ಸಿಎಂ ಹುದ್ದೆಯಿಂದ ಕೆಳಗಿಳಿಯುವ ಸುಳಿವು ಕೊಟ್ರಾ ಸಿದ್ದರಾಮಯ್ಯ?
ಬೆಂಗಳೂರು, ಜೂನ್ 24: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹೊಸ ವಿಚಾರವಲ್ಲ. ಪದೇ ಪದೇ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಣದಲ್ಲಿ ಈ ವಿಚಾರ ಸಾಕಷ್ಟು ಸದ್ದು ಮಾಡುತ್ತಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಹೇಳಿಕೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಣದ ನಾಯಕರು ಹೇಳಿಕೆ ನೀಡುತ್ತಿದ್ದು, ಈ ಬಣಗಳ ಕಿತ್ತಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ್ರು. ಆದರೆ, ಇದೀಗ ಮತ್ತೆ ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಪಾಳಪಯದಲ್ಲಿ ಸಂಚಲನ ಸೃಷ್ಟಿಸಿದೆ.

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಭಿನ್ನಮತ ಬುಗಿಲೇಳಲಿದೆ ಎಂದು ಸಾಕಷ್ಟು ಚರ್ಚೆ ನಡೆದಿತ್ತು. ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಫಲಿತಾಂಶದ ಕ್ರೆಡಿಟ್ ಪಡೆಯಲು, ಸೋತರೆ ಬೇರೆಯವರ ತಲೆ ಮೇಲೆ ಗೂಬೆ ಕೂರಿಸಲು ವೇದಿಕೆ ಸಿದ್ಧವಾಗಿತ್ತು. ಆದರೆ, ಕಾಂಗ್ರೆಸ್ ನಾಯಕರ ನಿರೀಕ್ಷೆಯಂತೆ ಈ ಬಾರಿ ಫಲಿತಾಂಶ ಬರದೇ ಕೇವಲ 9 ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
ಇತ್ತ ಡಬಲ್ ಡಿಜಿಟ್ ನಂಬರ್ ಗೆಲ್ಲದ ಕಾಂಗ್ರೆಸ್ ನಾಯಕರು ಫಲಿತಾಂಶದ ಬಳಿಕ ಸಿಎಂ, ಡಿಸಿಎಂ ಬಣದ ನಾಯಕರು ಮೌನಕ್ಕೆ ಜಾರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಫಲಿತಾಂಶದ ಕ್ರೆಡಿಟ್ ಪಡೆಯಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಮುಂದಾಗಿದ್ರು. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೀನಾಯವಾಗಿ ಕಾಂಗ್ರೆಸ್ ಸೋಲು ಅನುಭವಿಸಿದ ಹಿನ್ನೆಲೆ ಡಿ ಕೆ ಶಿವಕುಮಾರ್ ಅವರಿಗೆ ರಾಜಕೀಯದಲ್ಲಿ ದೊಡ್ಡ ಅಘಾತ ಉಂಟು ಮಾಡಿದೆ. ಹೀಗಾಗಿ ಒಬ್ಬರನ್ನೊಬ್ಬರು ದೂಷಿಸಲು ಎರಡು ಬಣಕ್ಕೂ ಸಾಧ್ಯವಾಗಿಲ್ಲ.
ಇನ್ನೂ ಗ್ಯಾರಂಟಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ನಾನು ಬದಲಾವಣೆಯಾದರೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ. ಯಾರೇ ಮುಖ್ಯಮಂತ್ರಿ ಆದರೆ ಯೋಜನೆಗಳು ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದು, ಹಲವು ಗೊಂದಲಗಳು ಹುಟ್ಟುವಂತೆ ಮಾಡಿದೆ. ಲೋಕಸಭಾ ಚುಣಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ವಿಪಕ್ಷಗಳ ಟೀಕೆಗೆ ಸಿದ್ದರಾಮಯ್ಯ ಅವರ ಹೇಳಿಕೆ ಪುಷ್ಟಿ ನೀಡಿದಂತಾಗಿದೆ.
ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲೆ ಕೆಡಿಪಿ ಸಭೆಯಲ್ಲಿ ಶುಕ್ರವಾರ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಮಂಗಳಮುಖಿಯರನ್ನು ಶಕ್ತಿ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿಸಬೇಕು ಮತ್ತು ಈ ಯೋಜನೆಗಳು ಮುಂದುವರೆಸಬೇಕು ಎಂದು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಮುಂದುವರೆಯಲಿವೆ. ನಾನು ಬದಲಾವಣೆಯಾದರೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ. ಯಾರೇ ಮುಖ್ಯಮಂತ್ರಿ ಆದರೆ ಯೋಜನೆಗಳು ನಿಲ್ಲುವುದಿಲ್ಲ. ಈ ಬಗ್ಗೆ ಗೊಂದಲ ಬೇಡ ಎಂಬ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಅನುಮಾನವನ್ನ ಮೂಡಿಸಿದೆ.












Click it and Unblock the Notifications