Inspiring Story: 2019ರ ಪ್ರವಾಹದಲ್ಲಿ ಹಾಳಾಗಿದ್ದ ಕರ್ನಾಟಕದ ಸರ್ಕಾರಿ ಶಾಲೆಗೆ ಮರುಜೀವ ನೀಡಿದ ಅಮೆರಿಕಾದ ಟೆಕ್ಕಿಗಳು
ಬೆಂಗಳೂರು: 2019ರ ಭೀಕರ ಪ್ರವಾಹಕ್ಕೆ ಕರ್ನಾಟಕದ ಆ ಸರ್ಕಾರಿ ಶಾಲೆಯ ಕಟ್ಟಡ ಸಂಪೂರ್ಣವಾಗಿ ಹಾಳಾಗಿತ್ತು. 500ಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರವಾಗಿತ್ತು. ಆದರೆ, ಇಂದು ಅದೇ ಶಾಲೆಯಲ್ಲಿ 1,000ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಡೀ ಜಿಲ್ಲೆಗೇ ಅದೊಂದು ಮಾದರಿ ಶಾಲೆಯಾಗಿದೆ.
ಇಷ್ಟು ದೊಡ್ಡ ಬದಲಾವಣೆಯ ಹಿಂದೆ ಇರುವುದು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ನೆಲೆಸಿರುವ ಭಾರತೀಯ ಟೆಕ್ಕಿಗಳ ಶ್ರಮ ಮತ್ತು ಅವರು ಹುಟ್ಟುಹಾಕಿದ 'ಓಸಾಟ್' (OSAAT - One School At A Time) ಸಂಸ್ಥೆ. ತಾಯ್ನಾಡಿನ ಋಣ ತೀರಿಸುವ ಉದ್ದೇಶದಿಂದ ಈ ಟೆಕ್ಕಿಗಳು ಕರ್ನಾಟಕ ಸೇರಿದಂತೆ ಭಾರತದಾದ್ಯಂತ 150ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮರುನಿರ್ಮಾಣ ಕಾರ್ಯವನ್ನ ಯಶಸ್ವಿಯಾಗಿ ಮಾಡಿದ್ದಾರೆ.

ಸಿಲಿಕಾನ್ ವ್ಯಾಲಿಯಲ್ಲಿ ಶುರುವಾದ ಓಸಾಟ್ ಸಂಸ್ಥೆ
2003ರ ಸುಮಾರಿಗೆ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿದ್ದ ಕೆಲ ಭಾರತೀಯ ಎಂಜಿನಿಯರ್‌ಗಳು ನಾಟಕ, ಸಂಗೀತ ಕಾರ್ಯಕ್ರಮಗಳನ್ನ ಆಯೋಜಿಸಿ ಹಣ ಸಂಗ್ರಹಿಸುತ್ತಿದ್ದರು. ಈ ಹಣವನ್ನ ಭಾರತದ ಅಭಿವೃದ್ಧಿಗೆ ಬಳಸುವ ಕನಸು ಅವರದ್ದಾಗಿತ್ತು.
ಅದೇ ಸಮಯದಲ್ಲಿ ಕರ್ನಾಟಕದ ಕಾರ್ಕಳದ ಶಾಲೆಯೊಂದರ ಕಟ್ಟಡ ಕುಸಿದು ಮಕ್ಕಳು ಮರಗಳ ಕೆಳಗೆ ಕಲಿಯುತ್ತಿದ್ದ ದೃಶ್ಯ ಬಿ.ವಿ. ಜಗದೀಶ್ ಹಾಗೂ ವಾದಿರಾಜ ಭಟ್ ಸೇರಿದಂತೆ ಇತರ ಟೆಕ್ಕಿಗಳ ಹಮನಕ್ಕೆ ಬಂದಿತು. ತಾವು ಓದಿದ ಸರ್ಕಾರಿ ಶಾಲೆಯ ಋಣ ತೀರಿಸಲು ಕೇವಲ 3,000 ಡಾಲರ್ ನಿಧಿಯೊಂದಿಗೆ ಆರಂಭಿಸಿದ ಇವರ ಸಣ್ಣ ಪ್ರಯತ್ನ, ಇಂದು 'ಓಸಾಟ್' ಎಂಬ ಬೃಹತ್ ಸ್ವಯಂಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಪ್ರವಾಹಕ್ಕೆ ಸಿಲುಕಿದ್ದ ಮೆಳವಂಕಿ ಸರ್ಕಾರಿ ಶಾಲೆಗೆ ಮರುಜೀವ
ಓಸಾಟ್ ಸಂಸ್ಥೆಯ ಅತಿ ದೊಡ್ಡ ಯಶಸ್ಸಿನ ಕಥೆ ಇರುವುದು ಕರ್ನಾಟಕದ ಮೆಳವಂಕಿ ಶಾಲೆಯಲ್ಲಿ. 2010ರಲ್ಲಿ ಕೇವಲ 19 ವಿದ್ಯಾರ್ಥಿಗಳು ಮತ್ತು 2 ಕೊಠಡಿ ಹೊಂದಿದ್ದ ಈ ಶಾಲೆ, ಮುಖ್ಯೋಪಾಧ್ಯಾಯ ಈರಣ್ಣ ಕಡಕೋಳ ಅವರ ಶ್ರಮದಿಂದ 2019ರ ವೇಳೆಗೆ 500 ವಿದ್ಯಾರ್ಥಿಗಳನ್ನ ಆಕರ್ಷಿಸಿತ್ತು. ಆದರೆ ಅದೇ ವರ್ಷ ಬಂದ ಪ್ರವಾಹ ಶಾಲೆಯನ್ನ ಸಂಪೂರ್ಣವಾಗಿ ನಾಶಮಾಡಿತು.
ಈ ಸಂದರ್ಭದಲ್ಲಿ ಈರಣ್ಣ ಅವರು ಆನ್‌ಲೈನ್ ಮೂಲಕ ಓಸಾಟ್ ಸಂಸ್ಥೆಯನ್ನ ಸಂಪರ್ಕಿಸಿದರು. ತಕ್ಷಣ ಸ್ಪಂದಿಸಿದ ಸಂಸ್ಥೆ, 8 ಹೊಸ ಕೊಠಡಿಗಳು, ಶೌಚಾಲಯ, ಡೆಸ್ಕ್, ಗ್ರೀನ್ ಬೋರ್ಡ್ ಹಾಗೂ ಗ್ರಂಥಾಲಯವನ್ನ ನಿರ್ಮಿಸಿಕೊಟ್ಟಿತು.
ಇಂದು ಈ ಶಾಲೆಯಲ್ಲಿ 16 ಕೊಠಡಿಗಳಿದ್ದು 1,045 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 4 ಕಿ.ಮೀ ದೂರದಿಂದಲೂ ಪೋಷಕರು ತಮ್ಮ ಮಕ್ಕಳನ್ನ ಇಲ್ಲಿಗೆ ಕಳುಹಿಸುತ್ತಿದ್ದಾರೆ. ಇದೀಗ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲೂ ಈ ಶಾಲೆಯ ಮಕ್ಕಳು ಮಿಂಚುತ್ತಿದ್ದಾರೆ.
ಸ್ಮಾರ್ಟ್ ಕ್ಲಾಸ್‌ಗಿಂತ ಮುನ್ನ ಗೌರವಯುತ ಶಿಕ್ಷಣಕ್ಕೆ ಒತ್ತು
"ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡುವುದಕ್ಕಿಂತ ಮೊದಲು, ಅವರಿಗೆ ಸೋರದ, ಭದ್ರವಾದ ತರಗತಿಗಳನ್ನ ಒದಗಿಸಿ ಕಲಿಕೆಗೆ ಒಂದು ಘನತೆ ತಂದುಕೊಡಬೇಕು" ಎಂಬುದು ಓಸಾಟ್ ಸಂಸ್ಥೆಯ ಪ್ರಮುಖ ಉದ್ದೇಶ. ಈ ಕಾರಣಕ್ಕಾಗಿಯೇ ಅವರು ಕೇವಲ ಸರ್ಕಾರಿ ಶಾಲೆಗಳ ಜೊತೆ ಮಾತ್ರ ಕೈಜೋಡಿಸುತ್ತಾರೆ. ಖಾಸಗಿ ಶಾಲೆಗಳಿಗೆ ಇವರು ನೆರವು ನೀಡುವುದಿಲ್ಲ.
ಕರ್ನಾಟಕ ಮಾತ್ರವಲ್ಲದೆ, ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್‌ನಲ್ಲಿ ಭೂಕಂಪ ನಿರೋಧಕ ಶಾಲಾ ಕಟ್ಟಡವನ್ನ ಇವರು ನಿರ್ಮಿಸಿದ್ದಾರೆ. ತಮಿಳುನಾಡಿನ ವೆಲ್ಲಿಂಗಾಡು ಶಾಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ತರಗತಿಗಳನ್ನ ನಿರ್ಮಿಸಿದ ಪರಿಣಾಮ ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಸಾವಿರದ ಗಡಿ ದಾಟಿದೆ.
ಐಟಿ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಬಾಲಕೃಷ್ಣ ಅವರಂತಹ ಹಿರಿಯ ಸ್ವಯಂಸೇವಕರು ಈ ಸಂಸ್ಥೆಗೆ ಕಟ್ಟುನಿಟ್ಟಿನ ನಿಯಮಗಳನ್ನ ರೂಪಿಸಿದ್ದಾರೆ. ಅರ್ಜಿ ಸಲ್ಲಿಸುವ 10 ಶಾಲೆಗಳ ಪೈಕಿ ಅತ್ಯಗತ್ಯವಿರುವ 1 ಅಥವಾ 2 ಶಾಲೆಗಳನ್ನ ಮಾತ್ರ ಆಯ್ಕೆ ಮಾಡಿ, ಪಾರದರ್ಶಕವಾಗಿ ಅಭಿವೃದ್ಧಿ ಮಾಡಲಾಗುತ್ತದೆ.
2030ರ ವೇಳೆಗೆ 10 ಲಕ್ಷ (ಒಂದು ಮಿಲಿಯನ್) ಶಾಲಾ ವಿದ್ಯಾರ್ಥಿಗಳನ್ನ ತಲುಪುವ ಗುರಿಯನ್ನು 'ಓಸಾಟ್' ಸಂಸ್ಥೆ ಹೊಂದಿದೆ. ಈ ಮೂಲಕ ಅಮೆರಿಕದಲ್ಲಿದ್ದರೂ ದೇಶದ ಭವಿಷ್ಯವನ್ನ ಉಜ್ವಲಗೊಳಿಸುವಲ್ಲಿ ಈ ಟೆಕ್ಕಿಗಳು ತೆರೆಮರೆಯ ಹೀರೋಗಳಾಗಿ ಕೆಲಸ ಮಾಡುತ್ತಿದ್ದಾರೆ. (ಸಂಸ್ಥೆಯನ್ನು ಸಂಪರ್ಕಿಸಲು ಇಮೇಲ್: [email protected]).


Click it and Unblock the Notifications
