳ ಆಯ್ಕೆಯನ್ನು ಏಕೆ ರದ್ದುಗೊಳಿಸಬೇಕು ಎಂದು ಪ್ರಶ್ನಿಸಿರುವು ಅಭ್ಯರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸಿಬಿಐ ತನಿಖೆಗೆ ವಹಿಸಿ : 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ರದ್ದುಗೊಳಿಸಬಾರದು ಎಂದು ಪ್ರತಿಭಟನೆ ನಡೆಸುತ್ತಿರುವ ಅಭ್ಯರ್ಥಿಗಳು ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ನೇಮಕಾತಿ ರದ್ದುಗೊಳಿಸಿ ಸಿದ್ದರಾಮಯ್ಯ ಸರ್ಕಾರ ನಮಗೆ ಅನ್ಯಾಯ ಮಾಡಿದೆ. ನಮ್ಮ ಮುಂದಿನ ಭವಿಷ್ಯ ಕತ್ತಲಾಗಿದೆ ಎಂದು ಅಭ್ಯರ್ಥಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.

ಸಿ.ಎಸ್.ದ್ವಾರಕಾನಾಥ್ ಹೇಳುವುದೇನು : ಅಭ್ಯರ್ಥಿಗಳ ಪರ ವಕೀಲರಾದ ಸಿ.ಎಸ್.ದ್ವಾರಕಾನಾಥ್ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿದ ಅಭ್ಯರ್ಥಿಗಳ ಮನವಿಯನ್ನು ಆಲಿಸಿದರು. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಬಡವರು, ದಲಿತರು ಎಲ್ಲರೂ ಸೇರಿದ್ದಾರೆ. ಕೆಲವು ಅಭ್ಯರ್ಥಿಗಳು ಮಾಡಿದ ತಪ್ಪಿಗೆ ಎಲ್ಲಾ ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಪಡಿಸಿರುವುದು ಸರಿಯಲ್ಲ ಎಂದು ದ್ವಾರಕಾನಾಥ್ ಹೇಳಿದ್ದಾರೆ.

English summary
The Karnataka govt on Thursday rejected the final list announced by the Karnataka Public Service Commission (KPSC) on March 21 for the 362 posts of gazetted probationer, Group A and B, belonging to the 2011 batch. Decision was taken in the cabinet meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X