ಸಿ.ಎಂ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದ ಸ್ನೇಹಮಯಿ ಕೃಷ್ಣಗೆ ಸಂಕಷ್ಟ ಶುರು...!
ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ದಿಂದ ಬದಲಿ ನಿವೇಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಸಮರ ಸಾರಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣಗೆ ಈಗ ಭಾರೀ ಸಂಕಷ್ಟ ಎದುರಾಗಿದೆ. ಮುಡಾ ಹಗರಣದ ವಿಚಾರ ಕರ್ನಾಟಕದ ಮೈಸೂರಿನಲ್ಲಿ ಪ್ರಾರಂಭವಾಗಿ, ಕರ್ನಾಟಕ ಹಾಗೂ ದೇಶದಾದ್ಯಂತ ಸುದ್ದಿಯಾಗಿದೆ. ಈಗ ಚುನಾವಣೆ ನಡೆಯುತ್ತಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ರಾಷ್ಟ್ರದಾದ್ಯಂತ ಈ ಕೇಸ್ ಭಾರೀ ಹೊಡೆತವನ್ನೇ ಕೊಟ್ಟಿದೆ.
ಇದೀಗ ಸ್ನೇಹಮಯಿ ಕೃಷ್ಣಗೆ ಹೊಸ ಸಂಕಷ್ಟ ಶುರುವಾಗಿದೆ. ಇದೀಗ ಕಾಂಗ್ರೆಸ್‌ನ ನಾಯಕರು ಹಾಗೂ ಕೃಷ್ಣ ನಡುವೆ ವಾಕ್ಸಮರ ನಡೆಯುತ್ತಿದೆ. ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದವರು ನಿಯಮ ಉಲ್ಲಂಘಿಸಿದ್ದಾರೆ ಎಂದು ಕೃಷ್ಣ ಅವರು ಪದೇ ಪದೆ ದೂರಿದ್ದರು. ಈ ಪ್ರಕರಣದಲ್ಲಿ ಹಲವು ನ್ಯೂನ್ಯತೆಗಳಾಗಿವೆ ಎಂದು ಅವರು ಹೇಳಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದ ಸೈಟ್ ಕ್ರಯಪತ್ರದ ಮುದ್ರಾಂಕ ಶುಲ್ಕದ ಬಗ್ಗೆಯೂ ಅವರು ಈಚೆಗೆ ಆಕ್ಷೇಪ ಎತ್ತಿದ್ದರು. ಇದೀಗ ಕೃಷ್ಣ ಮೇಲೆಯೇ ಎಫ್‌ಐಆರ್ ದಾಖಲಾಗಿದೆ.

ಇದೀಗ ಮುಡಾ ಹಗರಣದಲ್ಲಿ ದೂರು ನೀಡಿರುವ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೇಲೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ ನೀಡಿದ್ದ ದೂರಿನ ಮೇಲೆ ಈ ಬೆಳವಣಿಗೆ ಆಗಿದೆ.
ಯಾವ ಕಾರಣಕ್ಕೆ ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಮೇಲೆ ದಿನವೂ ಕೃಷ್ಣ ಒಂದೊಂದು ಆರೋಪವನ್ನು ಮಾಡುತ್ತಿದ್ದಾರೆ. ಅಲ್ಲದೇ ಸಿ.ಎಂ ವಿರುದ್ಧ ಬ್ಲಾಕ್‌ಮೇಲ್ ತಂತ್ರವನ್ನು ಅವರು ಅನುಸರಿಸುತ್ತಿದ್ದಾರೆ. ಇದರ ಭಾಗವಾಗಿಯೇ ಸಿ.ಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಮುಡಾದಿಂದ ಪಡೆಯಲಾಗಿದ್ದ ಸೈಟ್ ಕ್ರಯಪತ್ರದ ಮುದ್ರಾಂಕ ಶುಲ್ಕದ ಬಗ್ಗೆ ಈಚೆಗೆ ಅವರು ಪ್ರಸ್ತಾಪಿಸಿದ್ದು. ಇದು ಕೃಷ್ಣ ಬ್ಲಾಕ್‌ಮೇಲ್ ತಂತ್ರ. ಹೀಗಾಗಿ ಕೃಷ್ಣ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಎಂ.ಲಕ್ಷ್ಮಣ ದೂರು ನೀಡಿದ್ದರು. ಹೀಗಾಗಿ, ದೂರಿನ ಆಧಾರದ ಮೇಲೆ ಕೃಷ್ಣ ವಿರುದ್ಧ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಈ ನಡುವೆ ಅವರು ಲೋಕಾಯುಕ್ತ ತನಿಖೆ ಸಮರ್ಪಕವಾಗಿ ನಡೆಸುತ್ತಿಲ್ಲ ಎಂದು ಸಹ ದೂರಿದ್ದರು. ತನಿಖಾಧಿಕಾರಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿಗೆ ದೂರನ್ನು ನೀಡಿದ್ದು, ತನಿಖಾಧಿಕಾರಿಗಳಿಗೆ ನಿತ್ಯ ಬ್ಲಾಕ್‌ಮೇಲ್ ಹಾಗೂ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ತನಿಖೆಯ ವರದಿಯನ್ನೇ ಇಲ್ಲಿಯ ವರೆಗೆ ನ್ಯಾಯಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿಯೇ ಇಲ್ಲ. ಹೀಗಿರುವಾಗ ತನಿಖೆಯನ್ನು ಸರಿಯಾಗಿ ಮಾಡಿಲ್ಲ ಎಂದು ವಿಚಾರಣೆ ಹಂತದಲ್ಲಿ ಇರುವಾಗಲೇ ಹೇಳಿದರೆ ಹೇಗೆ ಎಂದು ಲಕ್ಷ್ಮಣ ಅವರು ಪ್ರಶ್ನೆ ಮಾಡಿದ್ದಾರೆ.
ಮುಖ್ಯಮಂತ್ರಿಯ ಬಗ್ಗೆ ಅಪಪ್ರಚಾರ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೃಷ್ಣ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ. ಸಿ.ಎಂ ಬಗ್ಗೆ ಕೃಷ್ಣ ತೇಜೋವಧೆ ಮಾಡ್ತಿದ್ದು, ರಾಜ್ಯದ ಜನರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಕಳೆದ 2 ತಿಂಗಳಿನಿಂದಲೂ ಇದೇ ನಡೆದಿದೆ. ಕೃಷ್ಣ ಹಾಗೂ ಟಿಜೆ ಅಬ್ರಹಾಂ ಅವರು ನ್ಯಾಯಲಯದ ಮೊರೆ ಹೋಗಿದ್ದರು. ಮುಡಾ ವಿಚಾರದಲ್ಲಿ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಲಯವು ಲೋಕಾಯುಕ್ತ ತನಿಖೆ ನಡೆಸುವುದಕ್ಕೆ ಆದೇಶಿಸಿದೆ.












Click it and Unblock the Notifications