Siddaramaiah vs DK Shivakumar: "ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಸಿಎಂ ಯಾರೆಂದು ತಿಳಿಸಲಿ''
ಬೆಂಗಳೂರು, ನವೆಂಬರ್ 22: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆ ಆಗಲಿದೆ. ನವೆಂಬರ್‌ನಲ್ಲಿ ಕ್ರಾಂತಿ ಆಗಲಿದೆ ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ದೂರಿದ್ದಾರೆ.
ಶಾಸಕರ ಕಚೇರಿ ಮುಂಭಾಗ ಆಯೋಜಿಸಿದ್ದ "ವಂದೇ ಮಾತರಂ ಸಂಭ್ರಮಾಚರಣೆ" ಕಾರ್ಯಕ್ರಮದ ಬಳಿಕ ಸುದ್ದಿಗಾರರ ಬಳಿ ಅವರು ಮಾತನಾಡಿದರು. ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಯಾರು ಮುಖ್ಯಮಂತ್ರಿ ಎಂದು ಸ್ಪಷ್ಟವಾಗಿ ತಿಳಿಸಬೇಕು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕಾದಾಟ ನಡೆಯುತ್ತಿರುವುದರಿಂದ ಸರ್ಕಾರ ಸತ್ತು ಹೋಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಪದವಿಯಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ನೀಡಿಲ್ಲವೆಂದರೆ ಸರ್ಕಾರ ನಡೆಯುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಆಡಳಿತಯಂತ್ರ ಕೋಮಾದಲ್ಲಿದೆ ಎಂದರು.

ಕರ್ನಾಟಕದಲ್ಲಿ ಸಾರ್ವಜನಿಕರು, ರೈತ ಸಮುದಾಯ, ವಿದ್ಯಾರ್ಥಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾಳಜಿ ಕಾಂಗ್ರೆಸ್ ಹೈಕಮಾಂಡ್‌ಗೆ ಇಲ್ಲದಾಗಿದೆ. ಒಂದು ಗ್ಯಾಂಗ್ ಸಿದ್ದರಾಮಯ್ಯನವರನ್ನು ಉಳಿಸಲು, ಮತ್ತೊಂದು ಗ್ಯಾಂಗ್ ಸಿದ್ದರಾಮಯ್ಯರನ್ನು ಇಳಿಸುವ ಮುಂದಾಗಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂದು ಒಂದು ತಂಡ, ಆಗಬಾರದೆಂದು ಮತ್ತೊಂದು ತಂಡ ತಂತ್ರ- ಕುತಂತ್ರ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಈ ನಡುವೆ ಅಪರಾಧ ಕೃತ್ಯಗಳು ಹೆಚ್ಚಾಗಿವೆ. ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜಕೀಯ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಇಲ್ಲಿ ಯಾರು ಮುಖ್ಯಮಂತ್ರಿ ಎಂದು ತಿಳಿಯುತ್ತಿಲ್ಲ. ರಾಹುಲ್ ಗಾಂಧಿ ವೀಕ್ ಲೀಡರ್ ಇಡೀ ರಾಜ್ಯದಲ್ಲಿ ವೀಕ್ ನಾಯಕತ್ವ ಎದ್ದು ಕಾಣುತ್ತಿದೆ. ಈ ಗೇಮ್‌ಗಳ ನಡುವೆ ರಾಜ್ಯದ ಜನರು ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬಗ್ಗೆ ತನ್ನ ತೀರ್ಮಾನವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್‌ನ ಇಬ್ಬರು ಶಾಸಕರು ಜೈಲಲ್ಲಿದ್ದಾರೆ. ಅವರ ಮತಗಳನ್ನು ಕೇಳಲು ಡಿಕೆಶಿ ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇಂತಹ ಪಾಡು ಬಂದಿರುವುದು ಶೋಚನೀಯ. 136 ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷದ ಕಾಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹೇಳುವುದಾದರೆ, ನಮ್ಮ ವಿರೋಧ ಪಕ್ಷ ಬಲವಾಗಿದೆ ಎಂದರ್ಥ. ಸರ್ಕಾರಕ್ಕೆ ಅಂಕುಶ ಹಾಕಲು ನಾವಿದ್ದೇವೆ. ನಾವು ಅದನ್ನು ಸಮರ್ಥವಾಗಿ ಮಾಡುತ್ತಿದ್ದೇವೆ ಎಂದು ಬಿಜೆಪಿ ನಡೆಯನ್ನು ಸಮರ್ಥಿಸಿಕೊಂಡರು.












Click it and Unblock the Notifications