ನಾನು ರಾಜಕೀಯ ನಿವೃತಿ ಪಡೆಯುತ್ತೇನೆ ಎಂದ ಸಿದ್ದರಾಮಯ್ಯ: ಕಾರಣವೇನು?
ಬೆಂಗಳೂರು, ಮೇ 03: ಗ್ಯಾರಂಟಿ ಗಳನ್ನು ಜಾರಿಗೆ ತಂದ ಮೇಲೆ ಸರ್ಕಾರದಲ್ಲಿ ಸಂಬಳ ಕೊಡಲು ದುಡ್ಡಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಯಾರಾದರೂ ಸರ್ಕಾರಿ ನೌಕರ ನಮಗೆ ಸಂಬಳ ನಿಂತುಹೋಗಿದೆ ಎಂದರೆ ನಾನು ರಾಜಕೀಯ ನಿವೃತಿ ಪಡೆಯುತ್ತೇನೆ. ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸುಳ್ಳು ಆರೋಪ ಮಾಡುವವರಿಗೆ ಕರ್ನಾಟಕದ ಹಣಕಾಸಿನ ಪರಿಸ್ಥಿತಿ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ.ಖಜಾನೆ ಖಾಲಿಯಾಗಿದ್ದರೆ ನಾವು ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಾಗುತ್ತಿ ತ್ತೇ? 36000 ಕೋಟಿ ರೂಗಳನ್ನು ವೆಚ್ಚ ಮಾಡಲು ಸಾಧ್ಯವಾಗುತ್ತಿತ್ತೆ. 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಹಾಗೂ ಗ್ಯಾರಂಟಿಗಳಿಗೆ ಮೀಸಲಿರಿಸಲಾಗಿದೆ ನರೇಂದ್ರ ಮೋದಿಯವರೇ ಎಂದರು. ಕಾಂಗ್ರೆಸ್ ಸರ್ಕಾರದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.

ಮೊದಲು ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತಾರೆ ಎನ್ನುತ್ತಿದ್ದವರು ಈಗ ಚುನಾವಣೆ ಯಾಗುವರೆಗೆ ಮಾತ್ರ ಗ್ಯಾರಂಟಿಗಳು ಇರಲಿವೆ ಎನ್ನುತ್ತಿದ್ದಾರೆ. ಅಪಪ್ರಚಾರವನ್ನು ಬಿಜೆಪಿ ಕೂಡಲೇ ನಿಲ್ಲಿಸಬೇಕು. ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದರು. ಇದು ನಿರಂತರ. ಜನ ಆಶೀರ್ವದಿಸಿ ಮತ್ತೆ ಅಧಿಕಾರ ಕೊಟ್ಟರೇ ಮುಂದೆಯೂ ಜಾರಿಯಾಗಲಿದೆ ಎಂದರು.
ಮೋದಿಯವರು ಲೂಟಿ ಹೊಡೆಯುವ ಗ್ಯಾಂಗ್ ಬಂದಿದೆ ಎಂದಿದ್ದಾರೆ. ನಾವು ಲೂಟಿ ಹೊಡೆಯುವವರಲ್ಲ. ಈ ರಾಜ್ಯದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬುವವರು. ಸಮಾಜದ ಮುಖ್ಯವಾಹಿನಿಗೆ ಅವರು ಬರಬೇಕೆಂದು ನಂಬಿಕೆ ಇಟ್ಟವರು ಕಾಂಗ್ರೆಸ್ ನವರು . ಲೂಟಿ ಮಾಡಲು ಬಂದಿದ್ದವರು ಬಿಜೆಪಿಯವರು ಎಂದರು.
ಗುತ್ತಿಗೆದಾರರ ಸಂಘದವರು 40% ಸರ್ಕಾರ ಎಂದು ಹೇಳಿದ್ದರು. ಇದರ ತನಿಖೆಗೆ ಆಯೋಗ ಈಗಾಗಲೇ ರಚನೆಯಾಗಿ ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಲೂಟಿ ಹೊಡೆದ ಗ್ಯಾಂಗ್ ನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆದಿದ್ದೇವೆ. ಮತ ಹಾಕುವ ಮುನ್ನ ನುಡಿದಂತೆ ಯಾರು ನಡೆದಿದ್ದಾರೆ ಎಂದು ಮತದಾರರು ಪರಿಶೀಲಿಸಬೇಕು ಎಂದರು.
ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಅವನ್ನೂ ಭರ್ತಿ ಮಾಡಿಲ್ಲ.ಭರ್ತಿ ಮಾಡಿದ್ದರೆ ದಲಿತರು ಹಿಂದುಳಿದವರಿಗೆ 50% ಮೀಸಲಾತಿ ದೊರೆಯುತ್ತಿತ್ತು. ಉಳಿದದ್ದು ಇತರರಿಗೆ ದೊರೆಯುತ್ತಿತ್ತು. ನರೇಂದ್ರ ಮೋದಿಯವರು ಅದನ್ನೂ ಮಾಡಲಿಲ್ಲ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇವನ್ನು ಕಡಿಮೆ ಮಾಡುವುದಾಗಿ ಹೇಳಿದ್ದರು. ಯಾವುದರ ಬೆಲೆಯೂ ಕಡಿಮೆ ಮಾಡಲು ಆಗಲಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಹತ್ತು ವರ್ಷ ಗಳಾದರೂ ಬಡವರ ಜೀವನ ಸುಧಾರಣೆ ಆಗಲಿಲ್ಲ. ಬದಲಿಗೆ ಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ರೈತರು ವ್ಯವಸಾಯಕ್ಕೆ ವೆಚ್ಚ ಮಾಡುವ ಹಣ ಮೂರು ಪಟ್ಟು ಹೆಚ್ಚಾಯಿತು ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.












Click it and Unblock the Notifications