Breaking: ಬಿಜೆಪಿ ಸರ್ಕಾರದ ಹಗರಣ ವಿವರ ಬಿಚ್ಚಿಟ್ಟ ಸಿದ್ದರಾಮಯ್ಯ
ಬೆಂಗಳೂರು, ಮೇ 4: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮುಳುವಾಗಿರುವ ಪಿಎಸ್ಐ ನೇಮಕಾತಿ ಅಕ್ರಮ, 40% ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಶಭಾಷ್ ಎಂದಿದ್ದಾರೆ. ಕಾಮನ್ ಮ್ಯಾನ್ ಸರ್ಕಾರ ಎಂದು ಹೊಗಳಿದ್ದಾರೆ. ಆದರೆ, ಇದು ಕಮಿಷನ್ ಸರ್ಕಾರ ಎಂಬುದು ಸಾರ್ವಜನಿಕರಿಗೆ ಗೊತ್ತಾಗಿದೆ. 40% ಕಮಿಷನ್ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಪೂರ್ಣ ಬೆಂಬಲ ಸಿಕ್ಕಿದೆ. ನಾ ಖಾವೋಂಗಾ ನಾ ಖಾನೇ ದೂಂಗಾ ಎಂದು ಹೇಳುತ್ತಾರೆ ಆದರೆ, ಯಾವುದೂ ಆಚರಣೆಯಲ್ಲಿಲ್ಲ. ಭ್ರಷ್ಟರ ವಿರುದ್ಧ ಕ್ರಮ ಜರುಗಿಸಿಲ್ಲ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಶೇ 10ರಷ್ಟು ಕಮಿಷನ್ ಆರೋಪ ಮಾಡಿದ ಬಿಜೆಪಿ ಈಗ 40% ಕಮಿಷನ್ ಗಳಿಸುತ್ತಿದೆ. ಈ ಬಗ್ಗೆ ತನಿಖೆ ನಡೆಸುತ್ತಿಲ್ಲ.
ಪಿಎಸ್ಐ ನೇಮಕಾತಿ ಅಕ್ರಮ: ಆರೋಪಿತರನ್ನು ಬಂಧಿಸುವಲ್ಲಿ ವಿಳಂಬ ಮಾಡುವ ಮೂಲಕ ತನಿಖೆ ಹಾದಿ ದಿಕ್ಕು ತಪ್ಪಿಸಿದ್ದಾರೆ. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ವರ್ಗಾವಣೆ ಮಾಡುವ ಮೂಲಕ ಅಕ್ರಮದ ತನಿಖೆ ಕುಂಠಿತಗೊಳಿಸಲಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಅಷ್ಟೇ ಇದು ದೊಡ್ಡ ಹಗರಣವಲ್ಲ ಎಂದಿದ್ದಾರೆ. ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಳ್ಳುತ್ತಿಲ್ಲ. ಇಬ್ಬರು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದರೂ ಇವರ ವಿರುದ್ಧ ಎಫ್ಐಆರ್ ಹಾಕಿ ತನಿಖೆ ಏಕೆ ನಡೆಸಿಲ್ಲ.
ಅಕ್ರಮದಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳು ತಾವೇ ಕಿಂಗ್ ಪಿನ್ ಗಳು ಎಂದು ಬಿಂಬಿಸುತ್ತಿದ್ದಾರೆ. ಅಸಲಿ ಕಿಂಗ್ ಪಿನ್ ಗಳು ಯಾರು ಎಂಬುದನ್ನು ಮುಚ್ಚಿ ಹಾಕಲಾಗಿದೆ.

ಆರಗ ಜ್ಞಾನೇಂದ್ರ ನೇರ ಹೊಣೆ:
371 ಜೆ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ಕೋರಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ನೆರವಾಗುವಂತೆ ಕೋರಿ ಪಶು ಸಂಗೋಪಣಾ ಸಚಿವ ಪ್ರಭು ಚೌವಾಣ್ ಅವರು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಕಲಬುರಗಿಯ ಅಫಜಲ ಪುರ ಕೇಂದ್ರವೊಂದರಲ್ಲೇ ಭಾರಿ ಅಕ್ರಮ ನಡೆದಿದೆ ಎಂದು ಮಾಧ್ಯಮವರದಿಗಳನ್ನು ಉಲ್ಲೇಖಿಸಿದ್ದಾರೆ.
ಸಂಗನೂರು ಎಂಎಲ್ ಸಿ ಅವರು ಮಾರ್ಚ್ 15ರಂದು ಆರಗ ಜ್ಞಾನೇಂದ್ರ ಅವರುಗೆ ಪತ್ರ ಬರೆದು, ಅಭ್ಯರ್ಥಿಗಳು ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಬಗ್ಗೆ ತಿಳಿಸಿದ್ದಾರೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲವೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.











Click it and Unblock the Notifications