ಶಕ್ತಿ ಯೋಜನೆ ಪರಿಣಾಮ: ದೇವಾಲಯಗಳ ಹುಂಡಿಗಳಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಹಣ: ಯಾವ ದೇಗುಲದಲ್ಲಿ ಎಷ್ಟು?
ಬೆಂಗಳೂರು, ಜುಲೈ 14: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಈ ಯೋಜನೆ ಅವಕಾಶ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳುತ್ತಿರುವ ಮಹಿಳೆಯರು ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ದೇವಸ್ಥಾನಗಳಿಗೆ ಅಪಾರ ಪ್ರಮಾಣದ ಕಾಣಿಕೆ ಹರಿದುಬಂದಿದೆ.
ಉಚಿತ ಪ್ರಯಾಣದ ಮೂಲಕ ಆಷಾಢ ಮಾಸದಲ್ಲಿ ಅಪಾರ ಪ್ರಮಾಣದ ಮಹಿಳಾ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ದೇವಸ್ಥಾನಗಳ ಹುಂಡಿ ಸಂಗ್ರಹದಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಪ್ರಸಿದ್ಧ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ನಡೆಯಿತು. ವಿವಿಧ ಸ್ವ-ಸಹಾಯ ಗುಂಪುಗಳ 100 ಕ್ಕೂ ಹೆಚ್ಚು ಮಹಿಳೆಯರು ಎಣಿಕೆ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದರು. ದೇವಸ್ಥಾನದ ಹುಂಡಿ ಸಂಗ್ರಹವು ಈ ಋತುವಿನಲ್ಲಿ 1.77 ಕೋಟಿಗೆ ತಲುಪಿದೆ. ಇದಕ್ಕೆ ಸರ್ಕಾರದ ಶಕ್ತಿ ಯೋಜನೆ ಕಾರಣ ಎಂದು ದೇವಸ್ಥಾನದ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಬೆಳಗಾವಿ ಜಿಲ್ಲೆಯ ಸೌಂದತ್ತಿಯಲ್ಲಿರುವ ಪ್ರಸಿದ್ಧ ಯಲ್ಲಮ್ಮ ದೇವಸ್ಥಾನದ ಹುಂಡಿ ಸಂಗ್ರಹವೂ ಜೋರಾಗಿ ನಡೆಯುತ್ತಿದೆ. ಮೇ 17 ಮತ್ತು ಜೂನ್ 30 ರ ನಡುವೆ ದೇವಸ್ಥಾನದ ಹುಂಡಿಗಳಲ್ಲಿ 1.37 ಕೋಟಿ ರೂ. ಬಂದಿರುವ ಬಗ್ಗೆ ವರದಿಯಾಗಿದೆ.
ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಜೊತೆ ಮಾತನಾಡಿರುವ ಎಲ್ಲಮ್ಮ ದೇವಸ್ಥಾನದ ಟ್ರಸ್ಟ್‌ನ ಸಿಇಒ ಬಿ.ಮಹೇಶ್, 'ಹುಂಡಿಯಲ್ಲಿ ಒಟ್ಟು 1.30 ಕೋಟಿ ರೂ. ಸಂಗ್ರಹವಾಗಿದೆ. ಹುಂಡಿಗಳಲ್ಲಿ ನಗದು ಮಾತ್ರವಲ್ಲದೆ 4.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಸಂಗ್ರವಾಗಿದೆ. ಅದರಲ್ಲಿ 2.29 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳು ಇವೆ' ಎಂದು ಮಾಹಿತಿ ನೀಡಿದ್ದಾರೆ.

ಶಕ್ತಿ ಯೋಜನೆ ಆರಂಭಿಸಿರುವುದರಿಂದ ದೇವಸ್ಥಾನಕ್ಕೆ ಅಪಾರ ಪ್ರಮಾಣದ ಮಹಿಳಾ ಭಕ್ತರು ಆಗಮಿಸುತ್ತಿದ್ದಾರೆ ಎಂದರು. ದೇವಸ್ಥಾನದ ಹುಂಡಿಯಲ್ಲಿ ಬರುವ ದೇಣಿಗೆಯನ್ನು ರಿಂಗ್ ರಸ್ತೆ, ಬಸ್ ತಂಗುದಾಣ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ನಂತರ (ಜೂನ್ 11) ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳ ಹುಂಡಿ ಸಂಗ್ರಹಣೆಯಲ್ಲಿ ಏರಿಕೆ ಕಾಣುತ್ತಿದೆ.
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ ಜೂನ್ ತಿಂಗಳು 3,03,48,146 ರೂ.ಗಳಷ್ಟು ಸಂಗ್ರಹವಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ 84,55,342 ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ದಕ್ಷಿಣ ಕನ್ನಡದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2,14,92,804 ರೂ. ಸಂಗ್ರಹವಾಗಿತ್ತು.

ದತ್ತಿ ಇಲಾಖೆಯ ಅಧೀನದಲ್ಲಿರುವ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೂನ್‌ನಲ್ಲಿ 15,02,838 ರೂ. ಸಂಗ್ರಹವಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ (ರೂ 11,22,432) 3,80,406 ರೂ ಹೆಚ್ಚಳವಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಅಧಿಕಾರಿಗಳು ಕೂಡ ಹುಂಡಿ ಸಂಗ್ರಹದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಕೋಲಾರ ಜಿಲ್ಲೆ ಪ್ರಸಿದ್ಧ ದೇವಸ್ಥಾನಗಳಾದ ಕೋಲಾರಮ್ಮ ದೇವಸ್ಥಾನ, ಮುಳಬಾಗಲು ಕುರುಡುಮಲೆ ಶ್ರೀ ವಿನಾಯಕ ದೇವಸ್ಥಾನ, ಮುಳಬಾಗಲು ಆಂಜನೇಯ ಸ್ವಾಮಿ ದೇವಸ್ಥಾನ, ಚಿಕ್ಕ ತಿರುಪತಿ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ಮಹಿಳಾ ಭಕ್ತರ ದಂಡೇ ಹರಿದು ಬರುತ್ತಿದೆ ಎಂದು ಮುಜರಾಯಿ ತಹಶೀಲ್ದಾರ್ ನಾಗವೇಣಿ ತಿಳಿಸಿದ್ದಾರೆ.












Click it and Unblock the Notifications