ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಮತ್ತು ಖರ್ಗೆ ಫಿಕ್ಸಿಂಗ್?

Written By:
Subscribe to Oneindia Kannada

ಸಂಪುಟದಿಂದ ಕೈಬಿಟ್ಟವರು, ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದವರು ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ ಕೆ ಶಿವಕುಮಾರ್, ಧರಂ ಸಿಂಗ್ ವಿರುದ್ದ ಮನಸೋ ಇಚ್ಚೆ ವಾಗ್ದಾಳಿ ನಡೆಸುತ್ತಿದ್ದಾರೆ.

ಸಂಪುಟ ವಿಸ್ತರಣೆಯ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ 'ಫಿಕ್ಸಿಂಗ್' ನಡೆದಿದೆ. ಇದೆಲ್ಲಾ ಪುತ್ರ ವ್ಯಾಮೋಹಕ್ಕಾಗಿ ಎಂದು ಶಾಸಕ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ. (ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ ಮೇಲೆ ಕಣ್ಣು)

ಏಕವಚನ ಪ್ರಯೋಗ ಮಾಡುತ್ತಿರುವ ಅತೃಪ್ತರ ವಾಗ್ದಾಳಿಯ ಕಿಚ್ಚು ಒಂದೆರಡು ದಿನದಲ್ಲಿ ಮುಗಿದು ಹೋಗುತ್ತೋ ಅಥವಾ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ತಲೆನೋವಾಗಿ ಪರಿಣಮಿಸುತ್ತದೋ ಎಂದು ಕಾದು ನೋಡಬೇಕಿದೆ.

ಪಕ್ಷದ ಮುಖಂಡರ ಅಣತಿಯಂತೆ ಮೊನ್ನೆ ಮೊನ್ನೆ ಪಕ್ಷೇತರ ಶಾಸಕರನ್ನು ಮುಂಬೈ, ಶಿರಡಿಗೆ ಕರೆದುಕೊಂಡು ಹೋಗಿ, ಹೈಕಮಾಂಡ್ ಮತ್ತು ಸಿಎಂ ನಮಗೆ ಏನಾದರೂ ಮಾಡಿಯಾರು ಎಂದು ಆಸೆಯಿಂದ ರಾಜಭವನದ ಹುಲ್ಲುಹಾಸಿನ ಕಡೆ ದೃಷ್ಠಿ ನೆಟ್ಟಿದ್ದ ಸಮಾನ ಮನಸ್ಕ ಶಾಸಕರಿಗೆ ಸಂಪುಟ ವಿಸ್ತರಣೆಯಿಂದ ತೀವ್ರ ಭ್ರಮನಿರಸನವಾಗಿದೆ.

ಸಚಿವ ಸ್ಥಾನ ಕಳೆದುಕೊಂಡಿರುವ ಖಮರುಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್, ಶ್ರೀನಿವಾಸ ಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಹಿರಿಯ ಮುಖಂಡರು ಮತ್ತು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಹರಿಹಾಯ್ದಿದ್ದಾರೆ. (ಸಾಮಾಜಿಕ ತಾಣದಲ್ಲಿ ಸಚಿವ ಕಿಮ್ಮನೆ ವಿದಾಯ ಭಾಷಣ)

ಇದರ ಜೊತೆ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಅಂಬರೀಶ್, ಶಾಸಕರಾದ ಮಾಲಕ ರೆಡ್ಡಿ ಮತ್ತು ರಾಜಶೇಖರ ಪಾಟೀಲ್ ಮುಂತಾದವರು ಕೂಡಾ ಸಂಪುಟ ವಿಸ್ತರಣೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

'ಹೈಕಮಾಂಡ್ ಅನ್ನೋ ತಿರ್ಬೋಕಿಗಳು' , ಕಾಂಗ್ರೆಸ್ಸಿಗರ ಕೆಲವೊಂದು ಮಾತಿನ ಪ್ರಹಾರ.. ಮುಂದೆ ಓದಿ..

ಮಾಡು ಮಾಡು ಏನ್ ಮಾಡ್ತಿಯೋ ಮಾಡು

ಮಾಡು ಮಾಡು ಏನ್ ಮಾಡ್ತಿಯೋ ಮಾಡು

ಮಾಡು ಮಾಡು ಏನ್ ಮಾಡ್ತಿಯೋ ಮಾಡು. ನಮಗೆಲ್ಲಾ ಗೊತ್ತಿದೆ.. ಮುಂದಿನ ದಿನಗಳಲ್ಲಿ ನಾವು ರಾಜಕಾರಣ ಮಾಡುತ್ತೇವೆ ನೋಡು.. ನೀನು ಮಾಡೋದನ್ನೆಲ್ಲಾ ಗೊತ್ತಾಗಲ್ಲಾ ಅನ್ಕೊಂಡಿದ್ದೀಯಾ ನನಗೆ ಸಚಿವ ಸ್ಥಾನ ತಪ್ಪಿಸಿದ್ದು ನೀನು - ಇದು ಬೆಂಗಳೂರು ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ, ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ.

ಎಸ್ ಟಿ ಸೋಮಶೇಖರ್ ವಾಗ್ದಾಳಿ

ಎಸ್ ಟಿ ಸೋಮಶೇಖರ್ ವಾಗ್ದಾಳಿ

ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಿದ್ದರಾಮಯ್ಯ ಫಿಕ್ಸಿಂಗ್ ಮಾಡಿಕೊಂಡು ಪ್ರಿಯಾಂಕಾ ಖರ್ಗೆಗೆ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷದ ಕಚೇರಿಗೆ ಟೈಲ್ಸ್ ಹಾಕಿ ಕೊಟ್ಟವನು ನಾನು. ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕೆಲಸಗಳಿಗೆ ನಾವು ಬೇಕು. ಆದರೆ, ಸಚಿವ ಸ್ಥಾನ ಮಾತ್ರ ಬೇರೆಯವರಿಗೆ ನೀಡಿದರೆ ಹೇಗೆ, ಹೈಕಮಾಂಡ್ ಅನ್ನೋ ತಿರ್ಬೋಕಿಗಳು ಎಂದು ಶಾಸಕ ಸೋಮಶೇಖರ್ ಕಿಡಿಕಾರಿದ್ದಾರೆ.

ಖರ್ಗೆಯನ್ನು ಸೋಲಿಸುತ್ತೇನೆ

ಖರ್ಗೆಯನ್ನು ಸೋಲಿಸುತ್ತೇನೆ

ಮಲ್ಲಿಕಾರ್ಜುನ್ ಖರ್ಗೆ ನನಗೆ ಮೋಸ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಖಮರುಲ್ ಇಸ್ಲಾಂ ಅವರೊಂದಿಗೆ ಸೇರಿ ಖರ್ಗೆಯವರನ್ನು ಸೋಲಿಸುತ್ತೇನೆ. ಸಿಎಂ ಕೂಡಾ ನನಗೆ ಕೈಕೊಟ್ಟರು, ಎಲ್ಲರನ್ನೂ ನೋಡಿಕೊಳ್ಳುತ್ತೇನೆ - ಮಾಜಿ ಸಚಿವ ಬಾಬುರಾವ್ ಚಿಂಚನ್‌ಸೂರ್.

ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್

ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್

ಆ ಧರಂ ಸಿಂಗ್ ನಿಂದಾಗಿಯೇ ನನಗೆ ಸಚಿವ ಸ್ಥಾನ ತಪ್ಪಿದ್ದು. ನನ್ನ ಕುಟುಂಬಕ್ಕೆ ಅವರಿಂದ ತೊಂದರೆ ತಪ್ಪಿದ್ದಲ್ಲ. ಬೀದರ್ ಕ್ಷೇತ್ರಕ್ಕೆ ಧರಂ ಸಿಂಗ್ ಕೊಡುಗೆ ಏನು? ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಸಾಯಿಸಿ ಬಿಡಿ ಎಂದು ರಾಜಶೇಖರ ಪಾಟೀಲ್, ಧರಂ ಸಿಂಗ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಶ್ರೀನಿವಾಸ ಪ್ರಸಾದ್ ಗರಂ

ಶ್ರೀನಿವಾಸ ಪ್ರಸಾದ್ ಗರಂ

ಇದೇ ಸಿದ್ದರಾಮಯ್ಯ ರಾಜಕೀಯಕ್ಕೆ ಬಂದಾಗ ಅವನಲ್ಲಿ ಬಿಡಿಗಾಸು ಇರಲಿಲ್ಲ. 1980ರಲ್ಲಿ ಚುನಾವಣೆಗೆ ನಿಂತಾಗ 8 ಸಾವಿರ ಮತ ಪಡೆದುಕೊಂಡಿದ್ದ. 83ರಲ್ಲಿ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದ. ಸ್ಕೂಟರ್ ಕೆಟ್ಟೋಗಿ ನಾಮಪತ್ರ ವಾಪಸ್ ಪಡೆಯದೆ ಕಣದಲ್ಲಿ ಉಳಿದುಕೊಂಡಿದ್ದ. ಈಗ ಇದನ್ನೆಲ್ಲಾ ಮರೆತಿದ್ದೀಯಾ ಸಿದ್ರಾಮಯ್ಯಾ ಎಂದು ಶ್ರೀನಿವಾಸ ಪ್ರಸಾದ್, ಸಿಎಂ ಸಿದ್ದು ಅವರನ್ನು ಪ್ರಶ್ನಿಸಿದ್ದಾರೆ.

ಖಮರುಲ್ ಇಸ್ಲಾಂ

ಖಮರುಲ್ ಇಸ್ಲಾಂ

ಸಂಪುಟದಿಂದ ಕೈಬಿಡಲು ತಮ್ಮ ಹೆಸರು ಪ್ರಸ್ತಾಪಿಸಿದ್ದು ಯಾರು? ಇದರ ಹಿಂದೆ ಯಾರ ಪಿತೂರಿಯಿದೆ. ಈ ಭಾಗದ ಮುಸ್ಲಿಂ ಮುಖಂಡರನ್ನು ಸಂಪುಟದಿಂದ ಹೊರಗಿಡಲಾಗಿದೆ. ಹೈ. ಕರ್ನಾಟಕದ ಪ್ರಶ್ನೆ ಬಂದಾಗ ಖರ್ಗೆಯವರ ಅಭಿಪ್ರಾಯ ಪಡೆಯದೆ ವರಿಷ್ಠರು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಹಾಗಾದರೆ ಖರ್ಗೆಯವರು ತಮ್ಮ ಬಗ್ಗೆ ಹೇಳಿದ್ದಾದರೂ ಏನು ಎಂದು ಖಮರುಲ್ ಇಸ್ಲಾಂ ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siddaramaiah government cabinet reshuffle : Some of the party leaders upset with High Command, Siddaramaiah and Senior leaders.
Please Wait while comments are loading...