ವಿಪಕ್ಷಗಳ ಹೆಡೆಮುರಿ ಕಟ್ಟಲು ಸಿದ್ದು ಹೊಸ ತಂತ್ರಗಾರಿಕೆ?
ಸಿಬಿಐ ಎನ್ನುವ ಬ್ರಹ್ಮಾಸ್ತ್ರವನ್ನು ಆಡಳಿತರೂಢ ಕಾಂಗ್ರೆಸ್ ಪಕ್ಷ, ಜೆಡಿಎಸ್ ಮತ್ತು ಬಿಜೆಪಿ ವಿರುದ್ದ ಬಳಸಲು ಮುಂದಾಗಿದೆಯೇ? ಈ ಮೂಲಕ ವಿಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳಲು ಸಿದ್ದು ಸರಕಾರ ತಂತ್ರಗಾರಿಕೆ ರೂಪಿಸುತ್ತಿದೆಯೇ?
ಬುಧವಾರ (ಮಾ 25) ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಗಳು ಬಿಜೆಪಿ ಮತ್ತು ಜೆಡಿಎಸ್ ವಿರುದ್ದ ಸಿಬಿಐ ತಂತ್ರ ಬಳಸುವ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಐಎಎಸ್ ಅಧಿಕಾರಿ ಡಿ ಕೆ ರವಿ ಅಸಹಜ ಸಾವು ಪ್ರಕರಣವನ್ನು ಸಾರ್ವಜನಿಕರ ಮತ್ತು ವಿಪಕ್ಷಗಳ ಒತ್ತಾಯದ ಮೇರೆಗೆ ಸಿಬಿಐಗೆ ವಹಿಸಿದ ನಂತರ, ಈ ಹಿಂದಿನ ಕೆಲವು ಪ್ರಕರಣಗಳಿಗೆ ಮರುಜೀವ ನೀಡಲು ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಪ್ರತಿಪಕ್ಷಗಳ ತಂತ್ರಗಾರಿಕೆಗೆ ನಾವೂ ಸೂಕ್ತ ರಾಜಕೀಯ ನಡೆಯ ಮೂಲಕ ಉತ್ತರ ನೀಡೋಣ. ನನಗೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದು ಸಿದ್ದರಾಮಯ್ಯ ಸಭೆಯಲ್ಲಿ ತಮ್ಮ ಪಕ್ಷದ ಶಾಸಕರಲ್ಲಿ ಮನವಿ ಮಾಡಿದ್ದಾರಂತೆ. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಶಾಸಕರು ಸಿಎಂ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಹಳೆ ಪ್ರಕರಣಗಳಿಗೆ ಮರುಜೀವ ನೀಡಿ ಸಿಬಿಐಗೆ ಹಸ್ತಾಂತರಿಸಬಹುದಾದ ಕೆಲವೊಂದು ಪ್ರಕರಣಗಳು ಯಾವುವು?

ರಘುಪತಿ ಭಟ್ ಪತ್ನಿ ನಿಗೂಢ ಸಾವು
ದೆಹಲಿಯಲ್ಲಿ (2008) ನಿಗೂಢ ಸಾವನ್ನಪ್ಪಿದ್ದ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ರಘುಪತಿ ಭಟ್ ಪತ್ನಿ ಪದ್ಮಪ್ರಿಯಾ ಪ್ರಕರಣಕ್ಕೆ ಮರುಜೀವ ಸಿಗುವ ಸಾಧ್ಯತೆಯಿದೆ. ಪತ್ನಿ ಪದ್ಮಪ್ರಿಯಳನ್ನು ನಾನು ಕೊಲೆ ಮಾಡಿಲ್ಲ ಅಥವಾ ಮಾಡಿಸಿಲ್ಲ, ಹೀಗೆಂದು ರಘುಪತಿ ಭಟ್ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ, ತಾನು ನಿರ್ದೋಷಿ ಎಂದಿದ್ದರು. ಈ ಘಟನೆಯ ನಂತರ ಸಕ್ರಿಯ ರಾಜಕಾರಣದಿಂದ ಹೆಚ್ಚುಕಮ್ಮಿ ದೂರಸರಿದಿರುವ ರಘುಪತಿ ಭಟ್ 2013ರಲ್ಲಿ ಎರಡನೇ ಮದುವೆಯಾಗಿದ್ದರು. ಬಿ ಎಸ್ ಯಡಿಯೂರಪ್ಪ ಈ ಅವಧಿಯಲ್ಲಿ ಸಿಎಂ ಆಗಿದ್ದರು.

ರಾಜ್ ಅಂತ್ಯಸಂಸ್ಕಾರದ ವೇಳೆ ರಕ್ತದೋಕುಳಿ
ವರನಟ ಡಾ. ರಾಜಕುಮಾರ್ ಅಂತ್ಯಸಂಸ್ಕಾರದ ಮೆರವಣೆಗೆಯ ವೇಳೆ ನಡೆದ ಭಾರೀ ಹಿಂಸಾಚಾರಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಅಭಿಮಾನಿಗಳ ಅತಿರೇಕ, ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸ್ ಗೋಲಿಬಾರ್ ನಲ್ಲಿ ಆರು ಜನ ಮೃತ ಪಟ್ಟಿದ್ದರು. ಕುಮಾರಸ್ವಾಮಿ ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರು.

ಯಡಿಯೂರಪ್ಪ ಪತ್ನಿ
ಮಾಜಿ ಮುಖ್ಯಮಂತ್ರಿ, ಹಾಲಿ ಶಿವಮೊಗ್ಗ ಸಂಸದ ಬಿ ಎಸ್ ಯಡಿಯೂರಪ್ಪ ಅವರ ಧರ್ಮಪತ್ನಿ ಮೈತ್ರಾದೇವಿ ನಿಗೂಢ ಸಾವು ಪ್ರಕರಣವನ್ನೂ ಸಿಬಿಐಗೆ ವಹಿಸಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

ಜನಾರ್ಧನ ರೆಡ್ಡಿ ಆರೋಪದ ಗಣಿಕಪ್ಪ
ಕುಮಾರಸ್ವಾಮಿ ನೂರ ಐವತ್ತು ಕೋಟಿ ಲಂಚ ಪಡೆದಿದ್ದಾರೆ, ಈ ಸಂಬಂಧ ನನ್ನಲ್ಲಿ ದಾಖಲೆ ಇದೆ ಎಂದು ಆರೋಪಿಸಿದ್ದ ಜನಾರ್ಧನ ರೆಡ್ಡಿ ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿದ್ದರು. ಪ್ರೊಜೆಕ್ಟರ್ ಮೂಲಕ ವಿಡಿಯೋ ದೃಶ್ಯಗಳನ್ನು ತೋರಿಸಲಾಗಿತ್ತಾದರೂ, ಎಲ್ಲವು ಅಸ್ಪಷ್ಟವಾಗಿತ್ತು. ಒಟ್ಟಿನಲ್ಲಿ ಭಾರೀ ಸುದ್ದಿ ಪಡೆದಿದ್ದ ಕುಮಾರಸ್ವಾಮಿ ಮೇಲೆ ರೆಡ್ಡಿ ಆರೋಪ ಠುಸ್ ಆಗಿತ್ತು. ಆಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಟ್ವೆಂಟಿ ಟ್ವೆಂಟಿ ಸರಕಾರ ಅಧಿಕಾರದಲ್ಲಿತ್ತು ಮತ್ತು ಕುಮಾರಣ್ಣ ಸಿಎಂ ಆಗಿದ್ದರು. ಈ ಕೇಸೂ ಮರುಜೀವ ಪಡೆಯುವ ಸಾಧ್ಯತೆಯಿದೆ.

ಬಿಬಿಎಂಪಿ ಅಕ್ರಮಗಳು
ಅಕ್ರಮ ಮತ್ತು ಸಾಲದ ಸುಳಿಯಲ್ಲಿ ಸಿಲುಕಿರುವ ಬಿಬಿಎಂಪಿಯಲ್ಲಿನ ಹಲವು ಕೋಟಿ ಕೋಟಿ ಭ್ರಷ್ಟಾಚಾರಗಳನ್ನು (ಬಿಜೆಪಿ ಅವಧಿಯಲ್ಲಿ) ಸಿಬಿಐಗೆ ವಹಿಸಲು ರಾಜ್ಯ ಸರಕಾರ ಉತ್ಸುಕವಾಗಿದೆ ಎನ್ನುವ ಸುದ್ದಿಯಿದೆ.

ಹಾಲಪ್ಪ ಮತ್ತು ಸ್ನೇಹಿತನ ಪತ್ನಿ
ಯಡಿಯೂರಪ್ಪ ಅಧಿಕಾರದ ಅವಧಿಯಲ್ಲಿ ಬಿಜೆಪಿ ಸರಕಾರ ತೀವ್ರ ಮುಖಭಂಗಕ್ಕೊಳಗಾದ ಘಟನೆ. ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸೊರಬ ಬಿಜೆಪಿ ಶಾಸಕರೂ ಆಗಿದ್ದ ಹಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ತಲೆಮರೆಸಿಕೊಂಡಿದ್ದರು. ಸಿಐಡಿ ಪೊಲೀಸರು ಮೇ.10, 2010ರೊಳಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು, ಇದಕ್ಕೆ ಒಂದು ದಿನದ ಮೊದಲೇ ಹಾಲಪ್ಪ ಶಿವಮೂಗ ಎಸ್ಪಿ ಮುಂದೆ ಹಾಲಪ್ಪ ಶರಣಾಗಿದ್ದರು. ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು. ಈ ಕೇಸ್ ಮತ್ತೆ ಓಪನ್ ಆಗುವ ಸಾಧ್ಯತೆಯಿದೆ.












Click it and Unblock the Notifications