ಸಚಿವ ಸಂಪುಟ ಪುನಾರಚನೆ ಚರ್ಚೆ ಅಪೂರ್ಣ!

Posted By:
Subscribe to Oneindia Kannada

ಬೆಂಗಳೂರು, ಜೂನ್ 17 : ಸಚಿವ ಸಂಪುಟ ಪುನಾರಚನೆ ಬಗ್ಗೆ ಇಂದು ಸ್ಪಷ್ಟ ಚಿತ್ರಣ ಲಭ್ಯವಾಗುವುದಿಲ್ಲ. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಚರ್ಚೆ ಅಪೂರ್ಣಗೊಂಡಿದೆ. 'ಶನಿವಾರ ಮತ್ತೊಮ್ಮೆ ಸೋನಿಯಾ ಗಾಂಧಿ ನಿವಾಸದಲ್ಲಿ ಸಭೆ ನಡೆಯಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಿದರು.

sonia gandhi

ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಇಂದು ನಡೆದ ಚರ್ಚೆ ಅಪೂರ್ಣವಾಗಿದೆ. ಪ್ರಾಥಮಿಕ ಹಂತದ ಚರ್ಚೆಗಳು ಮಾತ್ರ ಇಂದು ನಡೆದಿವೆ. ಶನಿವಾರ ಬೆಳಗ್ಗೆ 10 ಗಂಟೆಗೆ ಮತ್ತೊಮ್ಮೆ ಸಭೆ ಸೇರಿ ಚರ್ಚೆ ನಡೆಸುತ್ತೇವೆ' ಎಂದು ತಿಳಿಸಿದರು.

ಹಿಂದಿನ ಸುದ್ದಿ : ಸಚಿವ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಇನ್ನೂ ಅಂತಿಮ ಚಿತ್ರಣ ಲಭ್ಯವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 4 ಗಂಟೆಗೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಲಿದ್ದಾರೆ.

ಕರ್ನಾಟಕ ಕಾಂಗ್ರೆಸ್ ನಾಯಕರ ದಂಡು ದೆಹಲಿಯಲ್ಲಿ ಬೀಡು ಬಿಟ್ಟಿದೆ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ 45 ನಿಮಿಷಗಳ ಕಾಲ ಈ ಕುರಿತು ಚರ್ಚೆ ನಡೆಸಿದರು. [ಸಂಪುಟ ಸೇರಲಿರುವ ಅದೃಷ್ಟವಂತರು ಯಾರು?]

mallikarjuna kharge

ಅತ್ತ ಹೈದರಾಬಾದ್‌ಗೆ ತೆರಳಿದ್ದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ದೆಹಲಿಗೆ ವಾಪಸ್ ಆಗಿದ್ದು, ಸಿದ್ದರಾಮಯ್ಯ ಅವರು ಸಿಂಗ್ ಜೊತೆ ಮಾತುಕತೆ ನಡೆಸಿದರು. ನಂತರ ಮಾತನಾಡಿದ ಸಿದ್ದರಾಮಯ್ಯ ಅವರು, 'ಸಂಜೆ 4 ಗಂಟೆಗೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುತ್ತೇನೆ' ಎಂದು ಹೇಳಿದರು. [ಯಾರ ಕೈ ತಪ್ಪಲಿದೆ ಸಚಿವ ಸ್ಥಾನ?]

ಯಾರನ್ನು ಕೈ ಬಿಡುತ್ತಾರೋ ಗೊತ್ತಿಲ್ಲ : ಸೋನಿಯಾ ಗಾಂಧಿ ಭೇಟಿ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಸಿದ್ದರಾಮಯ್ಯ ಅವರ ಜೊತೆ ಸೋನಿಯಾ ಅವರು ಮಾತುಕತೆ ನಡೆಸಲಿದ್ದಾರೆ. ನಂತರ ಸಂಪುಟ ಪುನಾರಚನೆ ಬಗ್ಗೆ ತಿಳಿಯಲಿದೆ. ಯಾರನ್ನು ಸೇರಿಸಿಕೊಳ್ಳುತ್ತಾರೆ?, ಯಾರನ್ನು ಕೈಬಿಡುತ್ತಾರೆ? ಎಂದು ನನಗೆ ತಿಳಿದಿಲ್ಲ' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah is all set to undertake a major reshuffle of the cabinet. Siddaramaiah will meet AICC president Sonia Gandhi evening 4 pm.
Please Wait while comments are loading...