ಕರೆಕ್ಟಾಗಿ ಹೇಳಿದ್ಯಣ್ಣಾ, ದೊರೆಸ್ವಾಮಿ ರಾಜಕಾರಿಣಿನೇ ಬಿಡು.. ಡೌಟೇ ಇಲ್ಲ!
ಇವರು ಕೊಡಲ್ಲಾ, ಅವರು ಬಿಡಲ್ಲಾ.. ಹಂಗಾಗಿದೆ, ಕರ್ನಾಟಕ ವಿಧಾನಮಂಡಲದ ಹಾಲೀ ಬಜೆಟ್ ಅಧಿವೇಶನ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಆಡಿರುವ ಮಾತು, ಮಂಗಳವಾರ (ಮಾ 3) ಕೂಡಾ ಭಾರೀ ಸದ್ದು ಮಾಡಿದೆ.
ಆಡಳಿತ ಮತ್ತು ವಿರೋಧ ಪಕ್ಷದ ಮುಖಂಡರ ಜೊತೆ, ಹಲವು ಸುತ್ತಿನ ಮಾತುಕತೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಮಾಡಿದರೂ, ಅದ್ಯಾವುದೂ ವರ್ಕೌಟ್ ಆಗಿಲ್ಲ. ಹಿಡಿದ ಪಟ್ಟನ್ನು ಬಿಡಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಿದ್ದರಿಲ್ಲ.
ಗುರುವಾರ, ಮಾರ್ಚ್ ಐದಕ್ಕೆ ರಾಜ್ಯ ಆಯವ್ಯಯ ಮಂಡನೆ ಆಗಬೇಕಿದೆ. ಈ ನಡುವೆ, ದೊರೆಸ್ವಾಮಿಯವರನ್ನು ಅವಮಾನಿಸಿದ ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲು ಘನತೆವೆತ್ತ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಇವೆಲ್ಲದರ ನಡುವೆ, ಜಾತ್ಯಾತೀತವಾಗಿ ಎಲ್ಲರ ಪ್ರೀತಿಯ ಜೆಡಿಎಸ್, ಹೊಳೆನರಸೀಪುರದ ಶಾಸಕ ಎಚ್.ಡಿ.ರೇವಣ್ಣ ಬಾಯಿತಪ್ಪಿನಿಂದ ಆಡಿದ ಮಾತು, ಬಿಜೆಪಿಯವರಿಗೆ ಬಿರಿಯಾನಿ ಸಿಕ್ಕಿದಂಗಾಗಿದೆ.

ದೊರೆಸ್ವಾಮಿ ಒಳ್ಳೆಯ ವ್ಯಕ್ತಿ, ಆಮೇಲೆ ಒಳ್ಳೆಯ ರಾಜಕಾರಣಿ ಬೇರೆ
"ನಾವು ಇವತ್ತು ಏನು ದೊರೆಸ್ವಾಮಿಯವರ ಬಗ್ಗೆ ಚರ್ಚೆ ನಡೆಸುತ್ತಿದ್ದೇವೋ, ಪಾಪ ಅವರು ನೂರು ವರ್ಷ ತುಂಬಿರುವಂತಹ ಪ್ರಾಮಾಣಿಕ, ಒಳ್ಳೆಯ ವ್ಯಕ್ತಿ, ಆಮೇಲೆ ಒಳ್ಳೆಯ ರಾಜಕಾರಣಿ ಬೇರೆ' ಎಂದು ಬಾಯಿತಪ್ಪಿ ರೇವಣ್ಣ ಹೇಳಿದರು. ಬಿಜೆಪಿಯವರು ಇದನ್ನೇ ಹಿಡಿದುಕೊಂಡು ಬಿಟ್ಟರು.

ತಪ್ಪಿನ ಅರಿವಾದ ರೇವಣ್ಣ
ತಪ್ಪಿನ ಅರಿವಾದ ರೇವಣ್ಣ, 'ರೀ.. ಒಂದ್ನಿಮಿಷ ತಡೀರಿ, ರಾಜಕಾರಿಣಿ ಅಂತಾ ನಾನು ಹೇಳಿದ್ದಲ್ಲಾ... ಸ್ವಾತಂತ್ರ್ಯ ಹೋರಾಟಗಾರರು ಅಂತ. ತಡೀರಿ, ನನಗೆ ಮಾತಾಡೋಕೆ ಬಿಡಿ" ಎಂದಾಗ, ಕರೆಕ್ಟಾಗಿ ಹೇಳಿದ್ಯಣ್ಣಾ ಅವರು ರಾಜಕಾರಿಣಿನೇ ಬಿಡು ಎಂದು ಬಿಜೆಪಿಯವರು ಹೇಳಿದಾಗ, ರೇವಣ್ಣ, ಸ್ವಲ್ಪಹೊತ್ತು ತಲೆತಗ್ಗಿಸಿ ನಿಂತರು.

ದೊರೆಸ್ವಾಮಿ ಕಾಂಗ್ರೆಸ್ಸಿನ ವಕ್ತಾರರು
ರೇವಣ್ಣನವರ ಹೇಳಿಕೆಯ ವೇಳೆ, "ದೊರೆಸ್ವಾಮಿ ರಾಜಕಾರಣಿನೇ.. ಕಾಂಗ್ರೆಸ್ಸಿನ ವಕ್ತಾರರು" ಎನ್ನುವ ಬಿಜೆಪಿಯವರ ಹಿನ್ನಲೆ ಸದ್ದು ಜಾಸ್ತಿ ಆದ ಹಿನ್ನಲೆಯಲ್ಲಿ ರೇವಣ್ಣ ತಮ್ಮ ಭಾಷಣವನ್ನು ಮುಗಿಸಿದರು. ಇನ್ನೊಬ್ಬರ ಭಾಷಣ ಶುರುವಾಗುವವರೆಗೂ, ಬಿಜೆಪಿಯವರು ಇದನ್ನೇ ಹೇಳುತ್ತಿದ್ದರು.

ಸಿದ್ದರಾಮಯ್ಯ ಕೆಂಡಾಮಂಡಲ
ದೊರೆಸ್ವಾಮಿ ವಿರುದ್ದ ಯತ್ನಾಳ್ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ಕಲ್ಪಿಸದ ಸ್ಪೀಕರ್ ನಡೆಯನ್ನು ಆಕ್ಷೇಪಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬುಧವಾರ (ಮಾ 4) ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಸಂವಿಧಾನಕ್ಕೆ ವಿರುದ್ದವಾಗಿ ನಡೆದುಕೊಂಡಾಗ,ಕ್ರಮ ತೆಗೆದುಕೊಳ್ಳುವ ಅಧಿಕಾರ ಸ್ಪೀಕರ್ ಅವರಿಗಿದೆ. ಆದರೆ, ಅವರು ಅದನ್ನು ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ದೂರಿದ್ದಾರೆ.












Click it and Unblock the Notifications