ಬ್ರಾಹ್ಮಣ, ವೈಶ್ಯರೂ ಸೇರಿ ಎಲ್ಲ ಜಾತಿಗೂ ಸಿದ್ದು ಮೀಸಲಾತಿ ಭಾಗ್ಯ
ಬೆಂಗಳೂರು, ಜೂನ್ 6: ಬ್ರಾಹ್ಮಣ, ವೈಶ್ಯರು ಸೇರಿದ ಹಾಗೆ ಎಲ್ಲ ಜಾತಿಯ ಬಡವರಿಗೆ ಹಾಗೂ ಶೋಷಿತರಿಗೆ ಮೀಸಲಾತಿ ಭಾಗ್ಯ ದಯಪಾಲಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಇರುವಾಗ ಕಾಂಗ್ರೆಸ್ ಪಕ್ಷವು ಎಲ್ಲ ಜಾತಿಗೂ ಮೀಸಲಾತಿ ವಿಸ್ತರಿಸಲು ಮುಂದಾಗಿರುವುದು ಸ್ವಲ್ಪ ಮಟ್ಟಿಗೆ ಅಚ್ಚರಿಗೂ ಕಾರಣವಾಗಿದೆ. ಎಲ್ಲ ಸಮುದಾಯಕ್ಕೂ ಮೀಸಲಾತಿ ನೀಡುವ ಆಲೋಚನೆಯೇ ಕ್ರಾಂತಿಕಾರಿಯಾದದ್ದು.[ತಡರಾತ್ರಿ ಉಸ್ತುವಾರಿ ಭೇಟಿ ಮಾಡಿದ ಸಿದ್ದು: ಕಾಂಗ್ರೆಸ್ ನಲ್ಲಿ ಬದಲಾವಣೆಯ ಗಾಳಿ!]

ಆದರೆ, ಈ ನಿರ್ಣಯದ ಹಿಂದೆ ಬಿಜೆಪಿಗೆ ಹೊಡೆತ ಕೊಡುವ ಇರಾದೆಯಂತೂ ಎದ್ದು ಕಾಣುತ್ತಿದೆ. ಇದು ಕಾಂಗ್ರೆಸ್ ನ ಬುದ್ಧಿವಂತ ತಲೆಗಳ ಸಕತ್ ಐಡಿಯಾದಂತಿದೆ. ಆದರೆ ಇದರಿಂದ ಬಲಿಷ್ಠ ಜಾತಿಗಳ ಮೇಲೆ ಸಿಟ್ಟಿರುವ ಸಮುದಾಯಕ್ಕೆ ಕಾಂಗ್ರೆಸ್ ಬಗ್ಗೆ ಕ್ರೋಧವಾಗಿ ಪರಿವರ್ತನೆಯಾದರೆ ಹೇಗೆ ಎಂಬ ಪ್ರಶ್ನೆ ಕೂಡ ಏಳುತ್ತದೆ.[ನಾನು ಸಾಲ ಮನ್ನಾ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ- ಸಿದ್ಧರಾಮಯ್ಯ]

ಇನ್ನು ಸಾಮಾಜಿಕ ನ್ಯಾಯ ಅಂತ ನೋಡುವುದಾದರೆ ಮೀಸಲಾತಿಯ ವಿಸ್ತರಣೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ನಿರ್ಧಾರವನ್ನು ಸಮರ್ಥಿಸಿಕೊಳ್ಳಬಹುದು. ಮೇಲ್ಜಾತಿ ಎಂದು ಪರಿಗಣಿಸಿ ಮೀಸಲಾತಿಯಿಂದ ದೂರ ಇಟ್ಟವರಿಗೆ ಆರ್ಥಿಕ ಸ್ಥಿತಿಯ ಆಧಾರದಲ್ಲಿ ಈಗ ಮೀಸಲಾತಿ ನೀಡಿದರೆ ಕಾಂಗ್ರೆಸ್ ಗೆ ಅನುಕೂಲ ಸ್ಥಿತಿ ಸ್ವಲ್ಪ್ ಮಟ್ಟಿಗೆ ಏರ್ಪಡಬಹುದು ಎಂಬ ಸಲಹೆ ಕೇಳಿಬಂದಿದೆ.

ಮೀಸಲಾತಿಯನ್ನೇ ಮುಂದೆ ಮಾಡಿಕೊಂಡು, ಅದರ ಬಗ್ಗೆ ಆಗಾಗ ರಾಜಕೀಯ ಮಾಡಿ, ಬಿಜೆಪಿ ಲಾಭ ಮಾಡಿಕೊಳ್ಳುತ್ತಿದೆ. ಆದರೆ ಬ್ರಾಹ್ಮಣರೂ ಸೇರಿ ಮೇಲ್ಜಾತಿ ಎನಿಸಿಕೊಂಡ ಬಡವರು, ಶೋಷಿತರಿಗೆ ಮೀಸಲಾತಿ ಕಲ್ಪಿಸುತ್ತಿಲ್ಲ. ಈಗ ಕಾಂಗ್ರೆಸ್ ನಿಂದ ಅಂಥ ಕೆಲಸ ಆದರೆ ಆ ಜಾತಿಗಳೂ ಕಾಂಗ್ರೆಸ್ ಬೆನ್ನಿಗೆ ನಿಲ್ಲುತ್ತವೆ ಎಂಬ ಲೆಕ್ಕಾಚಾರ ಇದರಲ್ಲಿದೆ.[ಮೈಸೂರು: ಕೊಟ್ಟ ಮಾತು ದಿಟ್ಟ ಸಾಧನೆ, ಸಾಧನಾ ಸಮಾವೇಶದ ಹೈಲೈಟ್ಸ್]

ಮೀಸಲಾತಿ ಸೌಲಭ್ಯದ ವ್ಯಾಪ್ತಿಗೆ ಈ ಸಮುದಾಯಗಳನ್ನು ತಂದರೆ ಕಾಂಗ್ರೆಸ್ ಉದ್ದೇಶ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ಬಿಜೆಪಿ ಕೂಡ ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾದ ಅನಿವಾರ್ಯಕ್ಕೆ ಸಿಲುಕುತ್ತದೆ ಎಂಬ ಸಲಹೆಯನ್ನು ನೀಡಲಾಗಿದೆ.












Click it and Unblock the Notifications