ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಸೇರಿ ಐವರ ವಿರುದ್ಧ ಸರ್ಕಾರದ ಕಾರ್ಯದರ್ಶಿಗೆ ದೂರು
ಬೆಂಗಳೂರು, ಜ. 13: ಪೊಲೀಸ್ 'ಸಿಂಗಂ' ಎಂದು ಕರೆಸಿಕೊಳ್ಳುವ ರವಿ ಡಿ. ಚನ್ನಣ್ಣನವರ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳು ಆರೋಪಿಗಳಿಂದ 50 ಲಕ್ಷ ರೂ. ವಸೂಲಿ ಮಾಡಿರುವ ಗಂಭೀರ ಅರೋಪ ಕೇಳಿ ಬಂದಿದೆ. ಈ ಕುರಿತು ಸಂತ್ರಸ್ತ ವ್ಯಕ್ತಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರನ್ನು ತನಿಖೆ ನಡೆಸುವಂತೆ ಒಳಾಡಳಿತ ಇಲಾಖೆಗೆ ಆದೇಶ ಮಾಡಲಾಗಿದೆ.
ಸದ್ಯ ಸಿಐಡಿಯಲ್ಲಿ ಎಸ್ಪಿಯಾಗಿರುವ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್, ಅಂದಿನ ಡಿವೈಎಸ್ಪಿ ಮಹದೇವಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಇಸ್ಮಾಯಿಲ್ ಹೊಸೂರು ಎಂಬುವರ ವಿರುದ್ಧ ಮಂಜುನಾಥ್ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್‌ಗೆ ದೂರು ನೀಡಿದ್ದರು. ದೂರನ್ನಾಧರಿಸಿ ತನಿಖೆ ನಡೆಸುವಂತೆ ಒಳಾಡಳಿತ ಇಲಾಖೆಗೆ ಆದೇಶಿಸಲಾಗಿದೆ. ಈ ದೂರಿನ ಪ್ರತಿ ಒನ್ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ.
ಜಲ್ಲಿ ಕ್ರಷರ್ ವಹಿವಾಟು ಸಂಬಂಧ ವಂಚನೆ ಮಾಡಿದ್ದ ವ್ಯಕ್ತಿಯ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಣ ಪಡೆದು ವಂಚನೆ ಸಂಬಂಧ ನೀಡಿದ ದೂರಿಗೆ ನ್ಯಾಯ ಕೊಡದೇ ಆರೋಪಿಗಳಿಂದ 50 ಲಕ್ಷ ರೂ. ಹಣ ಪಡೆದು ದೂರುದಾರನಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಹಾಗೂ ಐಪಿಎಸ್ ಕನಸು ಕಾಣುವವರಿಗೆ ಮಾದರಿ ಕಾಪ್ ಎಂಬಂತೆ ಬಿಂಬಿತವಾಗಿರುವ ರವಿ ಚನ್ನಣ್ಣನವರ್ ಅವರ ವಿರುದ್ಧ ಗುರುತರ ಅರೋಪ ಕೇಳಿ ಬಂದಿರುವುದು ಇದೀಗ ಪೊಲೀಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ದೂರಿನಲ್ಲೇನಿದೆ: ನನಗೆ ನ್ಯಾಯ ಸಿಗುವ ಭರವಸೆಯೊಂದಿಗೆ ನೊಂದು ಈ ದೂರು ದಾಖಲಿಸುತ್ತಿದ್ದೇನೆ. ನನಗೊಬ್ಬ ಮಗಳಿದ್ದಾಳೆ. ನನಗೆ ಕಳೆದುಕೊಂಡಿರುವ ಹಣ ಪಡೆಯದೇ ಬದುಕಲು ಬೇರೆ ದಾರಿಯಿಲ್ಲ. ಹಣ ಕೊಡಿಸುವ ಹೆಸರಿನಲ್ಲಿ ನನ್ನಿಂದಲೇ ಹಣ ಪಡೆದು ಪೊಲೀಸ್ ಅಧಿಕಾರಿಗಳು ಮೋಸ ಮಾಡಿದ್ದಾರೆ. ಈ ಕುರಿತು ನನ್ನ ಬಳಿ ಇರುವ ಎಲ್ಲಾ ಸಾಕ್ಷಾಧಾರಗಳನ್ನು ನಿಮ್ಮ ಮುಂದೆ ಇಟ್ಟು ನ್ಯಾಯ ಕೋರುತ್ತಿದ್ದೇನೆ. ಈ ಕುರಿತು ಸಿಬಿಐ ತನಿಖೆ ನಡೆಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ನನಗೆ ವಂಚನೆ ಮಾಡಿದ್ದ ಅಶೋಕ ಮತ್ತು ಇತರೆ 9 ಮಂದಿಯ ವಿರುದ್ಧ ನಾನು ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಪ್ರಭಾವಿ ವ್ಯಕ್ತಿಯಾಗಿರುವ ಅಶೋಕ್, ಹಣಕಾಸು ವಹಿವಾಟು ನಡೆಸುತ್ತಿದ್ದು, ಈತನ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದರು. ತಿಮ್ಮರಾಯಪ್ಪ ಬ್ಲೂ ಮೆಟಲ್ಸ್ ಹೆಸರಿನಲ್ಲಿ ಅಶೋಕ್ ಜಲ್ಲಿ ಕ್ರಷರ್ ನಡೆಸುತ್ತಿದ್ದು, ಬ್ಯುಜಿನೆಸ್ ಮಾಡುವ ಸಲುವಾಗಿ ನನ್ನನ್ನು ಹಣ ಕೇಳಿದ್ದರು. ನಾನು ಬ್ಯಾಂಕ್ ಮೂಲಕ ಅಶೋಕ್ ಅವರಿಗೆ ಹಣ ಸಂದಾಯ ಮಾಡಿದ್ದು, ಇದಾದ ಬಳಿಕ ನನ್ನ ಕಂಪನಿ ಮಾರಾಟ ಮಾಡಿ ಅಶೋಕ್ ನನ್ನು ನಂಬಿ 3.90 ಕೋಟಿ ರೂ. ಹೂಡಿಕೆ ಮಾಡಿದ್ದು, ಅದನ್ನು ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.

ನಾನು ಕಂಪನಿ ಮಾರಾಟ ಮಾಡಿ ಕೊಟ್ಟಿದ್ದ ಒಟ್ಟು 3.90 ಕೋಟಿ ಹಣ ವಂಚನೆ ಸಂಬಂಧ ನಾನು ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದೆ. ಪ್ರಭಾವಿ ಅಶೋಕ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲು ನಿರಾಕರಿಸಿದರು. ಐದು ಲಕ್ಷ ರೂ. ಕೊಟ್ಟರೆ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸುವುದಾಗಿ ಹೇಳಿದರು. ಅದರಂತೆ ಮೊದಲ ಕಂತಿನಲ್ಲಿ ನಾಲ್ಕು ಲಕ್ಷ ರೂ. ಹಣವನ್ನು ಪಾವತಿ ಮಾಡಿದೆ. ಶಭಾನ ಮತ್ತು ಶುಭಾ ಎಂಬ ಅಧಿಕಾರಿಗಳ ಕೈಗೆ ನಾನು ಹಣ ಕೊಟ್ಟಿದ್ದೇನೆ. ಇದಾದ ಬಳಿಕ ಅಂದಿನ ಡಿವೈಎಸ್ಪಿಯಾಗಿದ್ದ ಮಹದೇವಪ್ಪ ಅವರನ್ನು ಭೇಟಿ ಮಾಡಲು ಪೊಲೀಸರು ಸೂಚಿಸಿದರು. ಅವರನ್ನು ಭೇಟಿ ಮಾಡಿದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದು ಅವರಿಗೆ 50 ಸಾವಿರ ರೂ. ಹಣ ನೀಡಿದ್ದೇನೆ. ಆ ಬಳಿಕ ಡಿವೈಎಸ್ಪಿ ಮಹದೇವಪ್ಪ ಅವರು ಸೂಚಿಸಿದ ಕಾಶಿ ಎಂಬ ವ್ಯಕ್ತಿಗೆ ಎರಡು ಲಕ್ಷ ರೂ. ಕೊಟ್ಟಿರುತ್ತೇನೆ.

ಎಫ್ಐಆರ್ ದಾಖಲಿಸಲು ನನ್ನಿಂದ ಐದು ಲಕ್ಷ ರೂ. ಹಣ ಪಡೆದ ಬಳಿಕ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅತ್ತಿಬೆಲೆ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಮುರುಳಿ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆರು ಮಂದಿ ಬಂಧನದ ವೇಳೆ ಅವರ ಪಾಲು ಹಣ ಕೊಡುವುದಾಗಿ ಒಪ್ಪಿಕೊಂಡಿದ್ದರು. ಪ್ರಮುಖ ಆರೋಪಿ ಅಶೋಕ್ ತಲೆ ಮರೆಸಿಕೊಂಡಿದ್ದು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದರು. ಆನಂತರ ಆತ ನಿರೀಕ್ಷಣಾ ಜಾಮೀನು ಪಡೆದಿದ್ದು, ಆತನಿಗೆ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವಂಚನೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಆರೋಪಿ ಅಶೋಕ್ ಎಸ್ಪಿ ರವಿ ಚಣ್ಣನವರ್ ಅವರಿಗೆ 25 ಲಕ್ಷ ರೂ, ಡಿವೈಎಸ್ಪಿಗೆ 15 ಲಕ್ಷ, ಮತ್ತೊಬ್ಬ ಅಧಿಕಾರಿಗೆ 10 ಲಕ್ಷ ರೂ. ಕೊಟ್ಟು ಇತ್ಯರ್ಥ ಮಾಡಿರುವ ವಿಚಾರವನ್ನು ಅಶೋಕ್ ತನ್ನ ಪರಿಚಿತ ಇಬ್ಬರು ವ್ಯಕ್ತಿಗಳ ಬಳಿ ಹೇಳಿಕೊಂಡಿದ್ದು, ಈ ವಿಚಾರ ಮಂಜುನಾಥ್ ಗಮನಕ್ಕೆ ಬಂದಿದ್ದು, ಇದಕ್ಕೆ ಸಂಬಂಧಿಸಿದ ಕೆಲವು ಅಡಿಯೋ ರೆಕಾರ್ಡ್ ಸಮೇತ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ.

Recommended Video
ನನ್ನ ಮನೆ ಮಾರಾಟಕ್ಕೆ ಬಂದಿದೆ. ಇಂಥ ಸಂದರ್ಭದಲ್ಲೂ ನನ್ನ ಪತ್ನಿಯ ಒಡವೆಗಳನ್ನು ಮಾರಾಟ ಮಾಡಿ ಪೊಲೀಸರು ಕೇಳಿದಂತೆ ಐದು ಲಕ್ಷ ರೂ. ನೀಡಿದ್ದೇನೆ. ಆದರೆ, ಅರೋಪಿಗಳ ಜತೆ ಶಾಮೀಲಾಗಿ ನನಗೆ ನ್ಯಾಯ ಕೊಡಿಸದೇ ಆತನಿಗೆ ಸಹಕರಿಸಿದ್ದಾರೆ. ಈ ಕುರಿತು ಸಿಬಿಐ ತನಿಖೆಗೆ ವಹಿಸಿ ಎಂದು ದೂರುದಾರ ಮಂಜುನಾಥ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications