Explainer: ಸಿದ್ದು vs ಡಿಕೆಶಿ: 100 ದಿನದ ಆಡಳಿತದಲ್ಲಿ ಯಾರು ಬೆಸ್ಟ್? ಜನರಿಗೆ ಹೆಚ್ಚು ತಲುಪಿದ್ದು ಯಾರ ಆಡಳಿತ?
Siddaramaiah vs DK Shivakumar: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೊದಲ 100 ದಿನಗಳ ಆಡಳಿತ ಇದೀಗ ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳ ಜಾರಿ, ಜನಕಲ್ಯಾಣ ಮತ್ತು ಆರ್ಥಿಕ ನಿರ್ವಹಣೆಗೆ ಒತ್ತು ನೀಡಿದರೆ, ಇದೀಗ ನಾಯಕತ್ವ ಬದಲಾವಣೆ ಬಳಿಕ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ, ಮೂಲಸೌಕರ್ಯ, ನೀರಾವರಿ ಹಾಗೂ ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಿದ್ದಾರೆ.
ಅಧಿಕಾರವಹಿಸಿಕೊಂಡ ಮೊದಲ 100 ದಿನದ ಆಡಳಿತವನ್ನ ಗಮನಿಸಿದರೆ.. ಇಬ್ಬರ ಜವಾಬ್ದಾರಿ ಮತ್ತು ಆದ್ಯತೆಗಳು ವಿಭಿನ್ನವಾಗಿದ್ದರೂ, 100 ದಿನಗಳ ಆಡಳಿತದ ಲೆಕ್ಕಾಚಾರದಲ್ಲಿ ಜನರಿಗೆ ನೇರವಾಗಿ ತಲುಪಿದ ಯೋಜನೆಗಳು ಯಾವುವು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಗ್ಯಾರಂಟಿಗಳ ಜಾರಿ ಸಿದ್ದರಾಮಯ್ಯ ಅವರ ಆಡಳಿತಕ್ಕೆ ಎಷ್ಟು ಪರಿಣಾಮ ಬೀರಿತು? ಡಿಕೆ ಶಿವಕುಮಾರ್ ಅವರ ಅಭಿವೃದ್ಧಿ ಕಾರ್ಯಗಳು ಜನರ ಗಮನ ಸೆಳೆದಿವೆಯೇ? 100 ದಿನಗಳ ಆಡಳಿತದಲ್ಲಿ ಯಾರ ಕಾರ್ಯಗಳು ಹೆಚ್ಚು ಜನಪ್ರಿಯವಾಗಿವೆ? ಜನಾಭಿಪ್ರಾಯ ಏನು ಹೇಳುತ್ತದೆ ಎಂಬುದನ್ನು ಸಂಪೂರ್ಣ ತಿಳಿಯೋಣ.

100 ದಿನಗಳಲ್ಲಿ ಸಿದ್ದರಾಮಯ್ಯ ಅಜೆಂಡಾ ಏನಾಗಿತ್ತು?
2023 ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿದ್ದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಯಿತು. ಐದು ಯೋಜನೆಗಳ ಜಾರಿಗೆ ಸರ್ಕಾರ ಹಂತ ಹಂತವಾಗಿ ಮುಂದಾಯಿತು.
ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ, ಗೃಹಜ್ಯೋತಿ ಯೋಜನೆ ಮೂಲಕ ಅರ್ಹ ಕುಟುಂಬಗಳಿಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯ ಯಜಮಾನಿಗೆ ₹2,000. ಅನ್ನಭಾಗ್ಯ ಯೋಜನೆಯಡಿ ಆಹಾರ ಭದ್ರತೆ ಮತ್ತು ಯುವನಿಧಿ ಮೂಲಕ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಭರವಸೆ ಜಾರಿಗೆ ತರಲಾಯಿತು. ಆದರೆ ಒಂದು ವಿಷಯ ಇಲ್ಲಿ ಮುಖ್ಯ. 100 ದಿನ ಪೂರ್ಣಗೊಂಡ ವೇಳೆಗೆ ಐದು ಗ್ಯಾರಂಟಿಗಳಲ್ಲಿ ನಾಲ್ಕು ಯೋಜನೆಗಳು ಜಾರಿಗೆ ಬಂದಿದ್ದವು. ಯುವನಿಧಿ ಯೋಜನೆ ನಂತರ ಜಾರಿಗೆ ಬಂತು.
ಸಿದ್ದರಾಮಯ್ಯ ಅವರ ಮತ್ತೊಂದು ಪ್ರಮುಖ ಅಸ್ತ್ರ: ಬಜೆಟ್
ಜುಲೈ 2023ರಲ್ಲಿ ಸಿದ್ದರಾಮಯ್ಯ ಅವರು ₹3.27 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದರು. ಐದು ಗ್ಯಾರಂಟಿಗಳಿಗೆ ಸುಮಾರು ₹52,000 ಕೋಟಿ ವೆಚ್ಚವಾಗಲಿದೆ ಎಂದು ಸರ್ಕಾರ ಅಂದಾಜಿಸಿತ್ತು. ಅಂದರೆ ಮೊದಲ 100 ದಿನಗಳಲ್ಲಿ ಸಿದ್ದರಾಮಯ್ಯ ಅವರ ಆಡಳಿತದ ಪ್ರಮುಖ ಫೋಕಸ್: ಕಲ್ಯಾಣ + ಗ್ಯಾರಂಟಿ + ಬಜೆಟ್ + ಸಾಮಾಜಿಕ ನ್ಯಾಯ ಎಂದು ಹೇಳಬಹುದು.
ಡಿಕೆಶಿ ಅವರ 100 ದಿನಗಳ ಫೋಕಸ್ ಏನು?
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರವಹಿಸಿಕೊಂಡಿದ್ದಾರೆ. ಡಿ ಕೆ ಶಿವಕುಮಾರ್ ಅವರ ಕಾರ್ಯಕ್ಷೇತ್ರದಲ್ಲಿ ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಪ್ರಮುಖವಾಗಿದ್ದವು. ಬೆಂಗಳೂರು ರಸ್ತೆ, ಸಂಚಾರ, ನಗರ ಮೂಲಸೌಕರ್ಯ, ಮಳೆನೀರು ನಿರ್ವಹಣೆ, ನೀರಾವರಿ ಮತ್ತು ಮೇಕೆದಾಟಿನಂತಹ ದೀರ್ಘಾವಧಿಯ ವಿಚಾರಗಳು ಅವರ ಫೋಕಸ್ನಲ್ಲಿದ್ದವು.
ಬೆಂಗಳೂರು ಅಭಿವೃದ್ಧಿ: ಡಿಕೆಶಿ ಅವರ ಪ್ರಮುಖ ಕ್ಷೇತ್ರ
ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿದ್ದ ಡಿ.ಕೆ. ಶಿವಕುಮಾರ್ ಅವರು ನಗರದಲ್ಲಿನ ರಸ್ತೆ, ಸಂಚಾರ, ಮಳೆನೀರು, ಮೂಲಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರ ಹುಡುಕುವ ಪ್ರಯತ್ನಕ್ಕೆ ಒತ್ತು ನೀಡಿದರು. ಸಿದ್ದರಾಮಯ್ಯ ಅವರ ಗ್ಯಾರಂಟಿಗಳು ನೇರವಾಗಿ ಜನರ ಖಾತೆ, ವಿದ್ಯುತ್ ಬಿಲ್ ಅಥವಾ ಬಸ್ ಪ್ರಯಾಣದಲ್ಲಿ ಕಾಣಿಸಿಕೊಂಡರೆ, ಡಿಕೆಶಿ ಅವರ ಬಹುತೇಕ ಯೋಜನೆಗಳು ಮೂಲಸೌಕರ್ಯ ಆಧಾರಿತವಾಗಿದ್ದವು. ಅಂದರೆ ಅವುಗಳ ಫಲಿತಾಂಶ ಅಳೆಯಲು ಹೆಚ್ಚು ಸಮಯ ಬೇಕಾಗುತ್ತದೆ.
ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ 100 ದಿನದ ಆಡಳಿತದಲ್ಲಿ ಜನರಿಗೆ ಸಿದ್ದರಾಮಯ್ಯ ಅವರ ಆಡಳಿತ ಹೆಚ್ಚು ಉತ್ತಮವಾಗಿ ಕಂಡು ಬಂದಿದೆ. ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳು ಜನರ ದೈನಂದಿನ ಬದುಕಿನಲ್ಲಿ ತಕ್ಷಣ ಗೋಚರಿಸುವಂತದ್ದು. ಉದಾಹರಣೆಗೆ ಬಸ್ ಪ್ರಯಾಣದ ಖರ್ಚು ಕಡಿಮೆಯಾಗುವುದು ಅಥವಾ ವಿದ್ಯುತ್ ಬಿಲ್ನಲ್ಲಿ ಉಳಿತಾಯವಾಗುವುದು.
ಮಹಿಳೆಯರಿಗೆ 2000 ರೂಪಾಯಿ ನೀಡುತ್ತಿರುವುದು ಸಿದ್ದರಾಮಯ್ಯ ಎಂಬ ಮೆಚ್ಚುಗೆ ಮಾತು ಗ್ರಾಮೀಣ ಭಾಗದ ಮಹಿಳೆಯರದ್ದಾಗಿದೆ. ಅಲ್ಲದೇ ಗ್ಯಾರಂಟಿ ಯೋಜನೆ ಜೊತೆಗೆ ಸಿದ್ದರಾಮಯ್ಯ ಇಡೀ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ ನಾಯಕರಾಗಿದ್ದಾರೆ. ಆದರೆ ಡಿ ಕೆ ಶಿವಕುಮಾರ್ ಅವರ ಜನಪ್ರಿಯತೆ ಸಿದ್ದರಾಮಯ್ಯ ಅವರಿಗಿಂತ ಕಡಿಮೆಯೇ ಆಗಿದೆ. ಗ್ಯಾರಂಟಿ ಯೋಜನೆಗಳನ್ನ ಮುಂದುವರೆಸಿಕೊಂಡು ಹೋಗುತ್ತಿರುವ ಡಿಕೆ ಶಿವಕುಮಾರ್ ಅವರ ಮೂಲಸೌಕರ್ಯ ಯೋಜನೆಗಳ ಬಗ್ಗೆ ಹೆಚ್ಚು ಒಲವು ತೋರಿದ್ದಾರೆ.
100 ದಿನದ ಆಡಳಿತದಲ್ಲಿ ಯಾರ ಕೈ ಮೇಲು?
100 ದಿನಗಳ ಅವಧಿಯಲ್ಲೇ ಜನರಿಗೆ ನೇರವಾಗಿ ತಲುಪಿದ ಗ್ಯಾರಂಟಿ ಯೋಜನೆಗಳು ಮತ್ತು ಚುನಾವಣಾ ಭರವಸೆಗಳ ಅನುಷ್ಠಾನವನ್ನು ಮಾನದಂಡವಾಗಿ ತೆಗೆದುಕೊಂಡರೆ, ಸಿದ್ದರಾಮಯ್ಯ ಅವರ ಆಡಳಿತ ಹೆಚ್ಚು ಗೋಚರಿಸುತ್ತದೆ.
ಇದಕ್ಕೆ ಪ್ರಮುಖ ಕಾರಣ ಐದು ಗ್ಯಾರಂಟಿಗಳ ಜಾರಿಗೆ ಸರ್ಕಾರ ಆರಂಭದಿಂದಲೇ ಆದ್ಯತೆ ನೀಡಿದ್ದು. 100 ದಿನ ಪೂರ್ಣಗೊಂಡ ಸಂದರ್ಭದಲ್ಲಿ ಸರ್ಕಾರದ ಪ್ರಮುಖ ರಾಜಕೀಯ ಸಂದೇಶವೂ ಇದೇ ಆಗಿತ್ತು. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದೇವೆ ಎಂಬುದು.
ಇನ್ನೊಂದೆಡೆ, ಡಿ.ಕೆ. ಶಿವಕುಮಾರ್ ಅವರ ಕೆಲಸವನ್ನು ದೀರ್ಘಾವಧಿಯ ಅಭಿವೃದ್ಧಿ ಮತ್ತು ಮೂಲಸೌಕರ್ಯದ ದೃಷ್ಟಿಯಿಂದ ನೋಡಬೇಕು. 100 ದಿನಗಳಲ್ಲೇ ರಸ್ತೆ, ನೀರು, ಸಂಚಾರ ಅಥವಾ ದೊಡ್ಡ ನೀರಾವರಿ ಯೋಜನೆಗಳ ಅಂತಿಮ ಫಲಿತಾಂಶ ನಿರೀಕ್ಷಿಸುವುದು ವಾಸ್ತವಿಕವಾಗುವುದಿಲ್ಲ.
ಜನರಿಗೆ ಯಾರು ಹೆಚ್ಚು ಇಷ್ಟ?
2025ರ People's Pulse ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಆಯ್ಕೆಯ ಪ್ರಶ್ನೆಗೆ ಸಿದ್ದರಾಮಯ್ಯ ಅವರಿಗೆ 29.2% ಪ್ರತಿಕ್ರಿಯೆ ಬಂದಿದ್ದರೆ, ಡಿ.ಕೆ. ಶಿವಕುಮಾರ್ ಅವರಿಗೆ 10.7% ಪ್ರತಿಕ್ರಿಯೆ ದಾಖಲಾಗಿತ್ತು ಎಂದು The Indian Express ವರದಿ ಮಾಡಿದೆ. ಇದೇ ಸಮೀಕ್ಷೆಯಲ್ಲಿ 48.4% ಮಂದಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ಷಮತೆಯನ್ನು ಉತ್ತಮ ಅಥವಾ ಅತ್ಯುತ್ತಮ ಎಂದು ಮೌಲ್ಯಮಾಪನ ಮಾಡಿದ್ದರು.
ಇದು ಎಲ್ಲ ಜನರೂ ಸಿದ್ದರಾಮಯ್ಯರನ್ನೇ ಇಷ್ಟಪಡುತ್ತಾರೆ ಎಂಬುದನ್ನು ಸಾಬೀತುಪಡಿಸುವುದಿಲ್ಲ. ಆದರೆ ಲಭ್ಯವಿರುವ ಆ ಸಮೀಕ್ಷೆಯಲ್ಲಂತೂ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಸಿದ್ದರಾಮಯ್ಯರಿಗೆ ಡಿಕೆಶಿಗಿಂತ ಹೆಚ್ಚಿನ ಬೆಂಬಲ ದಾಖಲಾಗಿತ್ತು.
ಗ್ಯಾರಂಟಿಗಳೇ ಸಿದ್ದರಾಮಯ್ಯ ಪ್ರಮುಖ ಬಲವೇ?
ಮೊದಲ 100 ದಿನಗಳ ದೃಷ್ಟಿಯಿಂದ ನೋಡಿದರೆ, ಗ್ಯಾರಂಟಿ ಯೋಜನೆಗಳೇ ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಗೋಚರಿಸುವ ಆಡಳಿತಾತ್ಮಕ ಗುರುತು ಎನ್ನಬಹುದು. ಆದರೆ ಇದರ ಮತ್ತೊಂದು ಮುಖವೂ ಇದೆ. ಗ್ಯಾರಂಟಿಗಳ ಹಣಕಾಸಿನ ಹೊರೆ ಮತ್ತು ಅದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಲಭ್ಯವಾಗುವ ಸಂಪನ್ಮೂಲಗಳ ಬಗ್ಗೆ ಚರ್ಚೆ ನಡೆದಿತ್ತು. ಸ್ವತಃ ಡಿ.ಕೆ. ಶಿವಕುಮಾರ್ ಅವರು 2023ರಲ್ಲಿ ಗ್ಯಾರಂಟಿಗಳಿಗಾಗಿ ಹಣ ಮೀಸಲಿಡುವುದರಿಂದ ಆ ವರ್ಷ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದಲ್ಲಿ ಒತ್ತಡ ಉಂಟಾಗಬಹುದು ಎಂದು ಹೇಳಿದ್ದರು.
100 ದಿನಗಳಲ್ಲಿ ಯಾರು ಬೆಸ್ಟ್?
ಒಂದು ವಾಕ್ಯದಲ್ಲಿ ಹೇಳುವುದಾದರೆ, ಮೊದಲ 100 ದಿನಗಳ ಮಾನದಂಡದಲ್ಲಿ ಜನರಿಗೆ ನೇರವಾಗಿ ತಲುಪಿದ ಯೋಜನೆಗಳು, ಚುನಾವಣಾ ಭರವಸೆಗಳ ಅನುಷ್ಠಾನ ಮತ್ತು ಗೋಚರಿಸುವ ಕಲ್ಯಾಣ ಕ್ರಮಗಳನ್ನು ನೋಡಿದರೆ ಸಿದ್ದರಾಮಯ್ಯ ಅವರ ಆಡಳಿತ ಹೆಚ್ಚು ಗಮನ ಸೆಳೆದಿತ್ತು.
ಡಿಕೆ ಶಿವಕುಮಾರ್ ಅವರ ಕಾರ್ಯಕ್ಷೇತ್ರದಲ್ಲಿ ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ ಮತ್ತು ಮೂಲಸೌಕರ್ಯದಂತಹ ದೀರ್ಘಾವಧಿಯ ವಿಷಯಗಳು ಇದ್ದುದರಿಂದ ಅವುಗಳ ಸಂಪೂರ್ಣ ಫಲಿತಾಂಶವನ್ನು 100 ದಿನಗಳಲ್ಲೇ ಅಳೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳನ್ನ ಡಿ ಕೆ ಶಿವಕುಮಾರ್ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದು, ಡಿ ಕೆ ಶಿವಕುಮಾರ್ ಅವರ ಜನಪ್ರಿಯತೆಯೂ ಇದೀಗ ಹೆಚ್ಚಾಗುತ್ತಿದೆ.


Click it and Unblock the Notifications
