SSLC ಪಾಸ್: ಅಂಕಗಳಾಚೆಗಿನ ಧೈರ್ಯ - ತಂದೆಯ ನಂಬಿಕೆಗೆ ಸಿಕ್ಕ ಗೆಲುವು, ಸ್ಫೂರ್ತಿದಾಯಕ ಸಾಧನೆ
SSLC ಪಾಸ್: ಅಂಕಗಳಾಚೆಗಿನ ಧೈರ್ಯ - ತಂದೆಯ ನಂಬಿಕೆಗೆ ಸಿಕ್ಕ ಗೆಲುವು, ಸ್ಫೂರ್ತಿದಾಯಕ ಸಾಧನೆಯ ಬಗ್ಗೆ ಅಲೀಲ್ ಅಕ್ಬರ್ ಅವರ ಬರಹ ಇಲ್ಲಿದೆ.
ನೆನ್ನೆ ಪ್ರಕಟವಾದ ಎಸ್.ಎಸ್.ಎಲ್.ಸಿ ಫಲಿತಾಂಶಗಳ ನಂತರ ಎಲ್ಲೆಡೆ ಒಂದೇ ಚರ್ಚೆ "ಎಷ್ಟು ಅಂಕ?", "ಎಷ್ಟು ಪರ್ಸೆಂಟೇಜ್?" 625ಕ್ಕೆ 625 ಅಂಕ ಗಳಿಸಿದವರ ಬಗ್ಗೆ ಹೆಮ್ಮೆಯ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಅಂಕಗಳ ಅಬ್ಬರದಲ್ಲಿ ನಾವು ಮರೆಯುತ್ತಿರುವ ಒಂದು ಸತ್ಯವಿದೆ. ಪ್ರತಿ ಮಗುವಿನ ಹಿಂದೆ ಒಂದು ಕಥೆ ಇರುತ್ತದೆ... ಕೆಲವು ಕಥೆಗಳು ಅಂಕಗಳಿಂದ ಅಳೆಯಲಾಗದಷ್ಟು ಆಳವಾಗಿರುತ್ತದೆ. ಅಂತಹದ್ದೇ ಒಂದು ಕಥೆ; ಹಿರಿಯ ಪತ್ರಕರ್ತ ಮಲ್ನಾಡ್ ಮೆಹಬೂಬ್ ಅವರ ಮಗ ಸುಲ್ತಾನ್ ರಝನದು.

ಸುಲ್ತಾನ್ ರಝನಿಗೆ ಜೀವನ ಸುಲಭವಾಗಿರಲಿಲ್ಲ. ಮಾತನಾಡಲು ಸಾಧ್ಯವಿಲ್ಲ ... ಕಿವಿ ಕೇಳುವುದಿಲ್ಲ... ಕಣ್ಣುಗಳ ದೃಷ್ಟಿಯೂ ಅಪೂರ್ಣ. ತನ್ನದೇ ಮೌನದ ಲೋಕದಲ್ಲಿ ಬದುಕುತ್ತಿರುವ ಈ ಬಾಲಕನಿಗೆ ಎಸ್.ಎಸ್.ಎಲ್.ಸಿ ಎಂಬುದು ಕೇವಲ ಪರೀಕ್ಷೆಯಲ್ಲ-ಅದು ಒಂದು ಅಸಾಧ್ಯವೆನಿಸುವ ಸವಾಲು. ಆದರೂ, ತಂದೆ ಮಲ್ನಾಡ್ ಮೆಹಬೂಬ್ ಅವರು ಕೈಚೆಲ್ಲಲಿಲ್ಲ. "ನನ್ನ ಮಗ ಪ್ರಯತ್ನಿಸಬೇಕು... ಫಲಿತಾಂಶ ಏನೇ ಇರಲಿ" ಎಂಬ ಒಂದು ನಂಬಿಕೆಯೇ ಅವರ ಶಕ್ತಿ.
ಈ ನಂಬಿಕೆಯನ್ನು ನಿಜಗೊಳಿಸಲು ಅವರು ನಡೆದುದೊಂದು ಕಠಿಣ ಹಾದಿ. ದಾಖಲೆಗಳಿಗಾಗಿ, ಅರ್ಹತೆಯಿಗಾಗಿ ಮೂರು ತಿಂಗಳುಗಳ ಕಾಲ ಸಕಲೇಶಪುರ, ಹಾಸನ, ಮೈಸೂರು ನಡುವೆ ಅಲೆದಾಡಿದರು. ಪ್ರತಿಯೊಂದು ಕಚೇರಿಯಲ್ಲೂ, ಪ್ರತಿಯೊಂದು ಅಡಚಣೆಯಲ್ಲೂ ಅವರು ಎದುರಿಸಿದ್ದು ಕೇವಲ ಸಮಸ್ಯೆಗಳಲ್ಲ. ಅವು ತಂದೆಯ ಹೃದಯವನ್ನು ಪರೀಕ್ಷಿಸಿದ ಕ್ಷಣಗಳು. ಈ ಹಾದಿಯಲ್ಲಿ ಕೌಡಳ್ಳಿ ಗ್ರಾಮದ ರೋಟರಿ ಗಣಪಯ್ಯ ಬುದ್ಧಿಮಂದರ ಶಾಲೆಯ ಶಿಕ್ಷಕರು ಸಹಾಯಹಸ್ತ ನೀಡಿದರು. ಕೊನೆಗೆ ಎಲ್ಲ ಅಡೆತಡೆಗಳನ್ನು ಮೀರಿ ಸುಲ್ತಾನ್ ರಝ ಪರೀಕ್ಷೆಗೆ ಕುಳಿತನು. ಮತ್ತೊಬ್ಬ ಕಿವುಡು - ಮೂಕ ವಿದ್ಯಾರ್ಥಿಯ ಸಹಾಯದಿಂದ ಅವನು ಉತ್ತರಪತ್ರಿಕೆ ತುಂಬಿದನು. ಫಲಿತಾಂಶದ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ.
ಪರೀಕ್ಷೆ ಬರೆದಿದ್ದೇ ಅವರಿಗೊಂದು ಗೆಲುವು. ಆದರೆ, ಜೀವನ ಕೆಲವೊಮ್ಮೆ ದೊಡ್ಡ ಉತ್ತರಗಳನ್ನು ಕೊಡುತ್ತದೆ. ಸುಲ್ತಾನ್ ರಝ ತೇರ್ಗಡೆಯಾದನು. ಸಾಮಾನ್ಯವಾಗಿ ಯಾರೊಂದಿಗೂ ಬೆರೆತು ಮಾತನಾಡದ, ತನ್ನದೇ ಲೋಕದಲ್ಲಿ ಬದುಕುವ ಈ ಬಾಲಕನ ಗೆಲುವು; ಇದು ಕೇವಲ ಪಾಸ್ ಆಗಿರುವ ಸುದ್ದಿ ಅಲ್ಲ. ಇದು ಅಸಾಧ್ಯವೆನಿಸಿದ ಕನಸಿನ ಸಾಕಾರ. ಇದು ತಂದೆಯ ನಂಬಿಕೆಯ ಗೆಲುವು. ಇದು ಧೈರ್ಯದ ಗೆಲುವು. ಇಂದು ಅಂಕಗಳನ್ನು ಹೋಲಿಸುವ ಸಮಾಜಕ್ಕೆ ಈ ಕಥೆ ಒಂದು ನಿಶ್ಶಬ್ದ ಪಾಠ ಹೇಳುತ್ತದೆ.
"ಜೀವನದಲ್ಲಿ ಎಲ್ಲ ಗೆಲುವುಗಳು ಶೇಕಡಾವಾರಿನಲ್ಲಿ ಅಳೆಯಲಾಗುವುದಿಲ್ಲ." ಇಂತಹ ಮಗನನ್ನು ಹೋರಾಟದ ದಾರಿಗೆ ನಡೆಸಿದ ಮಲ್ನಾಡ್ ಮೆಹಬೂಬ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅವರ ಕಣ್ಣೀರು, ಅವರ ಪರಿಶ್ರಮ - ಇವೆಲ್ಲವೂ ಇಂದು ಸಂತೋಷದ ರೂಪದಲ್ಲಿ ಅರಳಿವೆ. ಸುಲ್ತಾನ್ ರಝನ ಸಾಧನೆ. ಇದು ಒಂದು ಫಲಿತಾಂಶವಲ್ಲ. ಇದು ಹೃದಯಗಳನ್ನು ತಟ್ಟುವ ಒಂದು ಪ್ರೇರಣೆಯ ಕಥೆ. ಹತ್ತಿರದಿಂದ ನೋಡಿದವನು.
ಬರಹ: ಅಲೀಲ್ ಅಕ್ಬರ್












Click it and Unblock the Notifications