'ಶಕ್ತಿ' ಯೋಜನೆ: ಎರಡನೇ ದಿನ ಮಹಿಳಾ ಪ್ರಯಾಣಿಕರ ಸಂಖ್ಯೆ 7 ಪಟ್ಟು ಹೆಚ್ಚಳ
ಭಾನುವಾರ ಕರ್ನಾಟಕ ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಮೊದಲ ದಿನ 5,71,023 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದರೆ, ಎರಡನೇ ದಿನ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.
ಮೊದಲ ದಿನ ಭಾನುವಾರ ಕಂಪನಿ, ಗಾರ್ಮೆಂಟ್ಸ್, ಕಚೇರಿಗಳಿಗೆ ರಜೆ ಇದ್ದ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆ ಇತ್ತು. ಆದರೆ, ಸೋಮವಾರ ಕೆಲಸಕ್ಕೆ ಓಡಾಡುವವರ ಸಂಖ್ಯೆ ಹೆಚ್ಚಾದ ಕಾರಣ, ಮಹಿಳಾ ಪ್ರಯಾಣಿಕರ ಸಂಖ್ಯೆ ಭಾನುವಾರಕ್ಕೆ ಹೋಲಿಕೆ ಮಾಡಿದರೆ 7 ಪಟ್ಟು ಹೆಚ್ಚಾಗಿದೆ.

ಭಾನುವಾರ ರಾಜ್ಯಾದ್ಯಂತ 5,71,023 ಲಕ್ಷ ಮಹಿಳಾ ಪ್ರಯಾಣಿಕರು, ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದರೆ, ಸೋಮವಾರ ಮಹಿಳಾ ಪ್ರಯಾಣಿಕರ ಸಂಖ್ಯೆ 41,34, 726ಕ್ಕೆ ಏರಿಕೆಯಾಗಿದೆ. ಅಂದರೆ 7ಕ್ಕಿಂತ ಅಧಿಕ ಪಟ್ಟು ಏರಿಕೆಯಾಗಿದೆ.
ಬಿಎಂಟಿಸಿ ಬಸ್‌ಗಳಲ್ಲಿ ಭಾನುವಾರ 2,01,215 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದರೆ, ಸೋಮವಾರ ಮಹಿಳಾ ಪ್ರಯಾಣಿಕರ ಸಂಖ್ಯೆ 17,57,887 ಕ್ಕೆ ಏರಿಕೆಯಾಗಿದೆ. ಇನ್ನು ಭಾನುವಾರ ಕೆಎಸ್ಆರ್ ಟಿಸಿ ಬಸ್‌ಗಳಲ್ಲಿ 1,93,831, ವಾಯುವ್ಯ ಕರ್ನಾಟಕ ಸಾರಿಗೆ 1,22,354, ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ 53,623 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದರು. ಸೋಮವಾರ ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ 11,40,057, ವಾಯುವ್ಯ ಕರ್ನಾಟಕ ಸಾರಿಗೆ 8,31,840, ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ 4,04,932 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.
ಭಾನುವಾರ ಮಹಿಳಾ ಪ್ರಯಾಣಿಕರು ರಾಜ್ಯಾದ್ಯಂತ ಸಂಚಾರ ಮಾಡಿದ್ದ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 1.40 ಕೋಟಿ ರುಪಾಯಿಗಳಾದರೆ, ಸೋಮವಾರ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 8.83 ಕೋಟಿ ರುಪಾಯಿಗಳಾಗಿದೆ.
ಇನ್ನೂ ಹಲವೆಡೆ ಕೆಲವು ಕಡೆ ಗೊಂದಲ
ಮೊದಲ ದಿನ ಸರ್ಕಾರ ಮಹಿಳಾ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಪಡೆಯುವವರೆಗೆ ಆಧಾರ್ ಸೇರಿದಂತೆ ಯಾವುದಾದರೂ ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ ತೋರಿಸಿ ಪ್ರಯಾಣ ಮಾಡಬೇಕು ಎಂದು ಹೇಳಿತ್ತು. ಆದರೆ, ಆಧಾರ್ ಕಾರ್ಡ್ ಅಸಲು ಪ್ರತಿಯನ್ನೇ ತೋರಿಸಬೇಕು ಎಂದು ಹಲವು ಕಡೆ ನಿರ್ವಾಹಕರು ಕೇಳಿದ್ದರಿಂದ ಟೀಕೆ ವ್ಯಕ್ತವಾಗಿತ್ತು, ಇದರಿಂದ ಎಚ್ಚೆತ್ತ ಸರ್ಕಾರ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿಗಳ, ಜೆರಾಕ್ಸ್, ಡಿಜಿಟಲ್ ಮಾದರಿಯಲ್ಲಿ ಕೂಡ ತೋರಿಸಿ ಪ್ರಯಾಣ ಮಾಡಬಹುದು ಎಂದು ಆದೇಶ ಹೊರಡಿಸಿತ್ತು.
ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಿದ್ದರು ಲಗೇಜ್‌ಗೆ ಚಾರ್ಜ್ ಪಡೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರಿಗೆ ಉಚಿತ ಇರುವಾಗ ಲಗೇಜ್ ಚಾರ್ಜ್ ಯಾಕೆ ಕೊಡಬೇಕು ಎಂದು ಮಹಿಳಾ ಪ್ರಯಾಣಿಕರು ನಿರ್ವಾಕರ ಜೊತೆ ವಾದಕ್ಕೆ ಇಳಿದಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದರೂ, ಲಗೇಜ್ ಬಗ್ಗೆ ಯಾವುದೇ ಆದೇಶ ಇಲ್ಲದ ಕಾರಣ ನಿರ್ವಾಹಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.












Click it and Unblock the Notifications