'ರಾಜ್ಯದಲ್ಲಿ ಕೊರೊನಾ ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆಯನ್ನು ಮುಚ್ಚಿಡಲಾಗಿದೆ'
ಬೆಂಗಳೂರು, ಜೂ. 10: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೊರೊನಾ ವೈರಸ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ಏರುಗತಿಯಲ್ಲಿ ಸಾಗುತ್ತಿದ್ದ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ನಿನ್ನೆಯಿಂದ (ಜೂ. 9 ಹಾಗೂ 10 ರಂದು) ಕಡಿಮೆಯಾಗಿವೆ. ಕಡಿಮೆ ಎಂದರೂ ಎರಡು ದಿನಗಳಲ್ಲಿ ಒಟ್ಟು 281 ಜನರು ಸೋಂಕಿಗೆ ಒಳಗಾಗಿದ್ದಾರೆ. ಜೊತೆಗೆ ಗುಣಮುಖರಾದವರ ಸಂಖ್ಯೆ 421 ಆಗಿದೆ. ಆದರೆ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 3108. ಅವರಲ್ಲಿ 14 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
Recommended Video
ಕೊರೊನಾ ವೈರಸ್ ಅಷ್ಟೊಂದು ಹರಡದೇ ಇದ್ದಾಗ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್ ಮಾರ್ಗಸೂಚಿಗಳು ಜಾರಿಯಲ್ಲಿದ್ದವು. ಇದೀಗ ಸೋಂಕು ಎಲ್ಲೆಡೆ ವ್ಯಾಪಿಸುತ್ತಿದೆ. ಆದರೆ ಈ ಸಂದರ್ಭದಲ್ಲಿ ಒಂದೊಂದಾಗಿ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಸರ್ಕಾರ ಸಡಿಲಗೊಳಿಸಿದೆ. ಇದರೊಂದಿಗೆ ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕಕಾರಿ ಹೇಳಿಕೆ ಕೊಟ್ಟಿದ್ದಾರೆ.

ಅಪಾಯಕಾರಿ ನಿರ್ಧಾರ
ಕೋವಿಡ್-19 ನಿಯಂತ್ರಣದ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೈಗೊಳ್ಳುತ್ತಿರುವ ದಿನಕ್ಕೊಂದು ನಿರ್ಧಾರ ಅಪಾಯಕಾರಿಯಾದುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿರುವ ರಾಜ್ಯ ಸರ್ಕಾರ ಪ್ರತಿದಿನ ಸಡಿಲಿಸಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ ಎಂದಿದ್ದಾರೆ.

ಬೇಜವಾಬ್ದಾರಿ ಕ್ರಮ
ಹೊರರಾಜ್ಯಗಳಿಂದ ಬಂದವರಿಗೆ 14 ದಿನದ ಸಾಂಸ್ಥಿಕ ಕ್ವಾರಂಟೈನ್ ಬದಲಿಗೆ ಹೋಮ್ ಕ್ವಾರಂಟೈನ್ ಮಾತ್ರ ಕಡ್ಡಾಯಗೊಳಿಸಿರುವುದು ಅತ್ಯಂತ ಬೇಜವಾಬ್ದಾರಿ ಕ್ರಮ.
ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯೇ ಇಲ್ಲದಿರುವಾಗ ಸೋಂಕು ತಗಲಿಸಿಕೊಂಡವರು ಇನ್ನಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ಇಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪರೀಕ್ಷೆಯೆ ಇಲ್ಲ!
ಸಾಂಸ್ಥಿಕ ಕ್ವಾರಂಟೈನ್‌ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೊಳಪಡಿಸುತ್ತಿದ್ದ ನಿಯಮವನ್ನು ಬದಲಾಯಿಸಲಾಗಿದೆ. ಕೇವಲ ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಮಾತ್ರ ಪರೀಕ್ಷೆಗೊಳಪಡಿಸಲು ನಿರ್ಧರಿಸಿರುವುದು ಅತ್ಯಂತ ಅಪಾಯಕಾರಿ ಕ್ರಮ. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಪರಿಸ್ಥಿತಿಯಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ
ಕೊರೊನಾ ಸೋಂಕಿತರಲ್ಲಿ ಶೇಕಡಾ 90ರಷ್ಟು ಮಂದಿಯಲ್ಲಿ ರೋಗಲಕ್ಷಣಗಳೇ ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆಯೇ ಒಪ್ಪಿಕೊಂಡಿರುವಾಗ, ಕ್ವಾರಂಟೈನ್ ಅವಧಿಯಲ್ಲಿ ರೋಗಲಕ್ಷಣ ಕಂಡುಬಂದರೆ ಮಾತ್ರ ಪರೀಕ್ಷೆಗೊಳಪಡಿಸುವ ಸರ್ಕಾರದ ನಿರ್ಧಾರ ಅಪಾಯಕಾರಿ ಆಗಬಹುದು. ಜ್ವರ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಮೃತಪಟ್ಟ ಶಂಕಿತ ಕೊರೊನಾ ಶಂಕಿತರ ಕೋವಿಡ್ ಪರೀಕ್ಷೆ ನಡೆಸುವುದನ್ನು ಕೈಬಿಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಅನುಮಾನಕ್ಕೆ ಎಡೆಮಾಡಿದೆ.
ಕೊರೊನಾ ವೈರಸ್ ಸೋಂಕಿತರ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಲಾಗದು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications