SS Mallikarjun Profile: ಶಾಮನೂರು ಶಿವಶಂಕರಪ್ಪ ಪುತ್ರನಿಗೆ ಒಲಿದ ಸಚಿವ ಪಟ್ಟ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರ್ಜರಿ ಗೆಲುವು ಸಾಧಿಸಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರರಾಗಿರುವ ಮಲ್ಲಿಕಾರ್ಜುನ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.
ಲಿಂಗಾಯತ ಸಮುದಾಯದ ಮುಖಂಡರಾಗಿರುವ ಎಸ್‌ಎಸ್ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆ ಮೊದಲಿನಿಂದಲೂ ಇತ್ತಾದರೂ ಈಗ ಅಧಿಕೃತವಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಮಗನಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್‌ಎಸ್ ಮಲ್ಲಿಕಾರ್ಜುನ್ ರಾಜಕೀಯ ಇತಿಹಾಸ
ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರರಾಗಿದ್ದರೂ, ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರು ಅವರ ರಾಜಕೀಯ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರವೀಂದ್ರನಾಥ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು, ಆದರೆ 2018ರಲ್ಲಿ ಅವರು, ಬಿಜೆಪಿಯ ಎಸ್.ಎ.ರವೀಂದ್ರನಾಥ್ ವಿರುದ್ಧ ಕೇವಲ ನಾಲ್ಕೂವರೆ ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಮೂಲಕ ಎರಡನೇ ಬಾರಿ ಶಾಸಕರಾಗುವ ಅವರ ಉದ್ದೇಶ ವ್ಯರ್ಥವಾಗಿತ್ತು.
2023ರಲ್ಲಿ ಇಲ್ಲಿ ಬಿಜೆಪಿ ಲೋಕಿಕೆರೆ ನಾಗರಾಜ್ ಎನ್ನುವವರಿಗೆ ಟಿಕೆಟ್ ಕೊಟ್ಟಿತ್ತು. ಈ ಬಾರಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಸ್‌ಎಸ್ ಮಲ್ಲಿಕಾರ್ಜುನ್ ಭರ್ಜರಿ ಜಯಬೇರಿ ಬಾರಿಸಿದ್ದಾರೆ. ಬಿಜೆಪಿಯ ಲೋಕಿಕೆರೆ ನಾಗರಾಜ್ 69,547 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಮಲ್ಲಿಕಾರ್ಜುನ್ 94,019 ಮತಗಳನ್ನು ಪಡೆದು 24,472 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

152 ಕೋಟಿ ರುಪಾಯಿ ಆಸ್ತಿಯ ಒಡೆಯ
55 ವರ್ಷದ ಎಸ್‌ಎಸ್ ಮಲ್ಲಿಕಾರ್ಜುನ್ ನೂರಾರು ಕೋಟಿ ರುಪಾಯಿ ಆಸ್ತಿಯನ್ನು ಹೊಂದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅವರು ಬರೋಬ್ಬರಿ 152.27 ಕೋಟಿ ರುಪಾಯಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 81.93 ಕೋಟಿ ರೂ. ಚರಾಸ್ತಿ, 70.78 ಕೋಟಿ ರೂ. ಸ್ಥಿರಾಸ್ತಿ ಸೇರಿದ್ದು, 23. 60 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
15.35 ಕೋಟಿ ರೂ. ಮೌಲ್ಯದ ಆಭರಣ, ಬ್ಯಾಂಕ್‌ನಲ್ಲಿ 1.56 ಕೋಟಿ ಠೇವಣಿ, ಬಾಂಡ್, ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ 54.40 ಕೋಟಿ ರೂ. ಹೂಡಿಕೆ, ಅಂಚೆ ಮತ್ತು ವಿಮೆ ಕಂಪನಿಗಳ ಯೋಜನೆಗಳಲ್ಲಿ 4.15 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಮಲ್ಲಿಕಾರ್ಜುನ್ ಹೇಳಿಕೊಂಡಿದ್ದಾರೆ. 6.41 ಕೋಟಿ ರೂ. ಸಾಲವನ್ನು ಬೇರೆಯವರಿಗೆ ನೀಡಿರುವುದಾಗಿ ಮಾಹಿತಿ ನೀಡಿದ್ದರು. ಪತ್ನಿಯ ಬಳಿ 5.88 ಕೋಟಿ ರೂ. ಮೌಲ್ಯದ ಚರಾಸ್ತಿ ಇರುವುದಾಗಿ ತಿಳಿಸಿದ್ದಾರೆ.
226.3 ಎಕರೆ ಕೃಷಿ ಭೂಮಿ
7.56 ಕೋಟಿ ರೂ. ಮೌಲ್ಯದ 226.3 ಎಕರೆ ಕೃಷಿ ಭೂಮಿ, 53.04 ಕೋಟಿ ರೂ. ಮೌಲ್ಯದ 22,14,055.84 ಚದರ ಅಡಿ ಕೃಷಿಯೇತರ ಭೂಮಿ, 9.75 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡ, 9.20 ಕೋಟಿ ರೂ. ಮೌಲ್ಯದ 28,900 ಚದರ ಅಡಿ ವಸತಿ ಕಟ್ಟಡ ಇದೆ ಎಂದು ಘೋಷಿಸಿಕೊಂಡಿದ್ದಾರೆ.












Click it and Unblock the Notifications