B to A Khata: ಎ ಖಾತಾ ಪ್ರಕ್ರಿಯೆಗೆ ಚಾಲನೆ ಸಿಕ್ಕಿ 60 ದಿನಗಳ ಮೇಲಾಯಿತು; ಕೊಟ್ಟ ಮಾತು ಏನಾಯಿತು?
ಬೆಂಗಳೂರು, ಡಿಸೆಂಬರ್ 17: ಕರ್ನಾಟಕ ಸರ್ಕಾರವು ಇ ಖಾತಾ ಮಾಡುವ ಅಭಿಯಾನವನ್ನು ದೊಡ್ಡಮಟ್ಟದಲ್ಲಿ ಕೈಗೊಂಡಿದೆ. ಉಳಿದಂತೆ ಬೆಂಗಳೂರಿನಲ್ಲಿ ಬಿ ಖಾತಾಗಳನ್ನು ಎ ಖಾತಾಗಳನ್ನಾಗಿ ಪರಿವರ್ತನೆ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬಿ ಖಾತಾಆಸ್ತಿಯನ್ನ ಎ ಖಾತಾಗೆ ಪರಿವರ್ತಿಸಲು ಅವಕಾಶ ನೀಡಿದೆ.
ನವೆಂಬರ್ 1ರಿಂದ ಫೆಬ್ರವರಿ ಮೊದಲ ವಾರದವರೆಗೆ, ಅಂದರೆ 100 ದಿನಗಳ ಅಭಿಯಾನ ಆರಂಭಿಸಿದೆ. ಆ ಮೂಲಕ ಬಿ ಖಾತಾದಾರರು ತಮ್ಮ ಆಸ್ತಿಗಳಿಗೆ ಎ ಖಾತಾ ಪಡೆಯಲು ದಾರಿ ಮತ್ತಷ್ಟು ಸುಗಮವಾಗಿದೆ. ಇದೀಗ ಬಿ ಖಾತಾ ಇರುವವರು ಎ ಖಾತಾಗೆ ಪರಿವರ್ತಿಸುವ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರು ನಗರದಲ್ಲಿ ಸರಿಸುಮಾರು 25 ಲಕ್ಷಕ್ಕೂ ಹೆಚ್ಚು ಆಸ್ತಿ ಖಾತಾಗಳಿವೆ. ಈ ಪೈಕಿ 7.5 ಲಕ್ಷ ಆಸ್ತಿಗಳಿಗೆ ಬಿ ಖಾತಾ ಇದೆ. ಬಿ ಖಾತಾ ಆಸ್ತಿ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಅಲ್ಲದೇ ಬೆಂಗಳೂರು ಆಸ್ತಿ ಮಾಲೀಕರು ಹೈರಾಣಗಿದ್ದಾರೆ. ಈ ಬಗ್ಗೆ ಶ್ರೀನಿವಾಸ ಮಠ ಅವರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಅಂತ ಆಗಿದೆ. ಅದರ ವ್ಯಾಪ್ತಿಯಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಮಾಡಿಕೊಡುವುದಾಗಿ ಅಕ್ಟೋಬರ್ 15, 2025ಕ್ಕೆ ಪ್ರಕ್ರಿಯೆ ಚಾಲನೆ ಪಡೆದುಕೊಂಡಿತು. ನವೆಂಬರ್ 1ರಿಂದ ಒಟ್ಟು 100 ದಿನಗಳ ಒಳಗೆ ಅರ್ಜಿ ಹಾಕಿಕೊಂಡಲ್ಲಿ, ಸಲ್ಲಿಕೆಯಾದ ಅರ್ಜಿ 45 ದಿನಗಳ ಒಳಗೆ ಪ್ರಕ್ರಿಯೆಯಾಗಿ, ಎ ಖಾತಾವನ್ನು ಸಂಬಂಧಪಟ್ಟ ಆಸ್ತಿ ಮಾಲೀಕರು ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರದ ಜವಾಬ್ದಾರಿ ವಹಿಸಿಕೊಂಡ ಡಿ.ಕೆ.ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಪ್ರಕ್ರಿಯೆಗೆ ಚಾಲನೆ ನೀಡಿದ ದಿನದಿಂದಲೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಿತ್ತು. ಹಾಗೆ ದಿನದ ಲೆಕ್ಕ ಹಿಡಿದರೆ ಇವತ್ತಿಗೆ ಡಿಸೆಂಬರ್ 17, 2025, ಅಂದರೆ 63 ದಿನಗಳಾದವು. ನವೆಂಬರ್ 1ನೇ ತಾರೀಕು ಅಂತ ಲೆಕ್ಕ ಹಿಡಿದರೂ 47 ದಿನ ಆಯಿತು. ಈಗ ಪ್ರಶ್ನೆ ಕೇಳುವ ಸಮಯ: ಎಷ್ಟು ಬಿ ಖಾತಾಗಳಿಗೆ ಎ ಖಾತಾ ವಿತರಣೆ ಆಗಿದೆ, ಎಷ್ಟು ಅರ್ಜಿ ಸಲ್ಲಿಕೆಯಾದವು, ಎಷ್ಟು ಮಾನ್ಯವಾದವು ಹಾಗೂ ಅಮಾನ್ಯವಾದವು ಎಷ್ಟು? ಇನ್ನು ಹೀಗೆ ಬಿ ಖಾತಾ ಆಸ್ತಿದಾರರಿಗೆ ನೀಡುವಂಥ ಆ ಎ ಖಾತಾ ಸ್ವರೂಪ ಹೇಗಿರುತ್ತದೆ, ಖಾಲಿ ನಿವೇಶನಕ್ಕಾದಲ್ಲಿ ಹೇಗೆ ಹಾಗೂ ಈಗಾಗಲೇ ಮನೆ ಕಟ್ಟಿರುವಂಥದ್ದಕ್ಕೆ ಹೇಗೆ? -ಹೀಗೆ ಯಾವುದೆಂದರೆ ಯಾವ ಪ್ರಶ್ನೆಗೂ ಉತ್ತರ ಸಿಗುತ್ತಿಲ್ಲ.
ಆನ್ ಲೈನ್ ನಲ್ಲಿ ಅರ್ಜಿ ಹಾಕಿಕೊಂಡ ಮೇಲೆ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬರುತ್ತಾರಲ್ಲ, ಅಲ್ಲಿ ಹಣ ವಸೂಲಿಗೆ ಒಂದು ಬಾಗಿಲು ತೆರೆದಿಡಲಾಗಿದೆ. "ಇಷ್ಟು ಖರ್ಚು ಬರುತ್ತೆ" ಅಂತ ಪ್ರಾಮಾಣಿಕವಾಗಿ ಹಣ ಕೇಳಿ ಪಡೆದುಕೊಳ್ಳುವ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪಾಪ, ಅವರು ಯಾರಿಗೆ ಕೊಡಬೇಕೋ ಏನೋ ಎಂಬ ಕರುಣೆಯಿಂದ ಜನರು ಸಹ ಲಂಚವನ್ನು ದಯೆ ತೋರಿಸಿ ಕೊಡುತ್ತಿದ್ದಾರೆ. ಅಲ್ಲಿಗೆ ಕಚೇರಿಗೆ ಭೇಟಿಯೇ ನೀಡದೆ, ಯಾರಿಗೂ ಒಂದು ಪೈಸೆ ಲಂಚ ಕೊಡದೆ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಮಾಡಿಸಿಕೊಳ್ಳಬಹುದು ಎಂಬ ಮಾತಿನ ಉದ್ದೇಶ ನೆಗೆದುಬಿತ್ತು.
ಆಸ್ತಿಯ ನೋಂದಣಿ ಮೌಲ್ಯದ ಶೇಕಡಾ 5ರಷ್ಟು ಹಣವನ್ನು ಪಾವತಿಸಬೇಕು ಅಂತಿದೆಯಲ್ಲ, ಅದಕ್ಕೆ ಯಾವ ಮಾನದಂಡ ಇದೆ? ಎಲ್ಲ ಮೂಲಸೌಕರ್ಯ ಇರುವ ಪ್ರದೇಶಗಳಲ್ಲೂ ಬಿ ಖಾತಾ ಆಸ್ತಿಗಳು ಇವೆ, ಅಲ್ಲಿ ಜಿಬಿಎ ಹೊಸದಾಗಿ ನೀಡುವಂಥ ಯಾವ ಮೂಲಸೌಕರ್ಯವೂ ಬಾಕಿ ಇಲ್ಲ. ಅಥವಾ ಈಗಾಗಲೇ ಕೊಟ್ಟಿರುವ ಸೌಕರ್ಯಕ್ಕೆ ಆ ಬಿ ಖಾತಾ ಆಸ್ತಿದಾರರಿಂದಲೂ ಕಂದಾಯ ವಸೂಲಿ ಮಾಡಿಯಾಗಿದೆ. ಈಗ 2ರಿಂದ 7 ಲಕ್ಷ ರೂಪಾಯಿ ತನಕ ಆಯಾ ಆಸ್ತಿ ಇರುವ ಪ್ರದೇಶದ ಆಧಾರದಲ್ಲಿ ಸರ್ಕಾರಕ್ಕೆ ಹಣ ಕಟ್ಟ ಬೇಕಾಗುತ್ತದೆ.
ಬಿಬಿಎಂಪಿ (ಜಿಬಿಎ) ಕಚೇರಿಯಲ್ಲಿ ಕೆಲಸ ಮಾಡಿದ ಅಥವಾ ಮಾಡುತ್ತಿರುವ, ಅಲ್ಲಿನ ವ್ಯವಹಾರಗಳ ಅನುಭವ ಇರುವವರು, ನೀವೇನಾದರೂ ಬ್ಯಾಂಕ್ ಗೆ ಸಾಲಕ್ಕೆ ಹೋಗ್ತೀರಾ ಅಂತಾದರೆ ಎ ಖಾತಾ ಮಾಡಿಸಿಕೊಳ್ಳಿ, ಈಗೇನು ಪ್ರೈವೇಟ್ ಬ್ಯಾಂಕ್ ನಲ್ಲಿ ಬಿ ಖಾತಾ ಆಸ್ತಿಗಳಿಗೆ ಹೋಮ್ ಲೋನ್ ಕೊಡ್ತಾರೆ. ಹೇಗಿದ್ದರೂ ಎಲ್ಲ ಆಸ್ತಿಗಳನ್ನು ಎ ಖಾತೆ ಅಂತ ಜಿಬಿಎಯಿಂದ ಮಾಡಿಸಲೇಬೇಕು. ಈಗ ಮಾಡಿಸಿಕೊಳ್ಳಲಿಲ್ಲ ಅಂತಾದರೆ ಸ್ವಲ್ಪ ತಡವಾಗಬಹುದು. ಆದರೆ ಹೇಗೆ ಇ-ಖಾತಾವನ್ನು ಕೊನೆಕೊನೆಗೆ ಸುಲಭವಾಗಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆಯೋ ಇದೂ ಹಾಗೇ ಆಗುತ್ತದೆ. ಸುಮ್ಮನೆ ಯಾಕೆ ಲಕ್ಷಾಂತರ ರೂಪಾಯಿ ಸರ್ಕಾರಕ್ಕೆ ಕಟ್ತೀರಾ ಎನ್ನುತ್ತಾರೆ.
ಕಟ್ಟಡ ಇರುವಂಥದ್ದಕ್ಕೆ ಹೇಗೆ, ಖಾಲಿ ನಿವೇಶನಕ್ಕೆ ಹೇಗೆ ಯಾವ ರೀತಿಯ ಎ ಖಾತಾ ವಿತರಣೆ ಆಗುತ್ತದೆ, ಅದರ ಒಂದು ಮಾದರಿಯನ್ನು ಜಿಬಿಎ ಕಡೆಯಿಂದ ಬಿಡುಗಡೆ ಮಾಡಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುವ ಕ್ರಮ ಇದೆಯಲ್ಲ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಡೀ ಪ್ರಕ್ರಿಯೆಯ ಸ್ಟೇಟಸ್, ಅಂದರೆ ಯಾವ ಹಂತದಲ್ಲಿ ಅರ್ಜಿ ಇದೆ ಎಂಬುದು ಆನ್ ಲೈನ್ ನಲ್ಲಿ ಅಪ್ ಡೇಟ್ ಆಗಬೇಕು. ಶೇಕಡಾ ಐದರಷ್ಟು ಹಣ ಕಟ್ಟಿಸಿಕೊಳ್ಳುವುದನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬ ವಿವರವನ್ನು (ಬ್ರೇಕಪ್- ಇಂಥಿಂಥ ಉದ್ದೇಶಕ್ಕೆ ಇಷ್ಟು ಹಣ) ಜನರಿಗೆ ಲೆಕ್ಕ ಕೊಡಬೇಕು.
ಈ ಎ ಖಾತಾ ವಿತರಣೆ ಘೋಷಣೆ ಆದ ಮೇಲೆ ಯಾಕೆ ಜನರ ಪ್ರತಿಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ, ಈ ಬಗ್ಗೆ ಸಂಬಂಧ ಪಟ್ಟ ಸಚಿವರು- ಅಧಿಕಾರಿಗಳು ಜನರ ಜತೆಗೆ ವೇದಿಕೆ ಮೇಲೆ ಪ್ರಶ್ನೋತ್ತರ ಸಭೆ ಏರ್ಪಡಿಸಬೇಕು. ಇವೆಲ್ಲ ಸಾಮಾನ್ಯ ಜನರು ನಿರೀಕ್ಷಿಸುವ ಅಂಶಗಳು. ಹೀಗೆ ಮಾಡಬೇಕಾದದ್ದು ಆದರ್ಶ ಎನಿಸುವ ಒಂದು ವ್ಯವಸ್ಥೆಯ ಕರ್ತವ್ಯ. "ಅವರು ಹಾಗೆ ಮಾಡಿದ್ರಾ? ನಾವು ಇದಾದರೂ ಮಾಡ್ತಾ ಇದೀವಲ್ಲ?" ಎಂಬುದು ಧೋರಣೆ ಆದಲ್ಲಿ ಜನರು ಯೋಚನೆ ಮಾಡಿಕೊಳ್ತಾರೆ; ಏನು ಮಾಡಬೇಕು ಅಂತ. ಸದ್ಯ ಸರ್ಕಾರ ಯಾಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ, ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡು, ಆದಷ್ಟು ಬೇಗ ಸಮಸ್ಯೆಯನ್ನ ಬಗೆಹರಿಸಬೇಕು ಎಂಬುದು ನಮ್ಮ ಆಶಯ.
ಬರಹ: ಶ್ರೀನಿವಾಸ ಮಠ












Click it and Unblock the Notifications