ಎಫ್‌ಐಆರ್ ರದ್ದು ಕೋರಿ ರೇವಣ್ಣ, ಜಾಮೀನು ರದ್ದು ಕೋರಿ ಎಸ್ಐಟಿ ಅರ್ಜಿ!
ಬೆಂಗಳೂರು, ಮೇ 29: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಸ್‌ಐಟಿ ಮಂಗಳವಾರ ಎಚ್. ಡಿ. ರೇವಣ್ಣಗೆ ನೀಡಿರುವ ಜಾಮೀನು ರದ್ದು ಕೋರಿದೆ. ಅತ್ತ ಎಚ್. ಡಿ. ರೇವಣ್ಣ ಕೂಡ ತಮ್ಮ ವಿರುದ್ಧದ 2 ಎಫ್ಐಅರ್ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹೀಗಾಗಿ ಪ್ರಕರಣ ಹೊಸ ಆಯಾಮ ಪಡೆದುಕೊಳ್ಳುತ್ತಿದೆ.
ಮಹಿಳೆ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಮನೆ ಕೆಲಸದಾಕೆಯನ್ನು ಅಪಹರಿಸಿದ ಆರೋಪ ಸಂಬಂಧ ಮೈಸೂರು ಜಿಲ್ಲೆಯ ಕೆ. ಆರ್. ನಗರ ಮತ್ತು ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸಲು ಕೋರಿ ಮಾಜಿ ಸಚಿವ ಹಾಗೂ ಪ್ರಕರಣದ ಮೊದಲ ಆರೋಪಿಯಾದ ರೇವಣ್ಣ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ಎರಡೂ ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕು ಎಂದು ಕೋರಿ ಎಚ್. ಡಿ. ರೇವಣ್ಣ ಎರಡು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿರುವ ಕೆ. ಆರ್. ನಗರ ಠಾಣಾ ಪೊಲೀಸರು (ಸದ್ಯ ತನಿಖೆ ನಡೆಸುತ್ತಿರುವ ಸಿಐಡಿ ಎಸ್‌ಐಟಿ ಅಧಿಕಾರಿಗಳು) ಮತ್ತು ದೂರುದಾರ ಎಚ್. ಡಿ. ರಾಜು ಅವರನ್ನು ಪ್ರತಿವಾದಿ ಮಾಡಿದ್ದಾರೆ.
ಹಾಗೆಯೇ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿರುವ ಹೊಳೆನರಸಿಪುರ ಠಾಣೆಯ ಪೊಲೀಸರು (ಸದ್ಯ ತನಿಖೆ ನಡೆಸುತ್ತಿರುವ ಸಿಐಡಿ ಎಸ್‌ಐಟಿ ಅಧಿಕಾರಿಗಳು) ಮತ್ತು ದೂರುದಾರ ಮಹಿಳೆಯನ್ನು ಪ್ರತಿವಾದಿ ಮಾಡಿದ್ದಾರೆ.
ಮತ್ತೊಂದೆಡೆ ಮಹಿಳೆಯ ಅಪಹರಣ ಆರೋಪ ಸಂಬಂಧ ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಎಚ್. ಡಿ. ರೇವಣ್ಣ ಅವರಿಗೆ ಜಾಮೀನು ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು (ಸೆಷನ್ಸ್ ಕೋರ್ಟ್) 2024ರ ಮೇ 13ರಂದು ಹೊರಡಿಸಿದ ತೀರ್ಪು ರದ್ದುಪಡಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ (ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಸ್‌ಐಟಿ ಅಧಿಕಾರಿಗಳು) ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.
ರಾಜಕೀಯ ದುರುದ್ದೇಶ: ಅಪಹರಣ ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿದೆ. ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರವೂ ಇದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಆರೋಪಿಗಳ ಹಾಗೂ ಸಾಕ್ಷಿಗಳ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಆರೋಪಿಗೆ ಜಾಮೀನು ಲಭ್ಯವಾಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ, ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಎಸ್‌ಐಟಿ ಪೊಲೀಸರು ಕೋರಿದ್ದಾರೆ. ಈ ಅರ್ಜಿಯಲ್ಲಿ ಆರೋಪಿ ಎಚ್. ಡಿ. ರೇವಣ್ಣ ಅವರನ್ನು ಪ್ರತಿವಾದಿ ಮಾಡಲಾಗಿದೆ.
ತಾವು ಯಾವುದೇ ಅಪರಾಧ ಕೃತ್ಯವನ್ನು ಎಸಗಿಲ್ಲ. ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರಕರಣದಲ್ಲಿ ಹುರಳಿಲ್ಲ. ದೂರಿನ ಅಂಶಗಳು ಕಟ್ಟುಕತೆಯಂತಿದೆ. ಆದ್ದರಿಂದ ಎಫ್‌ಐಆರ್ ರದ್ದುಪಡಿಸಬೇಕು ಎಂದು ರೇವಣ್ಣ ಕೋರಿದ್ದಾರೆ. ಹಾಗೆಯೇ, ಅರ್ಜಿ ಇತ್ಯರ್ಥವಾಗುವರೆಗೂ ಎಫ್‌ಐಆರ್, ಪ್ರಕರಣದ ತನಿಖೆ ಹಾಗೂ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.












Click it and Unblock the Notifications