ದಲಿತ-ಹಿಂದುಳಿದ ಮಠಗಳಿಗೆ ಅನುದಾನ, ಚಿತ್ರದುರ್ಗದಲ್ಲಿ ಗುರುಕುಲಕ್ಕೆ ಜಾಗ: ಸಿಎಂ ಭರವಸೆ
ಹಿಂದುಳಿದ ಹಾಗೂ ದಲಿತ ಮಠಾಧೀಶ್ವರರ ಒಕ್ಕೂಟದ ಸ್ವಾಮೀಜಿಗಳ ನಿಯೋಗವು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಕುರಿತು ಚರ್ಚಿಸಿದರು. ಈ ವೇಳೆ ಮಠಗಳಿಗೆ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದಾರೆ. ಸ್ವಾಮೀಜಿಗಳ ನಿಯೋಗದ ಬೇಡಿಕೆಯಂತೆ ಎಲ್ಲ ದಲಿತ ಮತ್ತು ಹಿಂದುಳಿದ ಮಠಗಳಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಹಿಂದುಳಿದ ಮತ್ತು ದಲಿತ ಅರ್ಚಕರನ್ನು ರೂಪಿಸಲು ಅನುಕೂಲ ಆಗುವ ರೀತಿ ಗುರುಕುಲ ಆರಂಭಿಸಲು ಚಿತ್ರದುರ್ಗ ಜಿಲ್ಲೆಯಲ್ಲಿ ಜಾಗ ನೀಡುವಂತೆ ನಿಯೋಗ ಮನವಿ ಮಾಡಿದೆ. ಅದರಂತೆ ಜಾಗ ಗುರುತಿಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ ಎಲ್ಲ ಹಿಂದುಳಿದ ಮತ್ತು ದಲಿತ ಮಠಗಳಿಗೆ ಬೆಂಗಳೂರಿನಲ್ಲಿ ನಿವೇಶನ ಒದಗಿಸುವಂತೆ ಮಾಡಿರುವ ಮನವಿಯನ್ನು ಪರಿಶೀಲನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಬೇಕು
ಸಂವಿಧಾನದ ರಕ್ಷಣೆಯಾದ್ರೆ ನಮ್ಮ ಹಕ್ಕುಗಳೂ ರಕ್ಷಣೆಯಾಗುತ್ತೆ. ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಸಮಾಜಕ್ಕೆ ಅವಶ್ಯವಾಗಿದ್ದಂತಹ ಅತ್ಯುತ್ತಮ ಸಂವಿಧಾನವನ್ನು ನೀಡಿದವರು ಅಂಬೇಡ್ಕರ್. ಈ ದೇಶದ ಸಾಮಾಜಿಕ ಪರಿಸ್ಥಿತಿ, ಜಾತಿ ವ್ಯವಸ್ಥೆ ಅಂಬೇಡ್ಕರ್ ಅವರಿಗೆ ಅರ್ಥ ಆದಷ್ಟು ಬೇರೆಯವರಿಗೆ ಆಗಿರಲಿಲ್ಲ. ಜಾತಿ ವ್ಯವಸ್ಥೆ ಇದ್ದಷ್ಟೂ ಕಾಲ ಮೀಸಲಾತಿ ಇರಲೇಬೇಕು ಎಂದು ಅಂಬೇಡ್ಕರ್ ಬಲವಾಗಿ ನಂಬಿದ್ದರು ಎಂದಿದ್ದಾರೆ.
ನಮ್ಮ ದೇಶದ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ವರ್ಗಕ್ಕೆ ಚಲನೆಯಿದೆ. ನಮ್ಮ ಸಮಾಜದಲ್ಲಿ ಶ್ರೀಮಂತ ಬಡವನಾದರೂ, ಬಡವ ಶ್ರೀಮಂತನಾದರೂ ಕಡೆಯವರೆಗೂ ಉಳಿದುಕೊಳ್ಳುವುದು ಹುಟ್ಟಿದ ಜಾತಿಯಲ್ಲಿ ಮಾತ್ರ. ಹಾಗಾಗಿ ಈ ಜಾತಿ ವ್ಯವಸ್ಥೆ ನಿಂತ ನೀರಿನಂತೆಯೇ ಇದೆ. ಇದನ್ನು ಮನಗಂಡ ಅಂಬೇಡ್ಕರ್ ಅವರು ಸ್ವಾತಂತ್ರ್ಯದ ಯಶಸ್ಸನ್ನು ಕಾಣಬೇಕಾದರೆ ಈ ದೇಶದ ಅವಕಾಶ ವಂಚಿತರು, ಶೋಷಿತರು, ದೌರ್ಜನ್ಯಕ್ಕೆ ಒಳಗಾದವರಿಗೆಲ್ಲರಿಗೂ ಸಮಾನ ಅವಕಾಶಗಳು ದೊರೆತು ಅವರೆಲ್ಲರೂ
ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕೆಂದಿದ್ದರು ಎಂದು ಸಿಎಂ ನೆನೆದಿದ್ದಾರೆ.
ಸ್ವಾತಂತ್ರ್ಯ ಸಿಕ್ಕ ನಂತರ ಒಬ್ಬ ವ್ಯಕ್ತಿ, ಒಂದು ಮತ ಜಾರಿಯಾಗಿದೆ. ಇದು ಈ ದೇಶದ ರಾಷ್ಟ್ರಪತಿಗಳಿಗೂ ಒಂದೇ ಮತ, ಒಬ್ಬ ಪೌರಕಾರ್ಮಿಕನಿಗೂ ಒಂದೇ ಮತ. ಬಸವಣ್ಣನವರು ಹೇಳಿದ್ದು ಕೂಡ ಇದನ್ನೇ, ಅಂಬೇಡ್ಕರ್ ಅವರು ಕೂಡ ಬಸವಣ್ಣನವರ ವಚನಗಳನ್ನು ಓದಿದ್ದರು. ಸಮಾಜದಲ್ಲಿ ಯಾವ ಕೆಲಸವೂ ಮೇಲೆ ಅಲ್ಲ, ಕೀಳೂ ಅಲ್ಲ. ಎಲ್ಲವೂ ಸಮಾನ ಎಂದಿದ್ದಾರೆ.

ಜನರನ್ನು ಹಿಂದಕ್ಕೆ ತಳ್ಳಬೇಡಿ, ಮುಂದಕ್ಕೆ ಎಳೆಯಲು ಪ್ರಯತ್ನ ಮಾಡಬೇಕು. ಮುಂದಕ್ಕೆ ಎಳೆಯಲು ಸಾಧ್ಯವಾಗದಿದ್ದರೆ ಅವರನ್ನು ಕನಿಷ್ಠ ಪಕ್ಷ ಅಲ್ಲೇ ಬಿಡಿ. ಆದರೆ ಹಿಂದಕ್ಕೆ ಮಾತ್ರ ತಳ್ಳಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಅಲ್ಲದೆ ತಾನು ಓದಿಕೊಂಡಿರುವುದು ಸ್ವಾರ್ಥಕ್ಕಾಗಿ ಅಲ್ಲ, ಅಸಮಾನತೆ ಹೋಗಲಾಡಿಸಲು ಎಂದಿದ್ದರು. ನಾವು ಕೂಡ ಸಾಧ್ಯವಾದಷ್ಟರ ಮಟ್ಟಿಗೆ ಅವರ ತತ್ವಗಳನ್ನು ಅಳವಡಿಸಿಕೊಳ್ಳೋಣ ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.












Click it and Unblock the Notifications