SSLC: ಶಿಕ್ಷಕರ ಬೇಸಿಗೆ ರಜೆಗೆ ಕತ್ತರಿ, ಶಾಲೆಗೆ ಬರುವಂತೆ ಸೂಚನೆ
ಬೆಂಗಳೂರು, ಮೇ 15: ಲೋಕಸಭೆ ಚುನಾವಣೆ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದ ಶಿಕ್ಷಕರು ಈಗ ಚುನಾವಣೆ ಮುಗಿಸಿ ನಿರಾಳರಾಗಿದ್ದರು. ಕೆಲವು ದಿನ ಬೇಸಿಗೆ ರಜೆಯನ್ನು ಅನುಭವಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಈಗ ಶಾಲೆಗೆ ಹಾಜರಾಗುವ ಅನಿವಾರ್ಯತೆ ಎದುರಾಗಿದೆ.
ಎಸ್ಎಸ್ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಘೋಷಣೆ ಮಾಡಿರುವ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಶಾಲೆಗೆ ಬನ್ನಿ ಎಂದು ಸೂಚಿಸಿದೆ. ಆದ್ದರಿಂದ ಮೇ 29ರ ತನಕ ಶಾಲೆಗಳಿಗೆ ರಜೆ ಇದ್ದರೂ ಸಹ ಶಿಕ್ಷಕರು ಶಾಲೆಗಳಿಗೆ ಮೇ 15ರಿಂದಲೇ ಆಗಮಿಸಬೇಕಿದೆ.

2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಗೈರು ಹಾಜರಾದ ಮತ್ತು ಪೂರ್ಣಗೊಳಿಸಲು ಆಗಿಲ್ಲದ ಹಾಗೂ ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಜೂನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ನಡೆಸಲಾಗುತ್ತದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ಹೆಸರು ನೋಂದಣಿ ಮಾಡಿರುವ ವಿದ್ಯಾರ್ಥಿಗಳಿಗೆ ಮೇ 15 ರಿಂದ ಜೂನ್ 5ರ ತನಕ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶನ ನೀಡಿದೆ. ಇದರಿಂದ ಶಿಕ್ಷಕರು ಶಾಲೆಗೆ ಬರಬೇಕಿದೆ.
ಶಿಕ್ಷಕರ ಆಕ್ರೋಶ: ಮೇ 29ರ ತನಕ ಶಾಲೆಗೆ ಬೇಸಿಗೆ ರಜೆ ಇದ್ದರೂ ಸಹ ಮೇ 15ರಿಂದ ಶಾಲೆಗೆ ಆಗಮಿಸುವಂತೆ ಸೂಚನೆ ನೀಡಿರುವುದಕ್ಕೆ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಈ ಕುರಿತು ಡಿಡಿಪಿಐಗೆ ಮನವಿ ಸಲ್ಲಿಕೆ ಮಾಡಲು ಮುಂದಾಗಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮೇ 15 ರಿಂದ ಜೂನ್ 5ರ ತನಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ನಡೆಸಬೇಕು ಎಂದು ಸೂಚನೆ ಕೊಟ್ಟಿದ್ದಾರೆ, ಇದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಎಸ್‌ಎಸ್ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಆಯಾ ವಿಷಯದ ಶಿಕ್ಷಕರು ಮೇ 15ರಿಂದ ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಬೇಕು ಎಂದು ಶಾಲಾ ಮುಖ್ಯ ಶಿಕ್ಷಕರು ಈಗಾಗಲೇ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.
ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸುವುದನ್ನು ಪರಿಶೀಲಿಸಲು ಪ್ರತಿ ಜಿಲ್ಲಾ ಹಂತದಲ್ಲಿ ವಿದ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗುತ್ತದೆ. ಈ ತಂಡ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿ ವರದಿ ನೀಡಲಿದೆ.
ಶಿಕ್ಷಕರಿಗೆ ಸೇವಾ ನಿಯಮಗಳ ಅನ್ವಯ ಬೇಸಿಗೆಯ ರಜೆಯನ್ನು ನೀಡಲಾಗಿದೆ. ಮೇ 29ರ ತನಕ ರಜೆ ಇದೆ. ಆದರೆ ಶಿಕ್ಷಕರು ಶಾಲೆಗಳಿಗೆ ಮೇ 15ರಿಂದಲೇ ಆಗಮಿಸುವಂತೆ ಸೂಚನೆ ನೀಡಿರುವುದು ಎಷ್ಟು ಸರಿ? ಎಂದು ಶಿಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಈಗಾಗಲೇ 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ದಿನಾಂಕ 7/6/2024 ರಿಂದ 14/6/2024ರ ತನಕ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿ, ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿಯೂ ಪ್ರಕಟಿಸಲಾಗಿದೆ. ವೇಳಾಪಟ್ಟಿಯನ್ನು ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆಯೂ ತಿಳಿಸಿದೆ.
ಫಲಿತಾಂಶ ಉತ್ತಮಪಡಿಸಿಕೊಳ್ಳಲು ಮತ್ತು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಬರೆಯಬಹುದು. ಅದಕ್ಕಾಗಿ ಒಂದು ವಿಷಯಕ್ಕೆ 407 ರೂ., ಎರಡು ವಿಷಯಕ್ಕೆ 507 ರೂ., ಮೂರು ಅಥವ ಮೂರಕ್ಕಿಂತ ಮೇಲ್ಪಟ್ಟು ರೂ. 682 ಪರೀಕ್ಷೆ ಶುಲ್ಕವನ್ನು ಪಾವತಿ ಮಾಡಬೇಕಿದೆ.












Click it and Unblock the Notifications