ರಾಜಕೀಯ ಅಭದ್ರತೆಯಿಂದಾಗಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜ.27: ಸಿದ್ದರಾಮಯ್ಯ ಅವರಿಗೆ ರಾಜಕೀಯ ಅಭದ್ರತೆ ಕಾಡುತ್ತಿದೆ. ಹೀಗಾಗಿ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದೆ ಹೋಗಿದ್ದಾರೆ ಎಂದು ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಇವರ ತಿಕ್ಕಾಟದಿಂದ ಮುಂದಿನ ದಿನಗಳಲ್ಲಿ ಬಹಳಷ್ಟ ಜನ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆಯೇ ಹೊರೆತು ಅಲ್ಲಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಡಿ.ಕೆ.ಶಿವಕುಮಾರ್ ಮೊದಲು ಬಿಜೆಪಿ ಶಾಸಕರು 'ನಿರಂತರ ಸಂಪರ್ಕದಲ್ಲಿದ್ದಾರೆʼ, ʼಬಂದೇ ಬಿಡುತ್ತಾರೆʼ ಎಂದು ಹೇಳಿದರು. ಈಗ ಮುಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬರಲಿದ್ದಾರೆ ಎನ್ನುತ್ತಿದ್ದಾರೆ. ಅಂದರೆ ಮೊದಲು ಮಾತನಾಡಿದ್ದು ಸುಳ್ಳು ಎಂದು ಸ್ಷಷ್ಟವಾಗುತ್ತದೆ. ಯಾವ ಶಾಸಕರು ಬರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಸ್ಪರ್ಧೆ ಇದೆ. ಡಿ.ಕೆ.ಶಿವಕುಮಾರ್ ಅವರು ಅವರು, ಇವರ ಬಳಿ ಮಾತನಾಡಿದ್ದೇನೆ ಎಂದು ಅಲ್ಲಲ್ಲಿ ಸುದ್ದಿ ಮಾಡುತ್ತಾರೆ ಎಂದರು.

ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರು ಪೈಪೋಟಿ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೇ ಉತ್ತರಿಸುತ್ತಾ, ಅದು ಆಂತರಿಕ ಪೈಪೋಟಿ. ಇದರಲ್ಲಿ ಯಾವುದೇ ಸತ್ಯಾಂಶವೂ ಇಲ್ಲ ವಾಸ್ತವಾಂಶವೂ ಇಲ್ಲ. ಆ ಭೂಮಿಕೆಯೇ ಇಲ್ಲ ಎಂದರು.
ಕಾಂಗ್ರೆಸ್ ಅಪ್ರಸ್ತುತವಾಗಲಿದೆ:
ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ. ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಗೋವಾದಲ್ಲಿ ಅಧಿಕಾರಕ್ಕೆ ಬರುವ ಪರಿಸ್ಥಿತಿಯೇ ಇಲ್ಲ. ಹೀಗಾಗಿ ಈ ಐದೂ ರಾಜ್ಯಗಳ ಚುನಾವಣೆಯಾದ ಮೇಲೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಪ್ರಸ್ತುತ ಆಗಲಿದೆ. ರಾಷ್ಟ್ಟಮಟ್ಟದಲ್ಲಿ ಒಂದು ಪಕ್ಷ ಅಪ್ರಸ್ತುತವಾದಾಗ ಅದರ ಕರಿನೆರಳು ರಾಜ್ಯದ ಕಾಂಗ್ರೆಸ್ ಮೇಲೂ ಹಾಗೂ ರಾಜಕಾರಣದ ಮೇಲೂ ಆಗಲಿದೆ. ಅದರ ಪರಿಣಾಮವನ್ನು ಬರುವ ದಿನಗಳಲ್ಲಿ ಕಾಣಲಿದ್ದೇವೆ ಎಂದರು.
ಬೇಜವಾಬ್ದಾರಿ ಹೇಳಿಕೆ ಕೊಡುವುದಿಲ್ಲ:
ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆಯೇ ಎಂಬ ಪ್ರಶ್ನೆಗೆ , 'ನಾನು ಎಲ್ಲಿಯೂ ಈ ರೀತಿ ಹೇಳಿಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅದರ ಬಗ್ಗೆ ಮಾತನಾಡಲು ನಾನು ಸಿದ್ಧವಿಲ್ಲ. ಕಾಂಗ್ರೆಸ್ ನಾಯಕರ ಹಾಗೆ ಬೇಜವಾಬ್ದಾರಿಯಿಂದ ಮಾತನಾಡಲೂ ಸಾಧ್ಯವಿಲ್ಲʼ ಎಂದರು.
ರಮೇಶ್ ಜಾರಕಿಹೊಳಿಯವರು ಆಪರೇಷನ್ ಕಮಲದ ಉಸ್ತುವಾರಿ ವಹಿಸಿಕೊಂಡಂತೆ ಮಾತನಾಡುತ್ತಿದ್ದು, ಎಲ್ಲಿ ಹೋದರೂ 15- 20 ಜನ ಬರಲಿದ್ದಾರೆ ಎನ್ನುತ್ತಾರೆ. ನಳಿನ್ ಕುಮಾರ್ ಕಟೀಲ್ ಸಹ ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅದೆಲ್ಲಾ ಗೊತ್ತಿರುವ ವಿಚಾರ ಎಂದರು.
Recommended Video
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಚುನಾವಣೆ ಬಳಿಕ ನಮ್ಮನ್ನು ಬಿಟ್ಟು ಯಾರೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, 'ಅದು ಅವರ ಸದಾಶಯ. ಯಾವಾಗಲೂ ಹಾಗೆಯೇ ಇರುತ್ತದೆ. ಸರ್ಕಾರಗಳು ಅತಂತ್ರವಾದರೆ ಅವರು ಸ್ವತಂತ್ರರಾಗುತ್ತಾರೆ ಎಂದು ಸಹಜವಾಗಿ ಆಶಿಸುತ್ತಾರೆ' ಎಂದು ಮಾರ್ಮಿಕವಾಗಿ ಹೇಳಿದರು.












Click it and Unblock the Notifications