ಸ್ವಪಕ್ಷ-ವಿಪಕ್ಷಗಳ ನಾಯಕರಿಗೆ ಬಿಸಿ ತುಪ್ಪವಾದ ಸಿದ್ದರಾಮಯ್ಯ!
ಬೆಂಗಳೂರು, ಮೇ 8: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಾನು ಮುಂದೆಯೂ ಮುಖ್ಯಮಂತ್ರಿಯಾಗುವುದು ಎಂಬ ಸಿದ್ದರಾಮಯ್ಯ ಅವರ ಮಾತುಗಳು ಪ್ರತಿಪಕ್ಷಗಳ ನಾಯಕರಿಗಿಂತ ಅವರದ್ದೇ ಪಕ್ಷದಲ್ಲಿ ಸಿಎಂ ಸ್ಥಾನದ ರೇಸ್‍ನಲ್ಲಿರುವ ಕೆಲವು ನಾಯಕರಿಗೆ ಜಪಾಳ ಮಾತ್ರೆ ಕೊಟ್ಟಂತಾಗಿದೆ.
ಹಾಗೆ ನೋಡಿದರೆ ಚುನಾವಣೆಗೆ ಇನ್ನೇನು 4 ದಿನಗಳಷ್ಟೇ ಉಳಿದಿವೆ. ಈ ಬಾರಿ ನಾವೇ ಅಧಿಕಾರಕ್ಕೆ ಬರುವುದು, ನಾನೇ ಮುಖ್ಯಮಂತ್ರಿಯಾಗುವುದು ಎಂದು ಕಾಂಗ್ರೆಸ್‍ನಿಂದ ಸಿದ್ದರಾಮಯ್ಯ, ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ ಮತ್ತು ಜೆಡಿಎಸ್‍ನಿಂದ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹೀಗಾಗಿ ಮತದಾರರಿಗೂ ಯಾವ ಪಕ್ಷಕ್ಕೆ ಮತಕೊಟ್ಟರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಸ್ಪಷ್ಟವಾಗುತ್ತಿದೆ.

ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ
ಇತ್ತೀಚೆಗಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಂಡೇ ಚುನಾವಣೆಗೆ ಹೋಗುವುದು ಸಾಮಾನ್ಯವಾಗಿದೆ. ಈ ಹಿಂದೆ ಚುನಾವಣೆ ನಡೆದಾಗಲೂ ಯಡಿಯೂರಪ್ಪ ಅದನ್ನೇ ಮಾಡಿದರು. ಗೆದ್ದು ಮುಖ್ಯಮಂತ್ರಿಯೂ ಆದರು. ಆದರೆ ಅದನ್ನು ಕಳೆದುಕೊಂಡರು. ಅದು ಅವರ ಸ್ವಯಂ ಅಪರಾಧ.

ಅಚಾನಕ್ ಸಿಎಂ ಆದ ಕುಮಾರಸ್ವಾಮಿ
ಇವತ್ತು ಎಚ್.ಡಿ.ಕುಮಾರಸ್ವಾಮಿಯವರು ನಾನು ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಿದ್ದರೆ ಮತ್ತು ಇಪ್ಪತ್ತು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದ್ದರೆ ಅದಕ್ಕೆ ಬಿಜೆಪಿ ಪಕ್ಷ ಮತ್ತು ಯಡಿಯೂರಪ್ಪ ಕಾರಣ ಎಂದರೆ ತಪ್ಪಾಗಲಾರದು. ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಕೊಂಡು ಜನರ ಮುಂದೆ ಹೋಗಿ ಮತ ಕೇಳುವುದು ಹೊಸದೇನಲ್ಲ. ಆದರೆ ನಮಗೆ ಇವತ್ತು ಅಚ್ಚರಿ ಹುಟ್ಟಿಸುತ್ತಿರುವುದು ಕಾಂಗ್ರೆಸ್‍ನಲ್ಲಾದ ಬೆಳವಣಿಗೆ.

ಕಾಂಗ್ರೆಸ್ ಸಂಪ್ರದಾಯ
ಕಾಂಗ್ರೆಸ್‍ನವರು ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ತೆರಳುತ್ತಿದ್ದರು. ಸಮರ್ಥ ವ್ಯಕ್ತಿ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದರು. ಚುನಾವಣೆಯಲ್ಲಿ ಬಹುಮತ ಬಂದ ತಕ್ಷಣ ಶಾಸಕಾಂಗ ಸಭೆ ಕರೆದು, ಹೈಕಮಾಂಡ್‍ನ ಸೂಚನೆ ಮೇರೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುತ್ತಿತ್ತು. ಬಹುಶಃ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಸಿಎಂ ಆಗುವುದು ಖಚಿತವಾಗುತ್ತಿತ್ತು.
ಆದರೆ 2013ರ ಚುನಾವಣೆ ಕರ್ನಾಟಕದ ಕಾಂಗ್ರೆಸ್‍ನಲ್ಲಿ ಬಹುದೊಡ್ಡದಾದ ಬದಲಾವಣೆಯನ್ನು ಹುಟ್ಟು ಹಾಕಿತ್ತು. ಅವತ್ತು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷದ ವಿರುದ್ಧ ಸೆಟೆದು ನಿಂತಿದ್ದರು. ಅಷ್ಟೇ ಅಲ್ಲ ತೊಡೆತಟ್ಟಿ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ಕರ್ನಾಟಕದ ಗಮನಸೆಳೆದಿದ್ದರು.

2013ರಲ್ಲಿ ಪರಮೇಶ್ವರ್ ಗೆ ಕೈಕೊಟ್ಟಿದ್ದ ಕೊರಟಗೆರೆ
ಇನ್ನೊಂದೆಡೆ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯವನ್ನು ಸುತ್ತಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಇರುವುದು ಗೊತ್ತಾಗಿತ್ತು. ಬಹುಮತದಿಂದ ಗೆಲ್ಲುತ್ತೇವೆ ಎಂಬ ನಂಬಿಕೆ ಅದಾಗಲೇ ಬಂದಿತ್ತು. ಆ ವೇಳೆಗೆ ಬಿಜೆಪಿ ಒಡೆದು ಹೋಳಾಗಿತ್ತು. ಜೆಡಿಎಸ್ ನಾಯಕರು ವಚನಭ್ರಷ್ಟರು ಎಂಬ ಕಳಂಕದಿಂದ ಹೊರ ಬರಲು ಒದ್ದಾಡುತ್ತಿದ್ದರು. ಇದೆಲ್ಲದರ ಲಾಭ ಕಾಂಗ್ರೆಸ್‍ಗೆ ವರದಾನವಾಗಿತ್ತು. ರಾಜ್ಯದಲ್ಲಾದ ಎಲ್ಲ ಬೆಳವಣಿಗೆಗಳನ್ನು ಬಳಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪರಮೇಶ್ವರ್ ಶ್ರಮಪಡತೊಡಗಿದ್ದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿಯಾಗಬಹುದು ಎಂಬ ಬಯಕೆ ಅವರನ್ನು ರಾಜ್ಯದಲ್ಲಿ ಪಕ್ಷಕ್ಕಾಗಿ ದುಡಿಯುವಂತೆ ಮಾಡಿತ್ತು. ಸದಾ ಪ್ರವಾಸದಲ್ಲಿರುತ್ತಿದ್ದ ಅವರಿಗೆ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಸಮರ್ಪಕವಾಗಿ ಮತಯಾಚನೆ, ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ. ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿರುವುದನ್ನು ಗಮನಿಸಿದ ಅವರಿಗೆ ತಮ್ಮ ಕ್ಷೇತ್ರದ ಬಗ್ಗೆ ಯೋಚಿಸಲು ಕೂಡ ಸಮಯವಿರಲಿಲ್ಲ.
ಪರಿಣಾಮ ಬೇರೆ ಕಡೆ ಕೈ ಹಿಡಿದ ಜನ ಸ್ವಕ್ಷೇತ್ರದಲ್ಲೇ ಅವರನ್ನು ಕೈಬಿಟ್ಟಿದ್ದರು. ಇದರಿಂದ ಡಾ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಕೈ ತಪ್ಪಿತ್ತು. ಸಿದ್ದರಾಮಯ್ಯ ನಿರಾಯಾಸವಾಗಿ ಸಿಎಂ ಆಗಿ ಬಿಟ್ಟರು.

ಕಾಂಗ್ರೆಸ್ ಸಾಮೂಹಿಕ ನಾಯಕತ್ವಕ್ಕೆ ತಿಲಾಂಜಲಿ
ಅಲ್ಲಿಂದ ಇಲ್ಲಿ ತನಕ ತನ್ನದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿರುವ ಸಿದ್ದರಾಮಯ್ಯ ಇವತ್ತು ಕಾಂಗ್ರೆಸ್‍ನ ಸಾಮೂಹಿಕ ನಾಯಕತ್ವ ಎಂಬ ತತ್ವಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಂದರೆ ಸಿದ್ದರಾಮಯ್ಯ.. ಸಿದ್ದರಾಮಯ್ಯ ಅಂದರೆ ಕಾಂಗ್ರೆಸ್ ಎನ್ನುವಂತಾಗಿದೆ. ಹೀಗಾಗಿಯೇ ಸಿದ್ದರಾಮಯ್ಯನವರು ಇವತ್ತು ತಾವು ಪ್ರಚಾರಕ್ಕೆ ಹೋದಲೆಲ್ಲ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಧೈರ್ಯವಾಗಿ ಹೇಳುತ್ತಿದ್ದಾರೆ.
ಅವರ ಈ ಮಾತುಗಳು ಅವರದ್ದೇ ಪಕ್ಷದ ಮುಖ್ಯಮಂತ್ರಿಗಳ ರೇಸ್‍ನಲ್ಲಿರುವ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರಿಗೆಲ್ಲ ಚೇಳು ಕಡಿದಂತಾಗುತ್ತಿದೆ.

ದಲಿತ ಸಿಎಂ ಕೂಗು
ಇದೀಗ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಂತೆಯೇ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಕೇಳಿ ಬರತೊಡಗಿದೆ. ಇದು ಪರಮೇಶ್ವರ್ ಅವರ ಪರವಾಗಿದ್ದರೆ, ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಪರವಾಗಿಯೂ ಅವರೇ ಮುಖ್ಯಮಂತ್ರಿಯಾಗಬೇಕೆಂಬ ರೀತಿಯ ಕರಪತ್ರಗಳ ಹಂಚಿಕೆಯಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಅಂತಹದೊಂದು ಆಗ್ರಹಗಳು ಹರಿದಾಡುತ್ತಿದೆ. ಆದರೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಅವರೇ ಐಕಾನ್ ಆಗಿರುವುದರಿಂದ ಮುಂದಿನ ಬೆಳವಣಿಗೆಗಳು ಯಾರಿಗೆ ಲಾಭವಾಗುತ್ತದೆ ಎಂಬುದಕ್ಕೆ ಉತ್ತರ ಸಿಗಬೇಕಾದರೆ ಚುನಾವಣೆ ಕಳೆದು ಫಲಿತಾಂಶ ಬರಲೇಬೇಕಾಗಿದೆ.












Click it and Unblock the Notifications