ಕುಮಾರಸ್ವಾಮಿ 'ಕೃಪೆ'ಯಿಂದ ನಿಗಮ ಮಂಡಳಿ ಕೈತಪ್ಪಿದ ಶಾಸಕರಿಗೆ ಸಿದ್ದರಾಮಯ್ಯ ಅಭಯ
ಬೆಂಗಳೂರು, ಜನವರಿ 07: ಕುಮಾರಸ್ವಾಮಿ ಅವಕೃಪೆಗೆ ಒಳಗಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ದೂರ ಉಳಿದಿರುವ ಐದು ಜನ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನೀಡಿದ 20 ಶಾಸಕರ ಪಟ್ಟಿಯಲ್ಲಿ ಐದು ಜನ ಶಾಸಕರ ಹೆಸರನ್ನು ಸಿಎಂ ಕುಮಾರಸ್ವಾಮಿ ಕೈಬಿಟ್ಟಿದ್ದು, ಎರಡೂ ಪಕ್ಷಗಳ ನಡುವೆ ಶೀಥಲ ಸಮರ ಆರಂಭಿಸಿದೆ.
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರುಗಳ ಹೆಸರನ್ನು ಕುಮಾರಸ್ವಾಮಿ ಕೈಬಿಟ್ಟಿದ್ದಾರೆ.
ಇದು ಕಾಂಗ್ರೆಸ್ ಪಾಳಯಕ್ಕೆ ಶಾಕ್ ನೀಡಿದೆ. ಏಕಾ-ಏಕಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲಿನ ಹೆಸರುಗಳನ್ನು ಕೈಬಿಡಲು ಕಾರಣವೇನು ಎಂದು ಗೊತ್ತಾಗಿಲ್ಲ, ಆದರೆ ತಾವು ಕಾಂಗ್ರೆಸ್‌ನ ಕೀಲುಬೊಂಬೆ ಅಲ್ಲ ಎಂಬುದನ್ನು ತೋರಿಸಲು ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಜೊತೆ ಚರ್ಚಿಸುತ್ತೇನೆ: ಸಿದ್ದರಾಮಯ್ಯ
ಆದರೆ ಇವರಿಗೆ ಅಭಯ ನೀಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಈ ಎಲ್ಲ ಶಾಸಕರಿಗೆ ಈ ಹಿಂದೆ ಗೊತ್ತು ಮಾಡಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳೇ ದೊರೆಯಲಿವೆ ಎಂದು ಹೇಳಿದ್ದಾರೆ. ಈ ಕುರಿತು ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಐದೂ ಶಾಸಕರು ಸಿದ್ದರಾಮಯ್ಯ ಬೆಂಬಲಿಗರು
ಐದೂ ಜನ ಶಾಸಕರು ಸಿದ್ದರಾಮಯ್ಯ ಅವರ ಬೆಂಬಲಿಗರು ಎನ್ನಲಾಗಿದ್ದು, ಐದೂ ಜನ ಇಂದು ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ, ಸಿಎಂ ಜೊತೆ ಚರ್ಚಿಸಿ, ನಿಗಮ ಮಂಡಳಿಗೆ ನೇಮಕ ಮಾಡಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯ ಎಚ್‌ಡಿಕೆ ಟಾಂಗ್
ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಲೆಂದೇ ಕುಮಾರಸ್ವಾಮಿ ಅವರು ಉದ್ದೇಶಪೂರ್ವಕವಾಗಿ ಐದು ಜನರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಷಯವು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಕಂದಕವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಎಸ್.ಟಿ.ಸೋಮಶೇಖರ್ ಬೆಂಬಲಿಗರಿಂದ ಬೆದರಿಕೆ
ಎಸ್.ಟಿ.ಸೋಮಶೇಖರ್‌ಗೆ ಬಿಡಿಎ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು ಆದರೆ ಅದು ಕೈತಪ್ಪಿದ ಕಾರಣ ಅವರ ಬೆಂಬಲಿಗ ಬಿಬಿಎಂಪಿ ಕಾರ್ಪೊರೇಟರ್‌ಗಳು ಕೆಪಿಸಿಸಿಗೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು, ಆದರೆ ಸಿದ್ದರಾಮಯ್ಯ ಅವರು ಸೋಮಶೇಖರ್ ಅವರ ಬಳಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.












Click it and Unblock the Notifications