SSLC Exam 2026: ಮಾದರಿ ಪ್ರಶ್ನೆ ಪತ್ರಿಕೆ, ಕೀ-ಉತ್ತರಗಳು ಬಿಡುಗಡೆ: ವಿದ್ಯಾರ್ಥಿಗಳ ತಯಾರಿ ಹೀಗಿರಲಿ
ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ 2026 (Karnataka SSLC Exam 2026) ಪರೀಕ್ಷೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಈ ನಡುವೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ಅಧಿಕೃತ ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಗಳು-2026 ಬಿಡುಗಡೆ ಮಾಡಿದೆ. ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆಗಳು, ಕೀ ಉತ್ತರಗಳು ಸೆಟ್‌ಗಳಲ್ಲಿ ಪಿಡಿಎಫ್ ಮಾದರಿಯಲ್ಲಿ ಲಭ್ಯವಿವೆ. ಕರ್ನಾಟಕ ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆ ಎದುರಿಸಲು, ಸೂಕ್ತ ತಯಾರಿ ನಡೆಸಲು ಇವುಗಳು ಸಹಾಯ ಮಾಡುತ್ತವೆ.
ಪರಿಷ್ಕೃತ ಪರೀಕ್ಷಾ ಮಾದರಿಯ ಪ್ರಕಾರ ವಿನ್ಯಾಸಗೊಳಿಸಲಾದ ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಭಾಷೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಎಲ್ಲಾ ವಿಷಯವಾರು ಮಾದರಿ ಪತ್ರಿಕೆಗಳು ಮತ್ತು ಉತ್ತರ ಕೀ ಉತ್ತರಗಳು ಲಭ್ಯ ಇವೆ. ಅವುಗಳನ್ನು ವಿದ್ಯಾರ್ಥಿಗಳು/ಪೋಷಕರು ಈ ಅಧಿಕೃತ http://www.kseab.karnataka.gov.in/ ವೆಬ್‌ಸೈಟ್ ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

SSLC ಮಾದರಿ ಪ್ರಶ್ನೆ ಪತ್ರಿಕೆಗಳು ಎಂದರೇನು?
2025-26 ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಲು ಅನುಕೂಲವಾಲೆಂದು ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು KSEAB ಬಿಡುಗಡೆ ಮಾಡಿದೆ. ಒಂದೊಂದು ವಿಷಯಕ್ಕೂ ಹಲವಾರು ಸೆಟ್‌ಗಳಲ್ಲಿ ಲಭ್ಯವಿವೆ.
ವಿದ್ಯಾರ್ಥಿಗಳು ಅಧಿಕೃತ ಪರೀಕ್ಷಾ ಮಾದರಿ ಮತ್ತು ಅಂಕಗಳನ್ನು ಅರ್ಥಮಾಡಿಕೊಳ್ಳಬೇಕು. ಅಂತಿಮ ಪರೀಕ್ಷೆಯ ಮೊದಲು ನಿಜವಾದ ಬೋರ್ಡ್-ಶೈಲಿಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಮುಖ್ಯವಾಗಿ ಮಕ್ಕಳು ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡಲು ಕಲಿಯಬೇಕು. ಅದರತ್ತ ಗಮನ ಹರಿಸಬೇಕು. ಮಾದರಿ ಪ್ರಶ್ನೆ ಪತ್ರಿಕೆ, ಉತ್ತರಗಳನ್ನು ಡೌನ್‌ಲೋಡ್ ಮಾಡಿಕೊಂಡು ಸಿದ್ಧತೆ ಈಗಿನಿಂದ ಆರಂಭಿಸಬೇಕು.
ಕನ್ನಡ, ಇಂಗ್ಲಿಷ್‌ನಲ್ಲೂ ಲಭ್ಯ
ವಿಷಯವಾರು ಎಸ್‌ಎಸ್‌ಎಲ್‌ಸಿ 2026 ಮಾದರಿ ಪ್ರಶ್ನೆ ಪತ್ರಿಕೆಗಳು, ಕೀ ಉತ್ತರಗಳನ್ನು ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಮಕ್ಕಳಿಗೆ ಸಿಗುವಂತೆ ಮಾಡಲಾಗಿದೆ. ಕನ್ನಡ, ಇಂಗ್ಲಿಷ್, ವಿಜ್ಞಾನ, ಇತಿಹಾಸ, ಸಮಾಜ ವಿಜ್ಞಾನ, ಗಣಿತ ಹಾಗೂ ಇತರ ಪ್ರಥಮ ಭಾಷೆಗಳಾದ ಕೊಂಕಣಿ, ಉರ್ದು, ಮರಾಠಿ ಒಳಗೊಂಡಂತೆ 10ನೇ ತರಗತಿಯಲ್ಲಿ ಎಲ್ಲ ವಿಷಯಗಳ ಮೇಲೂ ಮಾದರಿ ಪ್ರಶ್ನೆ ಪತ್ರಿಕೆಗಳು ಲಭ್ಯ ಇವೆ. ಇವುಗಳ ಪ್ರಯೋಜನ ಪಡೆದರೆ ಹೆಚ್ಚು ಅಂಕ ಗಳಿಸಬಹುದಾಗಿದೆ.
ಮಾದರಿ ಪ್ರಶ್ನೆ ಪತ್ರಿಕೆ ಡೌನ್‌ಲೋಡ್ ಹೇಗೆ
ಎಸ್‌ಎಸ್‌ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆಗಳು-2026 ಸೌನ್‌ಲೋಡ್ ಮಾಡಲು ಈ ಕೆಳಗಿನ ಸರಳ ಕ್ರಮಗಳನ್ನು ಅನುಸರಿಸಬೇಕು. ಮೊದಲು ವಿದ್ಯಾರ್ಥಿಗಳು ಅಥವಾ ಪೋಷಕರು ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಬೇಕು. ಅಲ್ಲಿ ಇತ್ತೀಚಿನ ಸುದ್ದಿ ವಿಭಾಗದಲ್ಲಿ 2025-26 SSLC ಪರೀಕ್ಷೆಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಉತ್ತರಗಳ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಬೇಕಾದ ಭಾಷೆ ಕನ್ನಡ ಇಲ್ಲವೇ ಇಂಗ್ಲಿಷ್ ಆಯ್ದುಕೊಳ್ಳಬೇಕು.
ಅಲ್ಲಿ ಕಾಣಿಸುವ ಎಲ್ಲಾ ಸೆಟ್‌ಗಳು ಮತ್ತು ಮಾದರಿ ಉತ್ತರಗಳನ್ನು ಡೌನ್‌ಲೋಡ್ PDF ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು. ಆಗ ಒಂದೊಂದಾಗೆ ಡೌನ್‌ಲೋಡ್ ಆಗುತ್ತವೆ.

ವಿದ್ಯಾರ್ಥಿಗಳು ಅಭ್ಯಾಸ ಹೇಗೆ ಮಾಡಬೇಕು?
ವಿದ್ಯಾರ್ಥಿಗಳು ಈಗಿನಿಂದಲೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಗೊತ್ತಿಲ್ಲದ ಉತ್ತರಗಳನ್ನು ಕೀ ಉತ್ತರ ನೋಡುವ ಮೊದಲು ಬಿಡಿಸಲು, ಉತ್ತರ ಕಂಡು ಹಿಡಿಯಲು ಪ್ರಯತ್ನಿಸಬೇಕು. ಇದರಿಂದ ವಿಶ್ವಾಸ ಹೆಚ್ಚಾಗುತ್ತದೆ. ಮೇಲಿಂದ ಮೇಲೆ ಈ ಅಭ್ಯಾಸ ಮಾಡಿದರೆ ಉತ್ತರಗಳು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ.
ನಿರಂತರ ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಸಮಯವನ್ನು ಸೂಕ್ತವಾಗಿ ನಿರ್ವಹಿಸಲು ಸಹಾಯವಾಗುತ್ತದೆ. ಮಾದರಿ ಉತ್ತರಗಳೊಂದಿಗೆ ನೀವು ಕಂಡು ಹಿಡಿದು ಉತ್ತರ ಹೋಲಿಸಿದಾಗ ನಿಮ್ಮ ಬಲ, ಸಾಮರ್ಥ್ಯ ಹಾಗೂ ದೌರ್ಬಲ್ಯ ಏನೆಂಬುದು ಗೊತ್ತಾಗುತ್ತದೆ. ತಪ್ಪು ಎಲ್ಲಿ ಆಗುತ್ತಿದೆ ಎಂದು ಪತ್ತೆ ಮಾಡಿ ಅವನ್ನು ಸರಿ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳ ಅಭ್ಯಾಸ ತಯಾರಿಗೆ ಸಲಹೆಗಳು
1. ವಿದ್ಯಾರ್ಥಿಗಳು ಪಠ್ಯಕ್ರಮ ಓದಿಕೊಂಡು ನಂತರ ಮಾದರಿ ಪತ್ರಿಕೆಗಳ ಅಭ್ಯಾಸ ಆರಂಭಿಸಬೇಕು. ಈ ಕೆಲಸ ನಿತ್ಯ ಬೆಳಗ್ಗೆ ಮಾಡಿದರೆ ಒಳಿತು.
2. ನೀವೇ ಸಮಯ ನಿಗದಿಪಡಿಸಿಕೊಂಡು ಅಭ್ಯಾಸ ಆರಂಭಿಸಬೇಕು. ಪರೀಕ್ಷೆಯಲ್ಲಿ ಕೂತಂತೆಯೇ ಭಾವಿಸಿ ಸರಿಯಾಗಿ ಮತ್ತು ತ್ವರಿತವಾಗಿ ಉತ್ತರಿಸಲು ಪ್ರಯತ್ನಿಸಬೇಕು.
3. ಅಭ್ಯಾಸದ ನಂತರ ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಯಾವಾಗಲೂ ನಿಮ್ಮ ಉತ್ತರಗಳನ್ನು ಅಧಿಕೃತ ಮಾದರಿ ಉತ್ತರಗಳೊಂದಿಗೆ ಹೋಲಿಕೆ ಮಾಡಿಕೊಳ್ಳಬೇಕು.
4. ವಿದ್ಯಾರ್ಥಿಗಳು ಅಭ್ಯಾಸದ ವೇಳೆ ಎಡವುತ್ತಿರುವುದು ಎಲ್ಲಿ ಎಂದು ಪತ್ತೆ ಮಾಡಬೇಕು. ನಿಮ್ಮ ದೌರ್ಬಲ್ಯ ಹಾಗೂ ಕಠಿಣವಾಗುತ್ತಿರುವ ವಿಷಯದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಒಂದಷ್ಟು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಕಾರ್ಯಕ್ಷಮತೆ ಸುಧಾರಿಸತ್ತದೆ. ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಮುಂಬರಲಿರುವ ವಾರ್ಷಿಕ ಪರೀಕ್ಷೆಯನ್ನು ಅಂಜಿಕೆ, ಅಳುಕಿಲ್ಲದೇ, ನಿಗದಿತ ಸಮಯದಲ್ಲಿ ಎದುರಿಸಬಹುದು. ಹೆಚ್ಚು ಅಂಕ ಪಡೆಯಬಹುದಾಗಿದೆ.












Click it and Unblock the Notifications