ಶ್ಯಾಮ ಶಾಸ್ತ್ರಿ ಕೇಸ್, ರಾಘವೇಶ್ವರ ಶ್ರೀಗಳಿಗೆ ಜಾಮೀನು
ಬೆಂಗಳೂರು, ಅ.13 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ ಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಜೀವ ಬೆದರಿಕೆ, ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧ ದೂರು ದಾಖಲಾಗಿತ್ತು.
ಶ್ಯಾಮ ಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ರಾಘವೇಶ್ವರ ಶ್ರೀಗಳ ಪರ ವಕೀಲರು ಸೋಮವಾರ ಬೆಂಗಳೂರಿನ ಸೆಷೆನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಶ್ರೀಗಳಿಗೆ 20 ದಿನಗಳ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. [ಏನಿದು ಆತ್ಮಹತ್ಯೆ ಕೇಸ್]

5 ಲಕ್ಷ ಬಾಂಡ್ ರೂ. ಮೊತ್ತದ ಬಾಂಡ್, ಇಬ್ಬರ ಶ್ಯೂರಿಟಿ, ರಾಜ್ಯ ಬಿಟ್ಟು ಹೋಗುವಂತಿಲ್ಲ, ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನೊಂದಿಗೆ ನ್ಯಾಯಾಲಯ 20 ದಿನಗಳ ಜಾಮೀನು ಮಂಜೂರು ಮಾಡಿದೆ. ರಾಘವೇಶ್ವರ ಶ್ರೀಗಳಿಗೆ ಬ್ಲಾಕ್ ಮೇಲ್ ಮಾಡಿರುವ ಪ್ರಕರಣದ ಆರೋಪಿಯಾಗಿರುವ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ ಪ್ರಸಾದ್ ಶಾಸ್ತ್ರಿಗಳು ಮಂಗಳೂರಿನಲ್ಲಿ ಆ.31ರಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಆತ್ಮಹತ್ಯೆಗೆ ಯತ್ನಿಸಿದ್ದ ಪುತ್ತೂರಿನ ಕೆದಿಲ ನಿವಾಸಿಯಾಗಿದ್ದ ಶ್ಯಾಮ ಪ್ರಸಾದ್ ಶಾಸ್ತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆ.31ರ ಭಾನುವಾರ ಶ್ಯಾಮ ಪ್ರಸಾದ್ ಶಾಸ್ತ್ರಿಗಳಿಗೆ ಕರೆ ಮಾಡಿದ್ದ ಅನಾಮಿಕರು, ಸೋಮವಾರ ಶ್ರೀಗಳ ಭಕ್ತರು ನಿಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಇದರಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. [ರಾಘವೇಶ್ವರ ಭಾರತಿ ಶ್ರೀಗಳಿಗೆ ಸಿಐಡಿ ನೋಟಿಸ್]

ಶ್ಯಾಮ ಪ್ರಸಾದ್ ಶಾಸ್ತ್ರಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಶಾಸ್ತ್ರಿ ಕುಟುಂಬದವರು ದೂರು ಸಲ್ಲಿಸಿದ್ದರು. ಜೀವ ಬೆದರಿಕೆ, ಆತ್ಮಹತ್ಯೆಗೆ ಪ್ರಚೋದನೆ ಸಂಬಂಧಿಸಿದಂತೆ ಪೊಲೀಸರು ರಾಘವೇಶ್ವರ ಭಾರತಿ ಶ್ರೀಗಳು ಸೇರಿದಂತೆ 11 ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಸದ್ಯ ಶ್ರೀಗಳಿಗೆ ಜಾಮೀನು ಸಿಕ್ಕಿದೆ.
ಶ್ರೀಗಳು ವಿಚಾರಣೆಗೆ ಬರ್ತಾರಾ? : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಐಡಿ ಪೊಲೀಸರು ಭಾನುವಾರ ನೋಟಿಸ್ ಜಾರಿ ಮಾಡಿದ್ದರು. 24 ಗಂಟೆಯೊಳಗೆ ವಿಚಾರಣೆಗೆ ಆಗಮಿಸಬೇಕೆಂದು ಸೂಚನೆ ನೀಡಿದ್ದರು.
ಆದರೆ, ಶ್ರೀಗಳ ಪರ ವಕೀಲರು ಸೋಮವಾರ ಸಂಜೆ ಸಿಐಡಿ ಕಚೇರಿಗೆ ಆಗಮಿಸಿ ಶ್ರೀಗಳು ವಿಚಾರಣೆಗೆ ಹಾಜರಾಗಲು ಎರಡು ದಿನದ ಕಾಲಾವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಸಿಐಡಿ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡುತ್ತಾರೆಯೇ? ಎಂದು ಕಾದು ನೋಡಬೇಕು. ಅತ್ಯಾಚಾರ ಆರೋಪದಲ್ಲಿಯೂ ಶ್ರೀಗಳಿಗೆ ಒಂದು ತಿಂಗಳ ಮಧ್ಯಂತರ ಜಾಮೀನು ದೊರೆತಿದೆ.












Click it and Unblock the Notifications