ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ರಿಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ಗುಡ್ ಬೈ: ನಡೆದು ಬಂದ ದಾರಿ, ರಾಜಕೀಯದ ಏರಿಳಿತ

|
Google Oneindia Kannada News

ಬೆಂಗಳೂರು,ಜನವರಿ 5: ರಾಜ್ಯಕಂಡ ಅಪರೂಪದ ರಾಜಕಾರಣಿ ಎಸ್.ಎಂ.ಕೃಷ್ಣ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಸಂಸತ್ ಸದಸ್ಯರು, ಸ್ಪೀಕರ್, ಕೇಂದ್ರ ಸಚಿವ, ಡೆಪ್ಯುಟಿ ಸಿಎಂ, ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

1932ರಲ್ಲಿ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಎಸ್. ಎಂ. ಕೃಷ್ಣ ಜನಿಸಿದ್ದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಇನ್ನೂ 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡರು. ತದನಂತರ 1971ರಲ್ಲಿ ಮತ್ತೊಮ್ಮೆ ಸಂಸದರಾದರು.

ಕಾಂಗ್ರೆಸ್ ಪಕ್ಷದಲ್ಲಿದ್ದ ಎಸ್. ಎಂ. ಕೃಷ್ಣ 1972 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡರು. 1977ರಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಆಯ್ಕೆಯಾಗಿ, 1983ರಲ್ಲೂ ಉದ್ಯಮ ಖಾತೆ ಸಚಿವರಾಗಿ ಕೆಲಸ ನಿರ್ವಹಿಸಿದ್ದು, 1984 ರಲ್ಲಿ ವಿತ್ತ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನೂ 1989 ರಿಂದ 1992ರ ತನಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದದಾರೆ.

SM Krishna Retires from Active Politics; Know Former CM Political Career and Life Story

1992 ರಿಂದ 1994 ರ ವರೆಗೂ ಕರ್ನಾಟಕದ ಉಪಮುಖ್ಯಮಂತ್ರಿಯಾಗಿಯೂ ಕೆಲಸ ನಿರ್ವಹಿಸಿದ್ದು, 1996 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇನ್ನೂ 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ 16 ನೇ ಮುಖ್ಯಮಂತ್ರಿಯಾಗಿ ಹಲವು ಮಹತ್ತರ ಬದಲಾವಣೆಗೆ ಕಾರಣಕರ್ತರಾಗಿದ್ದರು. ಬೆಂಗಳೂರು ನಗರ ಐಟಿ-ಬಿಟಿ ಸಿಟಿಯಾಗಿ ವಿಶ್ವಮಟ್ಟದಲ್ಲಿ ಹೆಸರುಗಳಿಸಿದ್ದು ಇವರ ಅವಧಿಯಲ್ಲಿ. ಕಾಡುಗಳ್ಳ ವೀರಪ್ಪನ್‌ನಿಂದ ವರನಟ ಡಾ.ರಾಜ್‌ಕುಮಾರ್‌ ಅಪಹರಣ, ಕಾವೇರಿ ವಿವಾದ ಹಾಗೂ ಭೀಕರ ಬರಗಾಲದಂತಹ ಸಮಸ್ಯೆಗಳನ್ನು ಎದುರಿಸಿದ್ದರು. ಅಲ್ಲದೇ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಬಿಸಿಯೂಟ, ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ, ಯಶಸ್ವಿನಿಯಂತಹ ಹಲವಾರು ಜನಪರ ಯೋಜನೆಗಳು ಇಂದಿಗೂ ಮುಂದುವರೆಯುತ್ತಿವೆ.

ವಿಧಾನಸಭೆಗೆ 2004 ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ವಿಫಲರಾದರು. ರಾಜ್ಯದಲ್ಲಿ ಧರ್ಮಸಿಂಗ್‌ ನೇತೃತ್ವದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ರಚನೆಯಾಗುತ್ತಿದ್ದಂತೆ ಕೃಷ್ಣ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಪುನಃ 2008 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಕೃಷ್ಣ ಅವರು 2009 ರಲ್ಲಿ ವಿದೇಶಾಂಗ ಸಚಿವರಾಗಿ 2012ರ ವರೆಗೂ ಕೆಲಸ ನಿರ್ವಹಿಸಿದರು. ನಂತರ ರಾಜ್ಯಕ್ಕೆ ಮರಳಿದರೂ ಅವರನ್ನು ರಾಜ್ಯ ನಾಯಕರು ಪಕ್ಷ ಮತ್ತು ಸರಕಾರ ನಡೆಸಲು ಸೂಕ್ತ ಸಲಹೆ, ಸೂಚನೆಗಳನ್ನು ಕೇಳಲಿಲ್ಲ ಎಂಬ ಅಸಮಾಧಾನವಿತ್ತು. ತದನಂತರ 2017 ರಲ್ಲಿ ಕಾಂಗ್ರೆಸ್ ಪಕ್ಷವನ್ನ ತ್ಯಜಿಸಿ, ಬಿಜೆಪಿ ಪಕ್ಷವನ್ನ ಸೇರ್ಪಡೆಯಾದರು.

2017 ರಲ್ಲಿ ಬಿಜೆಪಿ ಸೇರ್ಪಡೆಯಾದ ಹಿರಿಯ ನಾಯಕರಾದ ಎಸ್.ಎಂ ಕೃಷ್ಣ ಅವರಿಗೆ ಬಿಜೆಪಿಯಲ್ಲಿ ಸೂಕ್ತ ರೀತಿಯ ಸ್ಥಾನಮಾನ ಸೇರಿದಂತೆ ಯಾವುದೇ ಕಾರ್ಯತಂತ್ರ ರೂಪಿಸುವಲ್ಲಿ ಆಹ್ವಾನ ಇರಲಿಲ್ಲ, ಇನ್ನೂ ಕೃಷ್ಣ ಅವರು ಹಿರಿಯ ನಾಯಕರು ಅವರಿಂದ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ , ಪಕ್ಷ ಅವರನ್ನು ಸೂಕ್ತ ಕಾಲದಲ್ಲಿ ಬಳಸಿಕೊಳ್ಳಲಿದೆ ಎಂದು ಹಿರಿಯ ಬಿಜೆಪಿ ನಾಯಕರು ಹೇಳಿಕೊಂಡೇ ಬಂದಿದ್ದರು.

SM Krishna Retires from Active Politics; Know Former CM Political Career and Life Story

ಬ್ರ್ಯಾಂಡ್ ಬೆಂಗಳೂರು ಕಾಪಾಡಿ: ಸಿಎಂ ಬೊಮ್ಮಾಯಿಗೆ ಸಲಹೆ ಕೊಟ್ಟ ಎಸ್.ಎಂ ಕೃಷ್ಣ

1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಐಟಿ ಬೂಮ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರು ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದೆ. ಆದರೆ ಮಳೆಯಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿ ಕಾಳಜಿಯನ್ನು ಉಂಟು ಮಾಡುತ್ತದೆ. ಈ ರೀತಿ ಮೂಲಭೂತಸೌಕರ್ಯ ವ್ಯವಸ್ಥೆಗಳಲ್ಲಿ ವ್ಯತ್ಯಾಸ ಉಂಟಾದರೆ 'ಬ್ರ್ಯಾಂಡ್ ಬೆಂಗಳೂರು' ಗುರುತಿನ ಮೇಲೆ ಪರಿಣಾಮ ಉಂಟಾಗಿ ಸಂಭವನೀಯ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲು ಕಾರಣವಾಗುತ್ತದೆ. ಹೀಗಾಗಿ ಭವಿಷ್ಯದ ದೃಷ್ಟಿಯೊಂದಿಗೆ ನಗರದ ಒಟ್ಟಾರೆ ಅಭಿವೃದ್ಧಿಗಾಗಿ ಸೂಕ್ತ ಬ್ಲೂಪ್ರಿಂಟ್ ಅನ್ನು ಸಿದ್ಧಪಡಿಸಲು ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಬೆಂಗಳೂರು ಕಾರ್ಯಸೂಚಿ ಕಾರ್ಯಪಡೆ ಅನ್ನು ಮರುರಚಿಸುವಂತೆ ಬೊಮ್ಮಾಯಿ ಅವರಿಗೆ ಎಸ್.ಎಂ. ಕೃಷ್ಣ ಸಲಹೆ ನೀಡಿದ್ದರು.

ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು ; ರಾಜಕೀಯಕ್ಕೆ ಗುಡ್ ಬೈ ಹೇಳಿದ ಎಸ್.ಎಂ. ಕೃಷ್ಣ

ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು ಈ ವೇಳೆ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದ್ದಾರೆ. ರಾಜಕೀಯದಿಂದ ನಿವೃತ್ತಯಾಗುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅವರು ಹೇಳಿದ್ದು, ನನಗೀಗ 90 ವರ್ಷ ವಯಸ್ಸು ಆಗಿದ್ದು, ಇದರ ಅರಿವು ನನಗಿದೆ. 90 ವರ್ಷದ ನಾನು 50 ವರ್ಷದವನಂತೆ ನಟಿಸಲು ಸಾಧ್ಯವಿಲ್ಲ. ಆದ್ದರಿಂದ ಕ್ರಮೇಣ ಸಾರ್ವಜನಿಕ ಜೀವನದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದು ಎಸ್.ಎಂ ಕೃಷ್ಣ ತಿಳಿಸಿದ್ದಾರೆ. ಇದು ಒಂದು ಕಡೆ ಸ್ವತಃ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಕನಸು ಕಂಡು ಬಿಜೆಪಿಗೆ ಮುಳ್ಳಾಗುವ ಸಾದ್ಯತೆ ಇದೆ. ಜೊತೆಗೆ ಈಗಾಗಲೇ ಬಿಜೆಪಿ ಹೈಕಮಾಂಡ್ ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲೇ ಅತಿ ಹೆಚ್ಚು ಸೀಟುಗಳನ್ನ ಗೆಲ್ಲಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಎಸ್‌.ಎಂ.ಕೃಷ್ಣ ಅವರ ಈ ನಡೆ ನಿಜಕ್ಕೂ ಅಚ್ಚರಿ ಮೂಡಿಸಿದೆ.

English summary
former cm SM Krishna Retires from Active Politics; Know Former CM Political Career and Life Story,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X