ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟ ಏರಿದ ಬೆನ್ನಲ್ಲೇ ಗಾಲಿ ಜನಾರ್ದನ ರೆಡ್ಡಿಗೆ ಗಾಳ: ಗೆಳೆಯ ಶ್ರೀರಾಮುಲು ಹೇಳಿದ್ದೇನು?
ಬಳ್ಳಾರಿ, ನವೆಂಬರ್ 25: ರಾಜ್ಯ ಬಿಜೆಪಿಯಲ್ಲಿ ನೂತನ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಯ್ಕೆಯಾದ ಬೆನ್ನಲ್ಲೇ ಕಮಲ ಪಾಳಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇತ್ತ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಕುರಿತು ಚರ್ಚೆ ನಡೆಯುತ್ತಿದ್ದು, ಸಾಕಷ್ಟು ಬದಲಾವಣೆಗಳಾಗುತ್ತಿವೆ.
ಈ ಕುರಿತು ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ಶ್ರೀರಾಮುಲು ಮಾತನಾಡಿದ ಅವರು, ಬಿಜೆಪಿ ಪಾರ್ಟಿಯನ್ನು ಒಬ್ಬ ರಾಮುಲು ಮಾತ್ರ ಕಟ್ಟಿಲ್ಲ. ರಾಜ್ಯದಲ್ಲಿರುವ ಕೊಟ್ಯಾಂತರ ಕಾರ್ಯಕರ್ತರ ಶ್ರಮದಿಂದ ಇವತ್ತು ಇಷ್ಟು ದೊಡ್ಡ ಪಾರ್ಟಿ ಆಗಿ ಬೆಳೆದಿದೆ. ಇಂತಹ ಸಂಧರ್ಭದಲ್ಲಿ ಯಾರನ್ನೂ ಸೇರಬೇಡ ಎನ್ನಲು ನನಗೆ ಅಧಿಕಾರ ಇಲ್ಲ ಎಂದು ಹೇಳಿದರು.

ನಾನು ಜೀವನದಲ್ಲಿ ಯಾವತ್ತೂ ದ್ವೇಷ ಹಾಗೂ ಅಸೂಹೆ ರಾಜಕಾರಣ ಮಾಡಿಲ್ಲ. ಯಾರೇ ಬಂದರೂ ಪಾರ್ಟಿಗೆ ಅನುಕೂಲ ಆಗಲಿ ಎಂದು ಬಯಸುವೆ. ಯಾರಾದರೂ ಬರುತ್ತಾರೆ ಎಂದರೆ ಬೇಡ ಎನ್ನುವುದಕ್ಕೆ ನಾನು ಯಾರು? ನೂರು ಅಲ್ಲ, ಸಾವಿರ ಜನ ಬಂದ್ರೂ ನಮ್ಮ ಪಾರ್ಟಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸರ್ವಾಧಿಕಾರ ಇದೆ. ಹೀಗಾಗಿ ನನ್ನ ಅಭ್ಯಂತರವಿಲ್ಲ ಎಂದು ಶ್ರೀರಾಮುಲು ಹೇಳಿದರು.
ನಮ್ಮ ಪಾರ್ಟಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ನನ್ನ ವೈಯಕ್ತಿಕ ತೀರ್ಮಾನ, ಅಭಿಪ್ರಾಯ ಇರಲ್ಲ. ಪಾರ್ಟಿ ತೀರ್ಮಾನ ಏನಿರುತ್ತದೆ, ಅದಕ್ಕೆ ನಾವು ಬದ್ದ. ಒಬ್ಬ ಶ್ರೀರಾಮುಲು ಏನು ಮಾಡುವುದಕ್ಕೆ ಆಗಲ್ಲ. ಎಲ್ಲರೂ ಸೇರಿದ್ರೆ ಮತ್ತೆ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧ್ಯ. ಸಣ್ಣಪುಟ್ಟ ವ್ಯತ್ಯಾಸ ಸರಿ ಮಾಡಿ ಪಾರ್ಟಿ ಕಟ್ಟುವ ಕೆಲಸ ನಮ್ಮ ಅಧ್ಯಕ್ಷ ವಿಜಯೇಂದ್ರ ಅವರು ಮಾಡುತ್ತಾರೆ ಎಂದರು.
ಬಿಜೆಪಿ ಜೊತೆಗೆ ನನ್ನ ಸಂಬಂಧ ಮುಗಿದ ಅಧ್ಯಾಯ: ಜನಾರ್ದನ ರೆಡ್ಡಿ
ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ತಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಜನಾರ್ದನ ರೆಡ್ಡಿ ಮಾತನಾಡಿ, ಬಿಜೆಪಿ ಜೊತೆಗೆ ನನ್ನ ಸಂಬಂಧ ನೂರಕ್ಕೆ ನೂರು ಮುಗಿದ ಅಧ್ಯಾಯ. ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಕನಸು ಮನಸಿನಲ್ಲೂ ಯೋಚನೆ ಮಾಡಲ್ಲ. ಕೆಆರ್ಪಿಪಿ ಪಕ್ಷದ ಸ್ಥಾಪಿಸಿದಾಗ ಯಾರೆಲ್ಲಾ ಎಷ್ಟೇ ಪ್ರಯತ್ನಿಸಿದರೂ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸ್ವತಂತ್ರವಾಗಿಯೇ ನಾನು ಮುಂದೆ ಹೋಗುತ್ತೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಯಾರೂ ನನ್ನ ಸಂಪರ್ಕ ಮಾಡಿಲ್ಲ, ನಾನೂ ಯಾರನ್ನೂ ಸಂಪರ್ಕ ಮಾಡಿಲ್ಲ.ನಾನು ಲೋಕಸಭಾ ಚುನಾವಣೆಗೆ ಸ್ಫರ್ಧೆ ಮಾಡುವುದಿಲ್ಲ. ಆದರೆ, ಎಂಟು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಅವರನ್ನು ತಂದೆಯ ಸ್ಥಾನದಲ್ಲಿ ಗೌರವಿಸಿದರೆ, ಶ್ರೀರಾಮುಲು ಅವರನ್ನು ಮಗು ರೂಪದಲ್ಲಿ ನೋಡುತ್ತೇನೆ. ಅವರು ಆಯಾ ಪಕ್ಷದಲ್ಲಿ ಚೆನ್ನಾಗಿರಲಿ ಎಂದು ಬಯಸುತ್ತೇನೆಯೇ ಹೊರತು ಆಹ್ವಾನ ಮಾಡಲ್ಲ ಎಂದು ಹೇಳಿದರು.












Click it and Unblock the Notifications