ಕನ್ನಡದಲ್ಲಿ ಮರೆತೇ ಹೋದಂತಿದ್ದ ಅದ್ಭುತ ಕಲಾಪ್ರಕಾರ ಪುನರುಜ್ಜೀವನಗೊಳಿಸಿದ ಶತಾವಧಾನಿ ರಾ ಗಣೇಶ್: ಮಂಜುನಾಥ ಕೊಳ್ಳೇಗಾಲ ಬರಹ
ಕನ್ನಡದಲ್ಲಿ ಮರೆತೇ ಹೋದಂತಿದ್ದ ಅದ್ಭುತ ಕಲಾಪ್ರಕಾರ ಪುನರುಜ್ಜೀವನಗೊಳಿಸಿದ್ದು ಶತಾವಧಾನಿ ರಾ ಗಣೇಶ್ - ಮಂಜುನಾಥ ಕೊಳ್ಳೇಗಾಲ ಅವರ ಬರಹ ಇಲ್ಲಿದೆ.
ನವರಸಗಳಲ್ಲದೆ ಮತ್ತೊಂದು ರಸವಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ - ಪಾಂಡಿತ್ಯ ರಸ. ಶುದ್ಧ ಕಲೆಯೊಂದರ ಬಹುಮುಖ್ಯ ಉದ್ದೇಶವೇ ರಸಾನ್ವೇಷಣೆ ಮತ್ತು ರಸನಿಷ್ಪತ್ತಿ ಎನ್ನುವುದಾದರೆ, ಅವಧಾನವೆಂಬ ಕಲೆಯ ಮಗ್ಗುಲು ಮಗ್ಗುಲನ್ನೂ ಈ ಪಾಂಡಿತ್ಯರಸದೃಷ್ಟಿಯಿಂದ ಶೋಧಿಸಿದವರು, ಈ ಕಲಾ ಪ್ರಕಾರದಲ್ಲಿ ರಸೋತ್ಕರ್ಷವನ್ನು ಸಾಧಿಸಿದವರು, ಆಸ್ವಾದಿಗಳಿಗಾಗಿ ಅದನ್ನು ಮೊಗೆಮೊಗೆದು ಉಣಬಡಿಸಿದವರು ಶತಾವಧಾನಿ ರಾ ಗಣೇಶರು.
ಕನ್ನಡದಲ್ಲಿ ಮರೆತೇ ಹೋದಂತಿದ್ದ ಅದ್ಭುತವಾದ ಕಲಾಪ್ರಕಾರವೊಂದನ್ನು ಪುನರುಜ್ಜೀವನಗೊಳಿಸಿದ್ದಷ್ಟೇ ಅಲ್ಲ, ಉತ್ಸಾಹಿಗಳಾದ ತರುಣ ಅವಧಾನಿಗಳ ಪೀಳಿಗೆಯನ್ನೇ ಕಟ್ಟಿ ಬೆಳೆಸಿದವರು. ಅವರು ಅವಧಾನಕಲೆಯನ್ನು ಸಾಧಿಸಿದರು ಎನ್ನುವುದಕ್ಕಿಂತ ಅದನ್ನು ಚಂದ್ರನ ಶೋಡಷಕಲೆಯಂತೆ ಧರಿಸಿ ಮೆರೆದರು ಎನ್ನುವುದು ಸೂಕ್ತವೇನೋ.

ಶತಾವಧಾನಿ ಆರ್ ಗಣೇಶರನ್ನು ಮೊದಲ ಬಾರಿಗೆ ನಾನು ನೋಡಿದ್ದು 1986ರಲ್ಲೋ 87ರಲ್ಲೋ ನಮ್ಮೂರಿನಲ್ಲಿ ನಡೆದ ಅವಧಾನಕಾರ್ಯಕ್ರಮದಲ್ಲಿ - (ಅವರಿನ್ನೂ ಆಗ ಶತಾವಧಾನಿಗಳಾಗಿರಲಿಲ್ಲವೆಂದು ನೆನಪು). ನನಗಾಗ ಹದಿನಾರೋ ಹದಿನೇಳೋ. ಅದು ನಾನು ನೋಡಿದ ಮೊತ್ತಮೊದಲ ಅವಧಾನಕಾರ್ಯಕ್ರಮ. ಆಗಿನ್ನೂ ಅವಧಾನವೆಂಬುದು ನಮಗಿರಲಿ, ಕನ್ನಡಕ್ಕೇ ಹೊಸದು. ಕನ್ನಡದಲ್ಲಿ ಸಂಪೂರ್ಣ ಮರೆಯಾಗಿಬಿಟ್ಟಿದ್ದ ಅವಧಾನಕಲೆಯನ್ನು ಕನ್ನಡಕ್ಕೆ ಮರುಪರಿಚಯಿಸಿದ್ದೂ ಗಣೇಶರೇ, ಮೊದಲ ಅವಧಾನದಲ್ಲಿ ಅವರಿಗೆ ಹತ್ತೊಂಬತ್ತು ವರ್ಷವಂತೆ.
ನಮ್ಮೂರಲ್ಲಿ ಅವಧಾನಕಾರ್ಯಕ್ರಮ ಮಾಡಿದಾಗ ಅವರು ಬಹುಶಃ ಇಪ್ಪತ್ನಾಲ್ಕು ಇಪ್ಪತ್ತೈದರ ತರುಣರಿರಬೇಕು. ನಮಗೋ ಅವಧಾನದ ಬಗ್ಗೆ ವಿಚಿತ್ರ ಅದ್ಭುತಕಲ್ಪನೆಗಳು - ಯಾವ ಪದ್ಯ ಕೇಳಿದರೂ ಅಲ್ಲೇ ಹೇಳಿಬಿಡುತ್ತಾರಂತೆ, ಬೇಡವೆಂದ ಅಕ್ಷರ ಬಳಸದೇ ಅಲ್ಲೇ ಪದ್ಯ ಹೇಳುತ್ತಾರಂತೆ, ಗಂಟೆ ಹೊಡೆದದ್ದನ್ನೆಲ್ಲಾ ಲೆಕ್ಕವಿಟ್ಟುಕೊಂಡು ಕೊನೆಯಲ್ಲಿ ಹೇಳುತ್ತಾರಂತೆ (ಆಗ ಗಣೇಶರು ಘಂಟಾಗಣನವನ್ನೂ ಅವಧಾನದ ಭಾಗವಾಗಿ ಇಟ್ಟುಕೊಂಡಿದ್ದರು). ಕಿಕ್ಕಿರಿದ ಕಲಾಮಂಟಪ ಸಭಾಂಗಣದಲ್ಲಿ ಕೊನೆಯ ಮೂಲೆಯಲ್ಲಿ ನಿಂತು ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದ್ದು.
ಅದಾಗಿ ಎಷ್ಟೋ ವರ್ಷ ಕಳೆದ ಮೇಲೆ ಬೆಂಗಳೂರಿನ ಯಾವುದೋ ಪುಸ್ತಕ ಪ್ರದರ್ಶನದಲ್ಲಿ ಎದುರಿಗೆ ಸಿಕ್ಕಾಗ ಅವರೇ ಇವರಲ್ಲವೇ ಎಂದು ದಿಟ್ಟಿಸಿ ನೋಡಿದ್ದೆ. ನಾನು ದಿಟ್ಟಿಸಿ ನೋಡಿದ್ದರಿಂದ, ಪರಿಚಯವಿರಬೇಕೆಂದುಕೊಂಡರೋ ಏನೋ, ಮುಗುಳ್ನಕ್ಕು ಅವರಷ್ಟಕ್ಕೆ ಅವರು ಮುಂದುವರಿದರು. ನನಗೆ ಅಚ್ಚರಿಯ ಮೇಲೆ ಅಚ್ಚರಿ! ಎಲಾ, ಎಷ್ಟೋ ವರ್ಷಗಳ ಹಿಂದೆ ಅಲ್ಲೆಲ್ಲೋ ಮೂಲೆಯಲ್ಲಿ ನಿಂತು ಇವರ ಕಾರ್ಯಕ್ರಮ ನೋಡಿದ್ದು, ಮಾತಾಡಿಸಿಯೂ ಇಲ್ಲ, ಮುಖ ಪರಿಚಯವೂ ಇಲ್ಲ - ಆದರೂ, ಆ ಸಂದಣಿಯಲ್ಲೂ ನನ್ನ ಮುಖವನ್ನು ನೆನಪಿಟ್ಟುಕೊಂಡು ಈಗ ಗುರುತಿಸಿ, ಮುಗುಳು ನಕ್ಕರೆಂದರೆ, ಇವರ ನೆನಪಿನ ಶಕ್ತಿ ಇನ್ನೆಂತದ್ದಿರಬೇಕು ಎಂದು ಬೆರಗಾಗಿದ್ದೆ. ಈಗ ನಗೆ ಬರುತ್ತದೆ, ಆದರೆ ತಮ್ಮ ಕಲಾಜಾಲದ ಮೂಲಕ ಅವರು ಮೂಡಿಸಿದ್ದ ಅತಿಮಾನುಷ-ರಮ್ಯಕಲ್ಪನೆಗಳ ಪ್ರಭಾವಳಿ ಹಾಗಿತ್ತು.
ಇದಾಗಿ ಇನ್ನೆಷ್ಟೋ ವರ್ಷಗಳ ನಂತರ ಇದೇ ಬಗೆಯ ಬೆರಗು ಮತ್ತೊಮ್ಮೆ ಮೂಡಿದ್ದು, ಈ 'ಅತಿಮಾನವ' ನನ್ನ ನಂಬರನ್ನೇ ಹುಡುಕಿ ಸ್ವತಃ ಕರೆ ಮಾಡಿ "ನಾನು ಅವಧಾನಿ ರಾ ಗಣೇಶ್ ಅಂತ" ಎಂದು ಪರಿಚಯಿಸಿಕೊಂಡಾಗ; "ನೀವು ಪದ್ಯಪಾನದಲ್ಲಿ ಬರೆದ ಪದ್ಯ ಬಹಳ ಸೊಗಸಾಗಿತ್ತು ನಿಮ್ಮ ಪರಿಚಯ ಮಾಡಿಕೊಳ್ಳಲು ಕರೆ ಮಾಡಿದೆ" ಎಂದಾಗ. ಸರಳತೆಯೂ ಅತಿಮಾನುಷತೆಯ ಒಂದು ಉಪಾಧಿಯೇ ಏನೋ. ನನಗೆ ಗಣೇಶರ ಸ್ನೇಹಲಾಭವಾಗಿದ್ದು ಹೀಗೆ. ಅವರ ಹಲವು ಕಾರ್ಯಕ್ರಮಗಳಲ್ಲಿ ಪೃಚ್ಛಕತ್ವವನ್ನು ಸವಿದಿದ್ದೇನೆ, ಅವರೇ ಕೊಡಮಾಡಿದ ಸಲುಗೆಯ ಸವಿಯನ್ನನುಭವಿಸಿದ್ದೇನೆ.
ಪ್ರಶಸ್ತಿಗಳು ಹಲವು ಕಾರಣಗಳಿಗೆ ಬರುತ್ತವೆ, ಬಂದವು ಮರೆಯುತ್ತವೆ; ಆದರೆ ಕೆಲವರಿಗೆ ಪ್ರಶಸ್ತಿ ಬಂದಾಗ ವಿಶೇಷವಾದ ಸಂತೋಷವಾಗುತ್ತದೆ. ಗಣೇಶರಂಥವರ ವರ್ಚಸ್ಸಿನ ಆವಶ್ಯಕತೆ ಪದ್ಮಪ್ರಶಸ್ತಿಗೆ ಇತ್ತು ಎಂಬುದು ಒಂದು ಕಾರಣವಾದರೆ, ನಮ್ಮವರಿಗೆ ಬಂದಿದೆಯಲ್ಲ ಎಂಬುದು ಹಿಗ್ಗಿಗೆ ಮತ್ತೊಂದು ಕಾರಣ. ಪದ್ಮಭೂಷಣ ಶತಾವಧಾನಿ ಡಾ. ರಾ ಗಣೇಶರಿಗೆ ಅಭಿನಂದನೆಗಳು.












Click it and Unblock the Notifications