ತವರು ನೆಲದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಭಾರೀ ಹಿನ್ನಡೆ!
ಬೆಂಗಳೂರು, ಮಾರ್ಚ್ 27; ಕರ್ನಾಟಕದಲ್ಲಿ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಪಕ್ಷಾಂತರ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಭಾರೀ ಹಿನ್ನಡೆಯೊಂದು ಉಂಟಾಗಿದೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಗ್ಗಾಂವಿ ಕ್ಷೇತ್ರದ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ರಾಜು ಕುನ್ನೂರು ಜೊತೆ ಕಾಂಗ್ರೆಸ್ ಸೇರಿದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉಭಯ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಶಿಗ್ಗಾಂವಿಯ ಮಾಜಿ ಸಂಸದ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ. ಕೆಲವು ದಿನಗಳ ಹಿಂದೆಯೇ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಸೋಮವಾರ ಪುತ್ರ ರಾಜು ಕುನ್ನೂರು ಮತ್ತು ನೂರಾರು ಬೆಂಬಲಿಗರ ಜೊತೆ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.
ಮಂಜುನಾಥ್ ಕುನ್ನೂರು, ರಾಜು ಕುನ್ನೂರು ಪಕ್ಷ ಸೇರಿದ ಬಳಿಕ ಮಾತನಾಡಿದ ಡಿ. ಕೆ. ಶಿವಕುಮಾರ್, "ಮಂಜುನಾಥ್ ಕುನ್ನೂರು ಶಾಸಕರಾಗಿದ್ದವರು. ಸಂಸದರಾಗಿಯೂ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತುಕತೆ ನಡೆಸಿದ್ದರು. ಇದೀಗ ಅವರು ಪಕ್ಷ ಸೇರ್ಪಡೆ ಆಗಿರುವುದರಿಂದ ಶಿಗ್ಗಾಂವಿಯಲ್ಲಿ ನಮಗೆ ಬಲ ಬಂದಿದೆ. ಮುಖ್ಯಮಂತ್ರಿಗಳ ಕ್ಷೇತ್ರದ ನಾಯಕರೇ ನಮ್ಮ ಪಕ್ಷ ಸೇರುತ್ತಿದ್ದಾರೆ" ಎಂದು ಹೇಳಿದರು.

"ಮುಖ್ಯಮಂತ್ರಿಗಳು ಇವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದಕ್ಕೆ ಇಂದು ಮಂಜುನಾಥ್ ಕುನ್ನೂರು, ರಾಜು ಕುನ್ನೂರು ಸೇರ್ಪಡೆಯೇ ಸಾಕ್ಷಿ. ನೂರಾರು ಬಿಜೆಪಿ ಕಾರ್ಯಕರ್ತರ ಜೊತೆ ಅವರು ಪಕ್ಷಕ್ಕೆ ಸೇರ್ಪಡೆ ಆಗಿರುವುದು ಹೆಮ್ಮೆಯ ವಿಚಾರ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು. ಇದೇ ಸಂದರ್ಭದಲ್ಲಿ ಚಿಂತಾಮಣಿಯ ನಾಯಕ ಎಂ. ಸಿ. ಸುಧಾಕರ್ ಹಾಗೂ ಕೆ. ಆರ್. ಪೇಟೆ ಕ್ಷೇತ್ರದ ಜೆಡಿಎಸ್ ನಾಯಕ ಬಿ. ಎಲ್. ದೇವರಾಜು ಅವರು ಕಾಂಗ್ರೆಸ್ ಸೇರಿದರು.
ರಾಜಕೀಯ ಪರಿಚಯ; ಮಂಜುನಾಥ್ ಕುನ್ನೂರು 1989 ರಿಂದ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಬಿಜೆಪಿ ಸೇರಿದ್ದ ಅವರು 2004ರ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ 442,759 ಮತಗಳನ್ನು ಪಡೆದು ಸಂಸದರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಪ್ರಹ್ಲಾದ್ ಜೋಶಿ ವಿರುದ್ಧ ಸೋಲು ಕಂಡಿದ್ದರು. 2018ರಲ್ಲಿ ಮತ್ತೆ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿ ಬಿಜೆಪಿ ಸೇರಿದ್ದರು.
ಇದು ಕಾಂಗ್ರೆಸ್‌ನ ಪ್ಲಾನ್ 'ಬಿ'?; ಬಸವರಾಜ ಬೊಮ್ಮಾಯಿ 2018ರ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ 83,868 ಮತಗಳನ್ನು ಪಡೆದು 74,603 ಮತ ಪಡೆದ ಕಾಂಗ್ರೆಸ್‌ನ ಸೈಯದ್ ಅಜ್ಜಂಪೀರ್ ಖಾದ್ರಿ ಸೋಲಿಸಿ ವಿಧಾನಸಭೆ ಪ್ರವೇಶ ಮಾಡಿದರು. ಆದರೆ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿಯಾದರು. ಅವರನ್ನು ಈ ಬಾರಿ ಸೋಲಿಸಬೇಕು ಎಂದು ಕಾಂಗ್ರೆಸ್ ತಂತ್ರ ರೂಪಿಸಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಪಂಚಮಸಾಲಿ ಮತ್ತು ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ. ಮಾಜಿ ಸಚಿವ ವಿನಯ್ ಕುಲಕರ್ಣಿ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ. ಅವರನ್ನು ಮುಖ್ಯಮಂತ್ರಿಗಳ ವಿರುದ್ಧ ಕಣಕ್ಕಿಳಿಸಿ, ಸೋಲಿಸುವುದು ಕಾಂಗ್ರೆಸ್‌ನ ಪ್ಲಾನ್ 'ಎ' ಆಗಿತ್ತು. ಆದರೆ ಅವರು ಧಾರವಾಡ ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಪ್ಲಾನ್ 'ಬಿ'ಯಾಗಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಮಂಜುನಾಥ್ ಕುನ್ನೂರು ಕಾಂಗ್ರೆಸ್‌ಗೆ ಸೆಳೆಯಲಾಗಿದೆ. ಸೈಯದ್ ಅಜ್ಜಂಪೀರ್ ಖಾದ್ರಿ, ಮಂಜುನಾಥ್ ಕುನ್ನೂರು ಒಟ್ಟಾಗಿ ಸೇರಿಸಿ ಬಸವರಾಜ ಬೊಮ್ಮಾಯಿ ಸೋಲಿಸಬಹುದು ಎಂಬುದು ಲೆಕ್ಕಾಚಾರ.











Click it and Unblock the Notifications