ಮೋದಿಯ ನಿದ್ರೆ ರಾಜ್ಯದ ಅಭಿವೃದ್ದಿಗೆ ತೊಂದ್ರೆ ಎಂದಿದ್ದ ಸಿದ್ದರಾಮಯ್ಯ: ಸಿಎಂ ವಿರುದ್ಧ ಮುಗಿಬಿದ್ದ ಬಿಜೆಪಿ ಕಲಿಗಳು!
ಬೆಂಗಳೂರು, ಜನವರಿ 17: 'ಪ್ರಧಾನಿಯ ಗಾಢ ನಿದ್ರೆ ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮಾಡಿ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿತಿಸಿದ್ದು, ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಲು ನೀವು ಎಲ್ಲಾ ನೈತಿಕ ಹಕ್ಕುಗಳನ್ನು ಕಳೆದುಕೊಂಡಿದ್ದೀರಿ. ನರೇಂದ್ರ ಮೋದಿ
ಅವರು ನಿಜವಾದ "ಕರ್ಮಯೋಗಿ" ಅವರ ಅಡಿಯಲ್ಲಿ ಭಾರತವು ಆರ್ಥಿಕ ಮತ್ತು ಜಾಗತಿಕ ಸೂಪರ್ ಪವರ್ ಆಗಿ ವೇಗವಾಗಿ ಹೊರಹೊಮ್ಮುತ್ತಿದೆ ಮತ್ತು ಇತರ ರಾಷ್ಟ್ರಗಳಿಗಿಂತ ಉತ್ತಮವಾಗಿ ಮುನ್ನಡೆಯುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ಈ ಮಹಾನ್ ರಾಷ್ಟ್ರದ ಜನರಿಗಾಗಿ ಪಟ್ಟುಬಿಡದೆ ಮತ್ತು ಶ್ರದ್ಧೆಯಿಂದ ಶ್ರಮಿಸುತ್ತಿದ್ದಾರೆ, 9 ವರ್ಷಗಳಿಗೂ ಹೆಚ್ಚು ಕಾಲ ಕೆಲಸಕ್ಕೆ ಒಂದು ದಿನವೂ ಗೈರುಹಾಜರಾಗಲಿಲ್ಲ. ಅವರ ತಾಯಿ ನಿಧನರಾದ ದಿನವೂ ಸಹ, ಪ್ರಧಾನ ಮಂತ್ರಿ ಅವರು ಕರ್ತವ್ಯನಿಷ್ಠ ಮಗನಂತೆ ತಮ್ಮ ಅಗತ್ಯ ಕರ್ತವ್ಯಗಳನ್ನು ನಿರ್ವಹಿಸಿದ ನಂತರ ಅಧಿಕೃತ ಕೆಲಸದಲ್ಲಿ ತೊಡಗಿದ್ದರು.
ಮತ್ತೊಂದೆಡೆ, ನೀವು ಉತ್ತಮ ನಿದ್ರೆ ಮಾಡುತ್ತಿರುವಾಗ, ನಮ್ಮ ಸುಂದರ ಕರ್ನಾಟಕ ರಾಜ್ಯವು ಆಳವಾದ ಅವ್ಯವಸ್ಥೆಯ ಸ್ಥಿತಿಗೆ ಧುಮುಕಿದೆ. ನಿಮ್ಮ ಸರ್ಕಾರದ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯಿಂದಾಗಿ ರಾಜ್ಯದ ಹಣಕಾಸು ತೀವ್ರವಾಗಿ ಕುಸಿದಿದೆ, ರೈತ ವಿರೋಧಿ ನೀತಿಗಳಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಹಿಳೆಯರ ಸುರಕ್ಷತೆಯು ದುಃಸ್ವಪ್ನವಾಗಿ ಮಾರ್ಪಟ್ಟಿದೆ, ಅಲ್ಲಿ ಮಹಿಳೆಯರ ಮೇಲಿನ ಹಲ್ಲೆ ಮತ್ತು ಕಿರುಕುಳದ ಪ್ರಕರಣಗಳು ನಿಯಮಿತವಾಗಿ ವರದಿಯಾಗುತ್ತಿವೆ.
ಕ್ರಿಮಿನಲ್‌ಗಳು ಪೊಲೀಸರ ಭಯವಿಲ್ಲದೆ ಹಗಲು ಹೊತ್ತಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಪರಾಧಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರಕಾರ ಪೊಲೀಸರ ಕೈ ಕಟ್ಟಿದಂತೆ ಕಾಣುತ್ತಿದೆ. ನಿಮ್ಮ ತೀವ್ರ ತುಷ್ಟೀಕರಣ ನೀತಿಗಳು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯದ ಬಗ್ಗೆ ನಿಮ್ಮ ಕಣ್ಣುಗಳನ್ನು ಕುರುಡಾಗಿಸಿದೆ. ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೀರಿ.
ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಮೂಲಕ ನಿಮ್ಮ ಹೈಕಮಾಂಡ್ ದೊರೆಗಳನ್ನು ಮೆಚ್ಚಿಸಿ ಅಲುಗಾಡುತ್ತಿರುವ ತಮ್ಮ ಕುರ್ಚಿ ಉಳಿಸಿಕೂಳ್ಳಬಹುದು ಎಂಬ ಕನಸು ಕಾಣಬೇಡಿ. ತಾವು ಎಷ್ಟೇ ಹಾರಾಡಿದರೂ, ಚೀರಾಡಿದರೂ ಲೋಕಸಭೆ ಚುನಾವಣೆವರೆಗೆ ಮಾತ್ರ ತಮ್ಮ ಕುರ್ಚಿ ಭದ್ರ ಎಂಬುದು ಈಗ ಗುಟ್ಟಾಗಿ ಏನು ಉಳಿದಿಲ್ಲ ಎಂದಿದ್ದಾರೆ.

ಇಡೀ ವಿಶ್ವವೇ ಮೆಚ್ಚಿರುವ, ಇಡೀ ದೇಶವೇ ಪ್ರೀತಿಸುವ ಅದ್ವಿತೀಯ ನಾಯಕ ನಮ್ಮ ಪ್ರಧಾನಿ ಮೋದಿ ಅವರು. ಅವರ ಶಿಸ್ತಿನ ಜೀವನ, ಪರಿಶ್ರಮದ ಸ್ವಭಾವ, ಹಿಡಿದ ಕೆಲಸ ಮಾಡಿ ಮುಗಿಸುವ ಬದ್ಧತೆ ಇವೆಲ್ಲವೂ ಈ ದೇಶದ ಸಣ್ಣ ಮಕ್ಕಳಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದೇನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ಎಂಬ ಬಸವಣ್ಣನ ವಚನವನ್ನು ಉಲ್ಲೇಖಿಸಿ ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಹೇಳಿಯದ್ದೇನು?
ತನಗೆ ತಾನೇ ಪ್ರಚಾರ ಕೊಟ್ಟುಕೊಳ್ಳಲು ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡಲು ಸದಾ ಎದ್ದಿರುವ ನರೇಂದ್ರ ಮೋದಿ ಅವರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗಲೂ ತೂಕಡಿಸುತ್ತಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಕರ್ನಾಟಕದ ಕಟು ವಾಸ್ತವಕ್ಕೆ ಸ್ಪಂದಿಸದ ಮೋದಿಯಿಂದ ಸದಾ ಪಲಾಯನ. ಕೇಂದ್ರವು ಸರಿಯಾಗಿ ಅನುದಾನ ಕೊಡುತ್ತಿಲ್ಲ. ಕನ್ನಡಿಗರ ಮಹತ್ವಾಕಾಂಕ್ಷೆಗಳಿಗೆ ಕಿಂಚಿತ್ತು ಬೆಲೆ ನೀಡುತ್ತಿಲ್ಲ. ಕೇಂದ್ರದ ಪರಿಹಾರ ಹಣ ಇನ್ನೂ ರೈತರ ಕೈಗೆ ತಲುಪಿಲ್ಲ ಎಂದು ಆರೋಪಿಸಿದ್ದರು.
ಮೋದಿ ಮಂತ್ರವಿಷ್ಟೇ ಕಡೆಗಣಿಸು. ನಿರ್ಲಕ್ಷಿಸು. ನಿದ್ರಿಸು. ಮತ್ತದನ್ನೇ ಪುನರಾವರ್ತಿಸು! ಇನ್ನು ಬಿಜೆಪಿ ಸಂಸದರ ಮಂತ್ರ ಬಾಯಿಗೆ ಬೀಗ ಹಾಕಿಕೊಂಡಿರು. ಮೋದಿಯದ್ದೇ ಜಪ ಮಾಡಿಕೊಂಡಿರು. ಕನ್ನಡಿಗರ ನಂಬಿಕೆಗೆ ದ್ರೋಹ ಬಗೆಯುತ್ತಿರು. ಮೋದಿ ನಿಶ್ಚಿಂತೆಯಿಂದ ನಿದ್ರಿಸಲು ಮತ್ತದನ್ನೇ ಪುನರಾವರ್ತಿಸು ಎಂದು ತರಾಟೆಗೆ ತೆಗೆದುಕೊಂಡಿದ್ದರು. ಎದ್ದೇಳಿ, ಪ್ರಧಾನಮಂತ್ರಿಯವರೇ!ಕರ್ನಾಟಕದ ನ್ಯಾಯಯುತ ಪಾಲನ್ನು ಕೊಡಬೇಕಾದ ಸಮಯವಿದು ಎಂದು ತಮ್ಮ ಟ್ವೀಟ್ ಹೇಳಿಕೆಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದರು.












Click it and Unblock the Notifications