Siddaramaiah: ಸಿದ್ದರಾಮಯ್ಯ ಕಾನೂನು ಹೋರಾಟ, ಸುಪ್ರೀಂಕೋರ್ಟ್ ವಕೀಲರು ಬೆಂಗಳೂರಿಗೆ
ಬೆಂಗಳೂರು, ಆಗಸ್ಟ್ 17: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಯನ್ನು ಕರ್ನಾಟಕದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ನೀಡಿದ್ದಾರೆ. ಈ ಕುರಿತು ಕಾನೂನು ಹೋರಾಟ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಹ ಈ ವಿಚಾರದಲ್ಲಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದೆ.
ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವುದಾಗಿ 6 ಪುಟಗಳ ಆದೇಶವನ್ನು ಹೊರಡಿಸಿದ್ದಾರೆ.

ಈ ವಿಚಾರದಲ್ಲಿ ಕಾನೂನು ಹೋರಾಟವನ್ನು ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಅಥವ ಸುಪ್ರೀಂಕೋರ್ಟ್‌ನಲ್ಲಿ ಮಾತ್ರ ಪ್ರಶ್ನೆ ಮಾಡಬಹುದಾಗಿದೆ. ಆದ್ದರಿಂದ ಶನಿವಾರ ಸಂಜೆ ಅಥವ ಭಾನುವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ತಮ್ಮ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಿದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 'ನಮ್ಮಭಿಮಾನದ ಅಭಿನಂದನಾ ಸಮಾರಂಭವನ್ನು ಅರಮನೆ ಮೈದಾನದಲ್ಲಿ ಆಯೋಜನೆ ಮಾಡಿದೆ. ಸಿದ್ದರಾಮಯ್ಯ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಸುಪ್ರೀಂಕೋರ್ಟ್ ವಕೀಲರು ಬೆಂಗಳೂರಿಗೆ: ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಛೇರಿ ಕೃಷ್ಣದಲ್ಲಿ ತುರ್ತು ಸಭೆಯನ್ನು ನಡೆಸಿದರು. ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗುಪ್ತಚರ ಇಲಾಖೆ ಮುಖ್ಯಸ್ಥ ಶರತ್ ಚಂದ್ರ ಭಾಗಿಯಾಗಿದ್ದರು.
ಬಳಿಕ ಮುಖ್ಯಮಂತ್ರಿಗಳು ಸಚಿವರ ಜೊತೆ ಸಭೆಯನ್ನು ನಡೆಸಿ ನಿಗದಿತ ಕಾರ್ಯಕ್ರಮಗಳಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ಹೈಕಮಾಂಡ್ ಸಹ ಬೆಂಬಲ ನೀಡಿದೆ. ಕಾಂಗ್ರೆಸ್ ನಾಯಕರು, ಸುಪ್ರೀಂಕೋರ್ಟ್ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಇಬ್ಬರು ಬೆಂಗಳೂರಿಗೆ ಬಂದ ಬಳಿಕ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈಗಾಗಲೇ ರಾಜ್ಯಪಾಲರ ಕ್ರಮವನ್ನು ಪ್ರಶ್ನೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ ಯಾವಾಗ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿದೆ ಕಾದು ನೋಡಬೇಕಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಖಾಸಗಿ ದೂರುಗಳಿಗೆ ಈಗ ಪ್ರಾಸಿಕ್ಯೂಷನ್‌ಗೆ ಅನುಮತಿಯನ್ನು ನೀಡಿರುವ ಬಲ ಸಿಕ್ಕಿದೆ. ಆದ್ದರಿಂದ ಈಗ ಪೊಲೀಸರು ತನಿಖೆಯನ್ನು ಕೈಗೊಳ್ಳಬಹುದು. ಆದರೆ ಸಿಬಿಐ ಅಥವ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕೋರ್ಟ್ ಮೊರೆ ಹೋಗಲಾಗಿದೆ. ಈ ಕುರಿತು ಆಗಸ್ಟ್ 20ರಂದು ತೀರ್ಪು ಪ್ರಕಟವಾಗಲಿದೆ.
ಕರ್ನಾಟಕದ ಪ್ರತಿಪಕ್ಷ ಬಿಜೆಪಿ, ಬಿಜೆಪಿ ನಾಯಕರು, ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ತನಿಖೆಗೆ ಒಳಗಾಗಲಿ ಎಂದು ಒತ್ತಾಯಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು, ಸಚಿವರು ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications