Shivamogga Airport: ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಹಣವಿಲ್ಲ: ಬಿಜೆಪಿ ಆರೋಪ
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರಲ್ಲಿ ಉದ್ಘಾಟಿಸಿದ್ದರು. ಆದರೆ ಏರ್‌ಪೋರ್ಟ್ ಕಾರ್ಯಾರಂಭ ಮಾಡಿ ಎರಡು ವರ್ಷಗಳು ಪೂರೈಸಿದರೂ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ. ವಿಮಾನ ನಿಲ್ದಾಣ ನಿರ್ಮಾಣಗೊಂಡು 2 ವರ್ಷ ಕಳೆದಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಬೇಕಾಗಿರುವ ಸಾಧನಗಳು ನಿಲ್ದಾಣದಲ್ಲಿ ಧೂಳು ಹಿಡಿಯುತ್ತಿದ್ದರೂ ಹಣ ಬಿಡುಗಡೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿ ಮಲೆನಾಡು ಭಾಗದ ಪ್ರಯಾಣಿಕರಿಗೆ ದ್ರೋಹ ಬಗೆದಿದೆ ಎಂದು ದೂರಿದೆ.
ಸಾರಿಗೆ ಇಲಾಖೆ ಮತ್ತು ನಿಗಮಗಳನ್ನು ಸರ್ವನಾಶ ಮಾಡಿ ಸರ್ಕಾರದ ಆಸ್ತಿಗಳನ್ನು ಹರಾಜು ಹಾಕುವ ದುಸ್ಥಿತಿ ತಂದಿಟ್ಟಿರುವ ಸಿದ್ದರಾಮಯ್ಯ ಅವರ ಸರ್ಕಾರದ ಬಳಿ ಈಗ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸುವುದಕ್ಕೂ ದುಡ್ಡಿಲ್ಲ ಎಂದು ವಾಗ್ದಾಳಿ ನಡೆಸಿದೆ. ಸಾರ್ವಜನಿಕರಿಗೆ ಸಾರಿಗೆ ಸೌಕರ್ಯ ಒದಗಿಸುವುದಕ್ಕೆ ಹಣ ನೀಡದ ತಮ್ಮ ಸರ್ಕಾರ, ಈಗ ಸ್ವಂತ ಹೆಲಿಕಾಪ್ಟರ್, ಜೆಟ್ ಖರೀದಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಮತ್ತು ನಾಚಿಕೆಗೇಡು. ಕೂಡಲೇ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ ಎಂದು ಆಗ್ರಹಿಸಿದೆ.

2,400 ವಿಮಾನಗಳ ಹಾರಾಟ
ಕರ್ನಾಟಕ ಸರ್ಕಾರವೇ ನಿರ್ವಹಿಸಿದ ಪ್ರಥಮ ವಿಮಾನ ನಿಲ್ದಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣವು ಯಶಸ್ವಿಯಾಗಿ 2 ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿ 2,400 ವಿಮಾನಗಳು ಹಾರಾಟ ನಡೆಸಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿದೆ ಎಂದು ಸಚಿವ ಎಂಬಿ.ಪಾಟೀಲ್ ಕೆಲ ತಿಂಗಳ ಹಿಂದೆ ಸಂತಸ ಹಂಚಿಕೊಂಡಿದ್ದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಸೇವೆ ಆರಂಭವಾಗಿ 2 ವರ್ಷ ಪೂರೈಸಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಮೂಲಕ ರಾಜ್ಯ ಸರ್ಕಾರವೇ ನಿರ್ವಹಿಸಲು ಆರಂಭಿಸಿದ ಪ್ರಪ್ರಥಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಈಗ ಯಶಸ್ವಿಯಾಗಿ 2 ವರ್ಷಗಳನ್ನು ಪೂರೈಸಿ 3ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸುಗಮ ಸೇವೆ ನೀಡಿರುವುದು ಹೆಮ್ಮೆಯ ಸಂಗತಿ ಎಂದಿದ್ದರು.
ಶಿವಮೊಗ್ಗ ವಿಮಾನ ನಿಲ್ದಾಣ ಮೂಲಕ ಬೆಂಗಳೂರು, ಗೋವಾ, ಹೈದರಾಬಾದ್, ತಿರುಪತಿ ಚೆನ್ನೈಗೆ ವಿಮಾನ ಸೇವೆ ಲಭ್ಯವಿದ್ದು, ಸದ್ಯದಲ್ಲೇ ಮೇಂಟನನ್ಸ್, ರಿಪೇರಿ & ಓವರ್ಹಾಲ್ ಸೌಲಭ್ಯವೂ ಆರಂಭವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ಮಲೆನಾಡಿನ ಆರ್ಥಿಕತೆ, ಪ್ರವಾಸೋದ್ಯಮ ಹಾಗೂ ಉದ್ಯೋಗಾವಕಾಶಗಳಿಗೆ ಇನ್ನಷ್ಟು ಶಕ್ತಿ ತುಂಬಲಿದೆ ಎಂದು ಪಾಟೀಲ್ ಹೇಳಿದ್ದರು. ಈ ವಿಮಾನ ನಿಲ್ದಾಣದ ಟರ್ಮಿನಲ್ ಕಮಲದ ವಿನ್ಯಾಸದಲ್ಲಿ ನಿರ್ಮಾಣವಾಗಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ 80ನೇ ಜನ್ಮದಿನದಂದು ಅವರ ತವರು ಜಿಲ್ಲೆಯಲ್ಲಿ ಲೋಕಾರ್ಪಣೆಗೊಂಡಿತ್ತು.












Click it and Unblock the Notifications