• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲ ಬಜೆಟ್ ಮಂಡನೆಯ ನೆನಪು ಮಾಡಿಕೊಂಡ ಸಿದ್ದರಾಮಯ್ಯ!

|

ಬೆಂಗಳೂರು, ಫೆಬ್ರವರಿ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯದ 68ನೇ ಹಾಗೂ ಅವರ 13 ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಮೊದಲ ಬಜೆಟ್ ಮಂಡಿಸಿದ ಅನುಭವ ಹಂಚಿಕೊಂಡಿದ್ದಾರೆ. ಅವರ ವಿವರಣೆ ಇಲ್ಲಿದೆ..

ಫೆಬ್ರವರಿ 16ನೇ ತಾರೀಖು ರಾಜ್ಯದ 68ನೇ ಹಾಗೂ ನನ್ನ 13ನೇ ಬಜೆಟ್ ಮಂಡಿಸುತ್ತಿರುವ ಈ ಹೊತ್ತು ನನ್ನ ಮೊದಲ ಬಜೆಟ್ ಮಂಡನೆಯ ನೆನಪಾಗುತ್ತಿದೆ.

ಕರ್ನಾಟಕ ಬಜೆಟ್ 2018 : ಚುನಾವಣಾ ಬಜೆಟ್‌ ನತ್ತ ಎಲ್ಲರ ಚಿತ್ತ

ನಾನು ಮೊದಲನೇ ಬಜೆಟ್ ಮಂಡಿಸಿದ್ದು 1994ರಲ್ಲಿ. ಆಗ ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದರು. ಹೊಸದಾಗಿ ಹಣಕಾಸು ಸಚಿವನಾಗಿದ್ದೆ. ಸ್ವಲ್ಪ ಅಂಜಿಕೆ ಇತ್ತು. ಯಾಕಂದ್ರೆ ನಾನು ಅರ್ಥಶಾಸ್ತ್ರ ಓದಿದವನಲ್ಲ. ಆದ್ರೆ ಅರ್ಥಶಾಸ್ತ್ರಜ್ಞರ ಜತೆ ಚರ್ಚೆ ಮಾಡಿ, ತಿಳ್ಕೊಂಡು, ಓದಿ ಅಧ್ಯಯನ ನಡೆಸಿದ ಮೇಲೆ ಕಾನ್ಫಿಡೆನ್ಸ್ ಬಂತು.

ಅಷ್ಟೆಲ್ಲ ತಯಾರಿಯ ನನ್ನ ಮೊದಲನೇ ಬಜೆಟ್ಟೇ ಬಹಳ ಪ್ರಶಂಸೆಗೂ ಒಳಗಾಯ್ತು. ದಿ ಹಿಂದೂ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಅದನ್ನು most pragmatic ಬಜೆಟ್ ಅಂತ ವಿಶ್ಲೇಷಣೆ ಮಾಡಿತ್ತು. ಆಗ ನನಗೆ ಕಾನ್ಫಿಡೆನ್ಸ್ ಹೆಚ್ಚಾಯ್ತು. ಅದು ನನಗೆ ಇವಾಗ್ಲೂ ಚೆನ್ನಾಗಿ ನೆನಪಿದೆ.

ನಾನು ಮೊದಲನೇ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಕೆಲವರು ನನ್ನನ್ನು ಅಪಹಾಸ್ಯ ಮಾಡಿದ್ದರು. 'ಈ ಸಿದ್ರಾಮಯ್ಯಂಗೆ 100 ಕುರಿ ಲೆಕ್ಕ ಹಾಕಕ್ಕೇ ಬರಲ್ಲ, ಅಂತದ್ರಲ್ಲಿ ಇಡೀ ರಾಜ್ಯದ ಬಜೆಟ್ ಹೇಗೆ ತಯಾರಿ ಮಾಡ್ತಾನೆ' ಅಂದಿದ್ರು. 'ರಾಜ್ಯಕ್ಕೆ ಬಹಳ ಅನ್ಯಾಯ ಆಗುತ್ತೆ. ಇಂತವರನ್ನು ಹಣಕಾಸು ಮಂತ್ರಿ ಮಾಡಿ ತಪ್ಪು ಮಾಡಿದ್ದಾರೆ' ಅಂತನೂ ಕೆಲವರು ಪತ್ರಿಕೆಗಳಲ್ಲಿ ಬರೆದಿದ್ದರು.

ಅಂತಹ ಅಪಹಾಸ್ಯಗಳಿಗೆ ನನ್ನ ಈವರೆಗಿನ ಹನ್ನೆರಡು ಬಜೆಟ್‌ಗಳೇ ಉತ್ತರ. ಮೊದಲಿದ್ದ ಅಂಜಿಕೆ ಈಗ ಇಲ್ಲ. ಯಾವುದೇ ಟೆನ್ಷನ್ ಇಲ್ಲದೆ, ಆರಾಮಾಗಿ ಬಜೆಟ್ ತಯಾರಿ ಮಾಡಿಕೊಂಡು ಮಂಡಿಸುತ್ತೀನಿ.

ಬಜೆಟ್ ಮಂಡನೆಗೆ ಕ್ಷಣಗಣನೆ : ಏನಿರಲಿದೆ ಬಜೆಟ್ ನ ಹೈಲೈಟ್ಸ್ ?

ಬಜೆಟ್ ತಯಾರಿಸೋದಕ್ಕೂ ಮುನ್ನ ಅನೇಕ ಸಂಘ ಸಂಸ್ಥೆಗಳ ಜೊತೆಗೆ ಸಮಾಲೋಚನೆ ಮಾಡ್ತೀನಿ. ರೈತರು, ಕೈಗಾರಿಕೋದ್ಯಮಿಗಳು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ-ಪಂಗಡದವ್ರು - ಹೀಗೆ ಬೇರೆ ಬೇರೆ ವರ್ಗಗಳ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸ್ತೀನಿ. ಇದು ನನ್ನ ಕ್ರಮ.

ಕರ್ನಾಟಕದಲ್ಲಿ ಇದುವರೆಗೆ ನನ್ನನ್ನೂ ಸೇರಿಸಿದಂತೆ 18 ಹಣಕಾಸು ಸಚಿವರು 68 ಬಜೆಟ್‌‌ಗಳನ್ನು ಮಂಡನೆ ಮಾಡಿದ್ದೀವಿ. ನಾನು ಕಂಡಂತೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಎಂ. ವೈ. ಘೋರ್ಪಡೆಯವರು ಮಂಡಿಸಿದ ಬಜೆಟ್‌ಗಳು ಅತ್ಯುತ್ತಮವಾಗಿದ್ದವು. ಇನ್ನು ಕೇಂದ್ರದಲ್ಲಿ ಮಧು ದಂಡವತೆ, ಸಿ.ಡಿ. ದೇಶ್‌ಮುಖ್ ಮತ್ತು ಡಾ. ಮನಮೋಹನ್ ಸಿಂಗ್ ಇವರುಗಳ ಬಜೆಟ್ ನನಗೆ ಮುಖ್ಯ ಅನ್ನಿಸ್ತವೆ.

ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರು 23 ವರ್ಷಗಳ ಅವಧಿಯಲ್ಲಿ 13 ಬಜೆಟ್‌ಗಳನ್ನ ಮಂಡಿಸಿದಾರೆ. ಮೊದಲು ವೀರೇಂದ್ರ ಪಾಟೀಲರು ಮುಖ್ಯ ಮಂತ್ರಿಯಾಗಿದ್ದಾಗ (1966-1971) ಹೆಗಡೆಯವರು ಹಣಕಾಸು ಸಚಿವರಾಗಿ ಆರು ಬಜೆಟ್ ಮಂಡಿಸಿದ್ರು.

ಆಮೇಲೆ ಸ್ವತಃ ತಾವೇ ಮುಖ್ಯ ಮಂತ್ರಿ ಮತ್ತು ಹಣಕಾಸು ಸಚಿವರಾಗಿ (1983 - 1988) ಏಳು ಬಜೆಟ್ ಮಾಡಿದ್ರು. ಕಾಕತಾಳೀಯ ಎನ್ನುವಂತೆ ಇಪ್ಪತ್ಮೂರು ವರ್ಷಗಳಲ್ಲೇ ನಾನೂ ನನ್ನ ಹದಿಮೂರನೇ ಬಜೆಟ್ ಮಂಡಿಸುತ್ತಿದ್ದೇನೆ. ಅದರಲ್ಲಿ ಎರಡು ಬಜೆಟ್‌ಗಳನ್ನು ಹಣಕಾಸು ಸಚಿವನಾಗಿ ಮಂಡಿಸಿದ್ದರೆ, ಐದು ಬಜೆಟ್‌ಗಳನ್ನು ಉಪಮುಖ್ಯಮಂತ್ರಿಯಾಗಿ ಮಂಡಿಸಿದ್ದೆ. ಮುಖ್ಯಮಂತ್ರಿಯಾಗಿ ನಾನು ಮಂಡಿಸುತ್ತಿರುವ 6 ಬಜೆಟ್ ಇದು.

ನಾನು ಮೊದಲ ಬಜೆಟ್ ಮಂಡಿಸಿದ್ದಕ್ಕೂ ಇವತ್ತಿಗೂ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಗರೀಕರಣ ಮತ್ತು ಕೈಗಾರೀಕರಣ ವೇಗದಿಂದ ನಡೆದಿದೆ. ಜನ ಸಂಪನ್ಮೂಲ ಹೆಚ್ಚಿದೆ. ಜನರ ಅಗತ್ಯಗಳು ಬೆಳೆಯುತ್ತಿವೆ. ಒಂದು ಕಡೆಯಿಂದ ಸೌಲಭ್ಯಗಳು ಮತ್ತು ಅವಕಾಶಗಳನ್ನು ಒದಗಿಸುತ್ತಾ ಬರುತ್ತಿದ್ದರೂ ಮತ್ತೊಂದು ಕಡೆಯಿಂದ ಅಗತ್ಯಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.

ಇವು ಯಾವುದೇ ಸಮಾಜದಲ್ಲಿ ಇರುವಂತಹದ್ದು. ನೀರಾವರಿ, ರಸ್ತೆಗಳ ಅಭಿವೃದ್ಧಿ, ಅವಕಾಶ ವಂಚಿತ ಸಮುದಾಯಗಳಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಇವೆಲ್ಲ ನಿರಂತರ ಕೆಲಸಗಳು. ಇವುಗಳಿಗೆಲ್ಲ ಹಂತಹಂತವಾಗಿ ಪರಿಹಾರ ಒದಗಿಸಿಕೊಡಬೇಕು.

ಉದಾಹರಣೆಗೆ, ನಾವು 2013ರಲ್ಲಿ ಆಡಳಿತಕ್ಕೆ ಬಂದಾಗ ನಮ್ಮ ಎಲ್ಲಾ ನೀರಾವರಿ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಲು ರೂ.50ಸಾವಿರ ಕೋಟಿ ಬೇಕಾಗಬಹುದು ಅಂತ ಅಂದಾಜು ಮಾಡಿ, ಅಷ್ಟನ್ನ ಒದಗಿಸಿದೆವು. ಆದ್ರೆ ಈಗ ನಿಂತು ನೋಡಿದರೆ ನೀರಾವರಿಗಾಗಿ ರೂ.1 ಲಕ್ಷ ಕೋಟಿ ಅಗತ್ಯ ಇದೆ.

ಹೀಗೆ ಅಗತ್ಯಗಳು ಬೆಳೀತಾನೆ ಇವೆ. ಈಗ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ರೈತರ ಜಮೀನು ಮುಳುಗಡೆ, ಅವರಿಗೆ ಪುನರ್ವಸತಿ, ಭೂಸ್ವಾಧೀನ ಹೀಗೆ ಖರ್ಚು ಹೆಚ್ಚುತ್ತಲೇ ಇವೆ. ಹಾಗಾಗಿ ಒಂದೇ ಬಜೆಟ್‌ನಲ್ಲಿ ಇಂತಹ ವಿಷಯಗಳಿಗೆ ಪರಿಹಾರ ಕಂಡುಕೊಳ್ಳೋಕೆ ಆಗಲ್ಲ. ಅವುಗಳನ್ನು ಹಂತಹಂತವಾಗಿಯೇ ಪರಿಹರಿಸಬೇಕು.

ನನ್ನ ಬಜೆಟ್ ಅನ್ನು 'ಅಹಿಂದ ಬಜೆಟ್' ಅಂತ ಬ್ರ್ಯಾಂಡ್ ಮಾಡಿದಾರೆ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಯಾಕಂದ್ರೆ ನಾನು ಅಹಿಂದ ಪರವಾಗಿ ನಿಲ್ಲುವವನು. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸಾಮಾಜಿಕ ನ್ಯಾಯದಿಂದ, ಅವಕಾಶಗಳಿಂದ ವಂಚಿತರಾದವರು. ಇವರಿಗೆ ಶಕ್ತಿ ತುಂಬಬೇಕು ಅನ್ನೋದು ನನ್ನ ಧ್ಯೇಯ.

ಆದರೆ, ನನ್ನ ಯೋಜನೆಗಳು ಅಹಿಂದ ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದಲ್ಲ. ಅನ್ನಭಾಗ್ಯ, ಮಾತೃಪೂರ್ಣ, ಕ್ಷೀರಭಾಗ್ಯ, ಕೃಷಿಭಾಗ್ಯ, ಇಂದಿರಾ ಕ್ಯಾಂಟೀನ್, ಕ್ಷೀರಧಾರೆ, ಕೃಷಿಯಂತ್ರಧಾರೆ ಇವೆಲ್ಲಾ ಎಲ್ಲಾ ವರ್ಗದ ಜನರಿಗೆ ಸಂಬಂಧಪಟ್ಟಿವೆ.

ಇವುಗಳ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಆಗಬೇಕು ಅಂದ್ರೆ ಕೈಗಾರಿಕೆಗಳು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮುಖ್ಯ. ಯುವಜನರ ಆಶೋತ್ತರಗಳನ್ನು ಕೈಗೂಡಿಸಬೇಕು. ಕೈಗಾರಿಕೆಗಳು ಬರೋದ್ರಿಂದ ಉದ್ಯೋಗ ಸೃಷ್ಟಿಯಾಗುತ್ತೆ, ಜನರ ಜೀವನ ಮಟ್ಟ ಸುಧಾರಿಸುತ್ತೆ. ವ್ಯಾಪಾರ -ವಹಿವಾಟನ್ನು ಸುಗಮಗೊಳಿಸುತ್ತವೆ. ಹಾಗಾಗಿ ನನ್ನ ಬಜೆಟ್‌ಗಳು ಇವೆಲ್ಲವುಗಳನ್ನ ಬ್ಯಾಲೆನ್ಸ್ ಮಾಡಕ್ಕೆ ಆದ್ಯತೆ ಕೊಡುತ್ತೆ. ಜನಪರ ಯೋಜನೆಗಳ ಜೊತೆಗೆ ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆಯಲ್ಲೂ ನಮ್ಮ ರಾಜ್ಯ ಮುಂಚೂಣಿಯಲ್ಲಿರೋದು ಇದೇ ಕಾರಣಕ್ಕೆ.

ನನ್ನ ಎಲ್ಲಾ ಬಜೆಟ್‌ ಜನಪರ ಬಜೆಟ್‌ಗಳೇ. ಯಾಕಂದ್ರೆ ನಾನು ಹಳ್ಳಿ ಜೀವನವನ್ನು ಕಂಡುಬಂದವನು. ಅಲ್ಲಿನ ಬಡವರ ಬದುಕುಗಳನ್ನು ನೋಡಿ ಬೆಳೆದವನು. ಊಟ ಇಲ್ಲದೆ, ಬಟ್ಟೆಯಿಲ್ಲದೆ, ಸರಿಯಾದ ಚಿಕಿತ್ಸೆ ಸಿಗದೆ ಬಳಲಿದ ಜನರ ಜೀವನಗಳೇ ನನ್ನ ಬಜೆಟ್‌ನ ಹಿಂದಿರುವ ಪಾಠಗಳು. ಬದುಕಿನ ಅನುಭವಗಳನ್ನು ನಾನು ಬಜೆಟ್ನಲ್ಲಿ ಅಳವಡಿಸುತ್ತೀನಿ. ಅದಕ್ಕೆ ನನ್ನ ಬಜೆಟ್‌ಗಳಿಗೆ ಅಹಿಂದ ಬಜೆಟ್, ಜನಪರ ಬಜೆಟ್, ಭಾಗ್ಯಗಳ ಬಜೆಟ್ ಅನ್ನೋ ಹೆಸರು ಬಂದಿವೆ.

ಇದುವರೆಗಿನ ನನ್ನ ಬಜೆಟ್‌ಗಳು ಕೇವಲ ಮಾತುಗಳಾಗದೆ ಅಭಿವೃದ್ಧಿಯ ಪಥದಲ್ಲಿ ಸಾಗಿರುವ ಕೃತಿಗಳಾಗಿವೆ. ಸದಾ ನನ್ನ ಮಾರ್ಗದರ್ಶಕರಾಗಿರುವ ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿ ಅವರುಗಳ ತತ್ತ್ವ ನನ್ನ ಬಜೆಟ್‌ಗಳನ್ನೂ ಕೈಹಿಡಿದು ನಡೆಸಿವೆ. ನನ್ನ ಪ್ರತಿ ಬಜೆಟ್ ಕೂಡ ನವ ಕರ್ನಾಟಕ ನಿರ್ಮಾಣದ ಕಡೆಗಿನ ದೃಢ ಹೆಜ್ಜೆಗಳಾಗಿವೆ. ಇದು ದೇಶದಲ್ಲಿ ಹೊಸ ಅಭಿವೃದ್ಧಿ ಮಾದರಿಯನ್ನು ರೂಪಿಸಿದೆ. ಕರ್ನಾಟಕದ ಅಭಿವೃದ್ಧಿ ಮಾದರಿ ಇಡೀ ದೇಶಕ್ಕೇ ಮಾದರಿಯಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister and Finance of state Siddaramaiah will present 2018-19 budget today. Siddaramaiah will create history by presenting 13th budget. He shared his experience on his first Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more