Congress Government: ಕೈ ಪಾಳಯದಲ್ಲೇ ಡಿ ಕೆ ಶಿವಕುಮಾರ್ ಗೆ ಠಕ್ಕರ್; ಮತ್ತೆ ಮೂರು ಡಿಸಿಎಂ ಸ್ಥಾನಕ್ಕೆ ಹೆಚ್ಚಿದ ಒತ್ತಾಯ
ಬೆಂಗಳೂರು, ಸೆಪ್ಟೆಂಬರ್ 16: ರಾಜ್ಯ ಕಾಂಗ್ರೆಸ್ 135 ಸ್ಥಾನಗಳನ್ನ ಪಡೆಯುವ ಮೂಲಕ ಸರ್ಕಾರವನ್ನ ರಚಿಸಿದ್ದು, ಸರ್ಕಾರ ರಚಿಸಿ ಮೂರೇ ತಿಂಗಳಲ್ಲಿ ಕೈ ಪಾಳಯದಲ್ಲಿ ಅಸಮಾಧಾನ ಹೆಚ್ಚಾಗಿದೆ.
ಹೌದು, ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಹಲವು ಸಮಸ್ಯೆಗಳ ನಡುವೆ ಮತ್ತಷ್ಟು ಉಪಮುಖ್ಯಮಂತ್ರಿ ಸ್ಥಾನವನ್ನ ಸೃಷ್ಟಿಸಲು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡಗಳು ಹೆಚ್ಚಾಗಿದೆ.

ಈ ಹಿಂದೆ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲೂ ಸಹ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನಡುವೆಯೂ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಆ ಸಂದರ್ಭದಲ್ಲಿಯೂ ಒಂದೇ ಒಂದು ಉಪಮುಖ್ಯಮಂತ್ರಿ ಸ್ಥಾನಕ್ಕೆ ಸೃಷ್ಟಿಸಲು ಡಿ ಕೆ ಶಿವಕುಮಾರ್ ಒತ್ತಡ ಹಾಕಿದ್ರು ಎನ್ನಲಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಒಂದೇ ಒಂದು ಡಿಸಿಎಂ ಹುದ್ದೆ ಸೃಷ್ಟಿಸಿದ್ದು, ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದಾರೆ.ಇದೇ ಕಾರಣಕ್ಕೆ ಸಚಿವ ಕೆ ಎನ್ ರಾಜಣ್ಣ ಅವರು ಹೆಚ್ಚಿನ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಮಾತನಾಡಿದ್ದಾರೆ.
ಈ ಕುರಿತು ಕೆ ಎನ್ ರಾಜಣ್ಣ ಮಾಧ್ಯಮಗಳ ಜೊತೆಗೆ ಮಾತನಾಡಿ, ಲಿಂಗಾಯತ, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಈ ಹಿಂದೆ ವಿಧಾನಸಭೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿದ್ದೆವು, ಈಗ ಲೋಕಸಭಾ ಚುನಾವಣೆಗೂ ಹೆಚ್ಚಿನ ಸ್ಥಾನಗಳನ್ನ ಗೆಲ್ಲಬೇಕಾದರೆ ಮತ್ತೆ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಪಕ್ಷಕ್ಕೆ ಲಾಭವಾಗಲಿದೆ ಎಂದಿದ್ದಾರೆ.

ಪತ್ರ ಬರೆಯುವ ಜತೆಗೆ ದೆಹಲಿಗೆ ತೆರಳಿ ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಲೂ ಸಹ ಬಯಸಿರುವುದಾಗಿ ಕೆ ಎನ್ ರಾಜಣ್ಣ ಹೇಳಿದ್ದಾರೆ. ಅಲ್ಲದೇ ಜಿ ಪರಮೇಶ್ವರ (ಗೃಹ ಸಚಿವರು) ಅಥವಾ ಸತೀಶ್ ಜಾರಕಿಹೊಳಿ (ಲೋಕೋಪಯೋಗಿ ಸಚಿವರು) ಉಪಮುಖ್ಯಮಂತ್ರಿಯಾಗಬೇಕಿತ್ತು ಎಂದು ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಒಂದು ಕಡೆ ಕೆ ಎನ್ ರಾಜಣ್ಣ ಹೇಳಿಕೆಯೂ ಸಾಕಷ್ಟು ಸಂಚಲನ ಸೃಷ್ಟಿಸಿದೆ.
ಡಿ ಕೆ ಶಿವಕುಮಾರ್ ಅವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಿದ್ದರಾಮಯ್ಯ ಪಾಳಯದ ಪ್ಲಾನ್ ಎಂದು ಹೇಳಲಾಗುತ್ತಿದೆ. ಹೆಚ್ಚುವರಿ ಉಪಮುಖ್ಯಮಂತ್ರಿಗಳು ಸರ್ಕಾರ ಮತ್ತು ಪಕ್ಷದ ಮೇಲೆ ಶಿವಕುಮಾರ್ ಅವರ ಪ್ರಭಾವಕ್ಕೆ ಠಕ್ಕರ್ ಕೊಡಲು ಸಿದ್ದರಾಮಯ್ಯ ಆಪ್ತರಿಂದ ಪ್ಲಾನ್ ರೆಡಿಯಾಗಿದೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಿದ ಡಿ ಕೆ ಶಿವಕುಮಾರ್ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ ಅಲ್ಲದೇ, ಮುಖ್ಯಮಂತ್ರಿ ಸ್ಥಾನಕ್ಕೂ ಸಹ ಸಾಕಷ್ಟು ಪಟ್ಟು ಹಿಡಿದಿದ್ರು. ಸಿಎಂ ರೇಸ್‌ನಲ್ಲಿದ್ದ ಡಿ.ಕೆ ಶಿವಕುಮಾರ್‌ಗೆ ಅವಕಾಶ ಕೈ ತಪ್ಪಿದ್ದರಿಂದಲೇ ಡಿಸಿಎಂ ಸ್ಥಾನ ನೀಡಿ ಪ್ರಾಧಾನ್ಯತೆ ನೀಡಲಾಗಿದೆ. ಆ ಅಂಶ ಗೊತ್ತಿದ್ದೇ ಅವರ ಸಂಪುಟ ಸಹೋದ್ಯೋಗಿ ಮತ್ತೆ ಮೂರು ಡಿಸಿಎಂ ಸ್ಥಾನ ಸೃಷ್ಟಿಸಲು ಬಯಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಒಂದು ಉಪಮುಖ್ಯ ಸ್ಥಾನ ಇದ್ದು, ಲೋಕಸಭಾ ಚುನಾವಣೆಯಲ್ಲಿ ಸಮುದಾಯಗಳ ಮತಕ್ಕಾಗಿ ಮತ್ತೆ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿದರೇ ಡಿ.ಕೆ ಶಿವಕುಮಾರ್‌ಗೆ ನೀಡಿರುವ ಪ್ರಾಮುಖ್ಯತೆ ತಗ್ಗಲಿದೆ. ಅಲ್ಲದೇ ನಾಲ್ಕು ಸ್ಥಾನವನ್ನ ಸೃಷ್ಠಿಸಿದರೇ ನಾಲ್ಕು ಮಂದಿಯಲ್ಲಿ ಡಿ ಕೆ ಶಿವಕುಮಾರ್ ಸಹ ಒಬ್ಬರೆನಿಸಿಕೊಳ್ಳಲಿದ್ದಾರೆ.












Click it and Unblock the Notifications