Siddaramaiah: ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದೇಕೆ? ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು: ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವುದಕ್ಕೆ ವಯಸ್ಸಿನ ಕಾರಣವೊಂದೇ ಅಲ್ಲ, ಚುನಾವಣಾ ವ್ಯವಸ್ಥೆಯೇ ದುಬಾರಿಯಾಗಿ ಹಾಗೂ ಹದಗೆಟ್ಟಿರುವುದೂ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ,ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಗೆಲ್ಲಬೇಕಾದ ಪರಿಸ್ಥಿತಿ ಇದ್ದು, ಅದಕ್ಕಾಗಿ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇಂತಹ ಕಾರಣಗಳಿಂದಲೇ ತಾವು ಚುನಾವಣಾ ರಾಜಕೀಯದಿಂದ ದೂರ ಉಳಿದಿರುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Siddaramaiah:ಚುನಾವಣಾ ವ್ಯವಸ್ಥೆಯು ಬಹಳ ದುಬಾರಿ
ಚುನಾವಣಾ ರಾಜಕೀಯದಿಂದ ಮಾತ್ರ ನಾನು ಹಿಂದೆ ಸರಿದಿದ್ದೇನೆ. ಯಾಕೆಂದರೆ ನಮ್ಮ ಚುನಾವಣಾ ವ್ಯವಸ್ಥೆಯು ಬಹಳ ದುಬಾರಿಯಾಗಿದೆ. ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ನನಗೆ ವಯಸ್ಸಾಗಿದೆ, ಆ ಕಾರಣದಿಂದ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಜೊತೆಗೆ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ. ಚುನಾವಣೆಯಲ್ಲಿ ಹಣ ಹಾಕಿ ಗೆಲ್ಲಬೇಕಾದರೆ ಅದಕ್ಕಾಗಿ ಕೆಲವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಕಾರಣದಿಂದ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
25 ವರ್ಷ ತುಂಬಿರುವ ಸಂದರ್ಭದಲ್ಲಿ ಇಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವನ್ನು ಆಚರಣೆ ಮಾಡುತ್ತಿದ್ದೇವೆ. ಜೊತೆಗೆ ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನನಗೆ ಆಹ್ವಾನವನ್ನು ನೀಡಿದ್ದರು.
ನಾನು ಪ್ರೀತಿಯಿಂದ ಒಪ್ಪಿಕೊಂಡೆ. ಆದರೆ ನನಗೆ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಕೂಡ ಇಟ್ಟುಕೊಂಡಿದ್ದಾರೆ ಎಂದು ಆಹ್ವಾನ ಪತ್ರಿಕೆಯನ್ನು ನೋಡಿದ ಮೇಲೆ ತಿಳಿಯಿತು. ಇದರ ಅವಶ್ಯಕತೆ ಇರಲಿಲ್ಲ ಎಂಬುದು ನನ್ನ ಭಾವನೆ ಎಂದು ತಿಳಿಸಿದರು.
Siddaramaiah:ನಾನು ಶೂದ್ರಕ್ಕೆ ಸೇರಿದವನು
ನಾನು ಹಿಂದುಳಿದ ಜಾತಿಗೆ ಸೇರಿದವನು ಎಂದು ಹೇಳಲು ಯಾವುದೇ ಮುಜಗರವಿಲ್ಲ. ಯಾಕೆಂದರೆ ಈ ದೇಶದಲ್ಲಿ ಬಹಳ ವರ್ಷಗಳ ಕಾಲ ಜಾತಿ ವ್ಯವಸ್ಥೆಯಿತ್ತು. ಚತುರ್ವರ್ಣ ವ್ಯವಸ್ಥೆಯಿತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವರ್ಣಗಳ ವ್ಯವಸ್ಥೆಯಿತ್ತು. ನಾನು ಶೂದ್ರಕ್ಕೆ ಸೇರಿದವನು. ಲಿಂಗಾಯತ, ಒಕ್ಕಲಿಗ ಆದಿಯಾಗಿ ನಾವೆಲ್ಲರೂ ಕೂಡ ಶೂದ್ರರೆ.
ಚತುರ್ವರ್ಣ ವ್ಯವಸ್ಥೆಯಲ್ಲಿ ಮೇಲಿನ ಮೂರು ಜಾತಿಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಅವಕಾಶಗಳಿದ್ದವು. ಆದರೆ ಶೂದ್ರರಿಗೆ ಅವಕಾಶಗಳು ಸಿಗಲಿಲ್ಲ. ಅವಕಾಶಗಳಿಂದ ವಂಚಿತರಾದರು. ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರೆ ಈ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಗಲು ಸಾಧ್ಯವಾಗುತ್ತಿರಲಿಲ್ಲ. ಶೂದ್ರ ವರ್ಗದ ಜನರು ಅಕ್ಷರ ಸಂಸ್ಕೃತಿಯಿಂದ, ಅವಕಾಶಗಳಿಂದ ವಂಚಿತರಾಗುತ್ತಿರಲಿಲ್ಲ. ಆದರೆ ಸಮಾನತೆ, ಅವಕಾಶಗಳಿಂದ ವಂಚಿತರಾಗುವ ವ್ಯವಸ್ಥೆ ನಿರ್ಮಾಣವಾಯಿತು ಎಂದು ಗದ್ಗದಿತರಾದರು.
ನಾನು ಬಹಳ ಕಷ್ಟಪಟ್ಟು ಓದಿದೆ
ನಾನು ವಿದ್ಯಾರ್ಥಿ ದೆಸೆಯಿಂದಲೂ ಈ ಅಸಮಾನತೆಯ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ. ನಾನು ಬಹಳ ಕಷ್ಟಪಟ್ಟು ಓದಿ, ಕಾನೂನು ಪದವಿಯನ್ನು ಪಡೆದುಕೊಂಡು, ನಂತರ ರಾಜಕಾರಣಿಯಾಗಿ ಹಿಂದುಳಿದ ಜಾತಿಗಳು, ಶೋಷಿತ ವರ್ಗಗಳು ಹೀಗೆ ಯಾರ್ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರೆಲ್ಲರ ಪರವಾಗಿ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು, ಯಾರೊಬ್ಬರೂ ದೌರ್ಜನ್ಯಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದೇನೆ. ಈಗಲೂ ಕೂಡ ಧ್ವನಿ ಎತ್ತುತ್ತೇನೆ ಎಂದರು.
ನೀವೆಲ್ಲರೂ ಕೂಡ ಕಳೆದ 4 -5 ದಶಕಗಳಿಂದ ನನ್ನನ್ನು ಬೆಂಬಲಿಸುತ್ತಾ ಬಂದಿದ್ದೀರಿ. ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ಅದಕ್ಕಾಗಿ ನಿಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದು ನನ್ನ ಮನದಾಳದ ಇಚ್ಛೆ. ನೀವು ಅಭಿನಂದನೆಗೆ ಅರ್ಹರು, ನಾನಲ್ಲ. ನಾನು ನಿಮ್ಮವನೇ, ನಿಮ್ಮಲ್ಲೇ ಒಬ್ಬನಾಗಿ ಈ ಹೋರಾಟವನ್ನು ಈಗಲೂ, ಮುಂದೆಯೂ ಮಾಡುವಂತಹ ಕೆಲಸವನ್ನು ನಾನು ಮಾಡುತ್ತೇನೆ ಎನ್ನುವ ಭರವಸೆಯ ಮಾತನ್ನು ಹೇಳಿದರು.


Click it and Unblock the Notifications
