7th Pay Commission: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್; ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿಎಂ
ಬೆಂಗಳೂರು, ಜುಲೈ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕೊನೆಗೂ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. 7ನೇ ವೇತನ ಆಯೋಗದ ವೇತನ ಪರಿಷ್ಕರಣೆಯನ್ನು ಆಗಸ್ಟ್ 1 ರಿಂದಲೇ ಅನ್ವಯವಾಗುವಂತೆ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಇಂದು(ಮಂಗಳವಾರ)ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಏಳನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ಏಳನೇ ವೇತನ ಆಯೋಗ ವರದಿ ನೀಡಿ, ಶಿಫಾರಸು ಮಾಡಿದೆ. ಆ.1 ರಿಂದ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ, ಪಿಂಚಣಿ ಪರಿಷ್ಕರಣೆಯ ಬೇಡಿಕೆಗಳನ್ನು ಪರಿಷ್ಕರಿಸಲು ದಿನಾಂಕ: 19.11.2022ರಂದು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿತ್ತು. ಅದರಂತೆ, ವೇತನ ಆಯೋಗವು 24.03.2024ರಂದು ವರದಿಯನ್ನು ಸಲ್ಲಿಸಿರುತ್ತದೆ. 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು ದಿನಾಂಕ: 01.07.2022ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ದಿನಾಂಕ: 01.08.2024ರಿಂದ ಅನುಷ್ಠಾನಗೊಳಿಸಲು ದಿನಾಂಕ: 15.07.2024ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.
ಅದರಂತೆ, ದಿನಾಂಕ: 01.07.2022ಕ್ಕೆ ನೌಕರರ ಮೂಲ ವೇತನಕ್ಕೆ ಶೇಕಡ 31ರಷ್ಟು ತುಟ್ಟಿ ಭತ್ಯೆ ಮತ್ತು ಶೇ. 27.50 ರಷ್ಟು ಫಿಟ್‌ಮೆಂಟ್ ಸೇರಿಸಿ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ 58.50 ರಷ್ಟು ಹೆಚ್ಚಳವಾಗುತ್ತದೆ. ಮನೆಬಾಡಿಗೆ ಭತ್ಯೆಯಲ್ಲಿ ಶೇ. 32ರಷ್ಟು ಹೆಚ್ಚಳವಾಗುತ್ತದೆ.
ನೌಕರರ ಕನಿಷ್ಟ ಮೂಲವೇತನವು ರೂ. 17,000/- ರಿಂದ ರೂ. 27,000-/ಕ್ಕೆ ಗರಿಷ್ಟ ವೇತನವು ರೂ. 1,50,600/- ರಿಂದ ರೂ. 2,41.200/-ಗಳಿಗೆ ಪರಿಷ್ಕರಣೆಯಾಗುತ್ತದೆ. ನೌಕರರ ಕನಿಷ್ಠ ಪಿಂಚಣಿಯು ರೂ.8,500/-ರಿಂದ ರೂ.13,500/-ಕ್ಕೆ ಮತ್ತು ಗರಿಷ್ಠ ಪಿಂಚಣಿಯು ರೂ.75,300/- ರಿಂದ ರೂ. 1,20,600ಕ್ಕೆ ಪರಿಷ್ಕರಣೆಗೊಳ್ಳುತ್ತದೆ. ಈ ಪರಿಷ್ಕರಣೆಯು, ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಅನ್ವಯವಾಗುತ್ತದೆ.
ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ರೂ.20.208/- ಕೋಟಿಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ವಿವರಣೆ ನೀಡಿದ್ದಾರೆ.












Click it and Unblock the Notifications