ಸೋನಿಯಾ ಗಾಂಧಿ ಬೇಕಿದ್ದರೆ ಬಿಜೆಪಿಗೆ ಬರ್ತಾರೆ, ಹುಕ್ಕೇರಿ ಬರಲ್ಲ!
ಬೆಂಗಳೂರು, ನ. 25: ಬೆಳಗಾವಿ ಜಿಲ್ಲೆಯ ನೀರಾವರಿ ಕಾಮಗಾರಿಗಳ ಬಗ್ಗೆ ಚರ್ಚಿಸಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದೆ ಎಂಬ ಕುತೂಹಲಕಾರಿ ಹೇಳಿಕೆಯನ್ನು ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕೋರೆ ಅವರು ಮಾತನಾಡಿದ್ದಾರೆ.
ಯಾವ ರಾಜಕೀಯ ವಿಷಯಗಳ ಬಗ್ಗೆಯೂ ಅವರ ಜೊತೆ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನೇನು ಈಗ ರಾಜಕೀಯ ದಿಂದ ನಿವೃತ್ತಿಯಾಗಿಲ್ಲ. ಪಕ್ಷದವರು ನನಗೆ ಜವಬ್ದಾರಿ ಕೊಡ್ಡರೆ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಪರೋಕ್ಷವಾಗಿ ಬಿಜೆಪಿ ಟಿಕೆಟ್ ಬೇಡಿಕೆಯನ್ನು ಕೋರೆ ಇಟ್ಟಿದ್ದಾರೆ.
ಸೋನಿಯಾ ಗಾಂಧಿ ಬೇಕಿದ್ದರೆ ಬಿಜೆಪಿಗೆ ಬರ್ತಾರೆ: ಕಾಂಗ್ರೆಸ್ ಪಕ್ಷದ ನಾಯಕ ಪ್ರಕಾಶ್ ಹುಕ್ಕೇರಿ ಅವರು ಬಿಜೆಪಿಗೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ ಪ್ರಭಾಕರ್ ಕೋರೆ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬೇಕಿದ್ದರೆ ಬಿಜೆಪಿಗೆ ಬರುತ್ತಾರೆ. ಆದರೆ ಪ್ರಕಾಶ್ ಹುಕ್ಕೇರಿ ಅವರು ಮಾತ್ರ ಎಂದಿಗೂ ಬಿಜೆಪಿಗೆ ಬರೋದಿಲ್ಲ ಎಂದರು. ಜೊತೆಗೆ ರಮೇಶ್ ಜಾರಕಿಹೊಳಿ ಅವರ ಪುತ್ರ ಬೆಳಗಾವಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಷಯ ನನಗೆ ಗೊತ್ತಿಲ್ಲ ಎಂದೂ ಅವರು ಹೇಳಿದ್ದಾರೆ.