ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ!
ರಾಜ್ಯ ಸರ್ಕಾರವು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಆರೋಗ್ಯ ಇಲಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಪದೇ ಪದೇ ದೂರುಗಳು ಕೇಳಿ ಬರುತ್ತಿದ್ದವು. ಅದರಲ್ಲಿ 108 ಆಂಬ್ಯುಲೆನ್ಸ್ ಸೇವೆಯೂ ಒಂದಾಗಿದೆ. ಇದೀಗ 108 ಆಂಬ್ಯುಲೆನ್ಸ್ ಸೇವೆಗೆ ಸಂಬಂಧಿಸಿದಂತೆ ಮಹತ್ವದ ಕ್ರಮವೊಂದನ್ನು ರಾಜ್ಯ ಸರ್ಕಾರವು ತೆಗೆದುಕೊಂಡಿದೆ. ಹೌದು ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಪ್ಡೇಟ್ ಕೊಟ್ಟಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 108 ಆಂಬ್ಯುಲೆನ್ಸ್ ಸೇವೆಯನ್ನು ಇನ್ಮುಂದೆ ಸರ್ಕಾರವೇ ನಿರ್ವಹಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದುವರೆಗೂ ಈ ಸೇವೆಯನ್ನು ಖಾಸಗಿಯವರು ನಿರ್ವಹಿಸುತ್ತಿದ್ದು ಇದರಿಂದಾಗಿ ಸಾಕಷ್ಟು ಸಮಸ್ಯೆಗಳಿದ್ದವು. ಈ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಹಾಗು ಖಾಸಗಿ ನಿರ್ವಹಣೆಯಿಂದಾಗಿ ಸರ್ಕಾರಕ್ಕೆ ಆಗುತ್ತಿದ್ದ ನಷ್ಟ ತಪ್ಪಿಸಲು ನಮ್ಮ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.

108 ಆಂಬ್ಯುಲೆನ್ಸ್‌ಗಳು ಸರ್ಕಾರದ್ದೇ ಆದರೂ ನಿರ್ವಹಣೆ ಮಾತ್ರ ಖಾಸಗಿಯವರದ್ದಾಗಿತ್ತು. ವಾಹನಗಳ ಡಿಸೇಲ್ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಚಾಲಕರ ವೇತನವನ್ನು ಸರ್ಕಾರ ಬಿಡುಗಡೆಗೊಳಿಸಿದರೂ ಏಜೆನ್ಸಿಗಳು ಸಕಾಲಕ್ಕೆ ಪಾವತಿ ಮಾಡುತ್ತಿರಲಿಲ್ಲ. ಏಜೆನ್ಸಿಗಳು ವೇತನ ಬಿಡುಗಡೆಗೊಳಿಸಲು ಪ್ರತಿ ಬಾರಿ ಸರ್ಕಾರ ಮಧ್ಯೆ ಪ್ರವೇಶಿಸಬೇಕಾಗಿತ್ತು. ಖಾಸಗಿ ನಿರ್ವಹಣೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವೇ ಆಗುತ್ತಿತ್ತು.
ಆದರಿಂದ ಸರ್ಕಾರ ಈ ಐತಿಹಾಸಿಕ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಸಾಫ್ಟ್ವೇರ್ ಸಿದ್ಧಪಡಿಸಲಾಗಿದ್ದು ಚಾಮರಾಜನಗರದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸೇವೆಗಳನ್ನು ಆರೋಗ್ಯ ಇಲಾಖೆಯ ನಿರ್ವಹಣಾ ವ್ಯಾಪ್ತಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.
ಅಂಗಾಂಗ ದಾನ & ಅಂಗಾಂಗ ಕಸಿ ಮಹತ್ವದ ಕ್ರಮ: ಇನ್ನು ರಾಜ್ಯದಲ್ಲಿ ಜೀವಸಾರ್ಥಕತೆ ಕಾರ್ಯಕ್ರಮದ ಅಡಿಯಲ್ಲಿ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಸರ್ಕಾರಿ ಜಿಲ್ಲಾಸ್ಪತ್ರೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಈಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಿರ್ದೇಶನ ನೀಡಿದ್ದಾರೆ.
ಎಲ್ಲಾ ಜಿಲ್ಲಾಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಅಂಗಾಂಗ ಮರುಪಡೆಯುವ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಮೂರು ಸ್ಥಳಗಳಲ್ಲಿ BMST ಅಡಿಯಲ್ಲಿ HLA ಪ್ರಯೋಗಾಲಯಗಳನ್ನು ಸ್ಥಾಪಿಸಲು KMC&RI ಮಾದರಿಯನ್ನು ಅನ್ವೇಷಿಸಲು ಮತ್ತು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟವರಿಂದ ಅಂಗಾಂಗಗಳನ್ನು ಪಡೆಯುವ ಪ್ರಯತ್ನಗಳು ಸರ್ಕಾರಿ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಾಗಬೇಕು ಎಂದು ಸೂಚಿಸಿದ್ದಾರೆ.
ಮುಂದುವರಿದು ಜೀವಸಾರ್ಥಕತೆ ಸೊಸೈಟಿಯ ನೋಂದಣಿಯನ್ನು ನವೀಕರಿಸುವುದು ಮತ್ತು ಕಾರ್ಯಾಚರಣಾ ವಲಯಗಳ ಸಂಖ್ಯೆಯನ್ನು ಐದರಿಂದ ಏಳಕ್ಕೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸ್ಟೀರಿಂಗ್ ಸಮಿತಿ ರಚಿಸುವುದರ ಜೊತೆಗೆ ಅಂಗಾಂಗ ವಿತರಣೆಯನ್ನು ಸಮರ್ಪಕವಾಗಿ ಒದಗಿಸಲು ಮೂತ್ರಪಿಂಡ ಹಂಚಿಕೆ ನೀತಿಯನ್ನು ಪರಿಷ್ಕರಿಸಲು ಚರ್ಚಿಸಲಾಯಿತು ಎಂದು ಹೇಳಿದ್ದಾರೆ. ಈಚೆಗೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜೀವಸಾರ್ಥಕತೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.












Click it and Unblock the Notifications