Property: ಆಸ್ತಿಯಲ್ಲಿ ಪಾಲು ಕೇಳುವವರಿಗೆ ಶಾಕ್, ಇನ್ಮುಂದೆ ಹೊಸ ಕಾನೂನು
ಇಲ್ಲಿವರೆಗೆ ತಾತ-ಮುತ್ತಾತನ ಕಾಲದ್ದು ಹಾಗೂ ತಂದೆ-ತಾಯಿ ಮಾಡಿಟ್ಟ ಆಸ್ತಿ ತಮ್ಮ ಮಕ್ಕಳಿಗೆ ಸುಲಭವಾಗಿ ಸಿಗುತ್ತಿತ್ತು. ಆಸ್ತಿ ಕಾರಣಕ್ಕೆ ಎಷ್ಟೋ ಸಂಬಂಧಗಳು ಮುರಿದುಬಿದ್ದಿರುವುದೂ ಉಂಟು. ಆಸ್ತಿ ವಿಚಾರವಾಗಿ ಸಂಬಂಧಗಳನ್ನೇ ಕಳಚಿಕೊಂಡವರಿದ್ದಾರೆ. ಆಸ್ತಿಗಾಗಿ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹಾಗೂ ಪೋಷಕರು-ಮಕ್ಕಳ ನಡುವೆ ವೈಷಮ್ಯ ಮೂಡಿ ಅಂತರ ಏರ್ಪಟ್ಟಿದೆ. ಇನ್ನೂ ಕೆಲವು ಮನೆಗಳಲ್ಲಿ ಆಸ್ತಿಯನ್ನು ಸಮಾನವಾಗಿ ಹಂಚಿಕೊಂಡು ನಾನಾಯ್ತು, ನಂದಾಯ್ತು ಎಂದುಕೊಂಡು ಜಾಲಿಯಾಗಿದ್ದಾರೆ. ಆದರೆ ಇನ್ನು ಮುಂದೆ ನೀವು ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ಕೆಲಸ ಮಾಡಲೇಬೇಕು. ಇಲ್ಲದಿದ್ದರೆ ನಿಮ್ಮ ಕೈಗೆ ಆಸ್ತಿ ಸಿಗುವುದೇ ಇಲ್ಲ. ಮೊದಲೆಲ್ಲ ಕಾನೂನುಬದ್ಧವಾಗಿಯೇ ಸಿಗುತ್ತಿದ್ದ ಆಸ್ತಿಯು ಇನ್ನು ಮುಂದೆ ಸುಲಭವಾಗಿ ಸಿಗುವುದಿಲ್ಲ. ಏಕೆಂದರೆ ಇದಕ್ಕೂ ಕರ್ನಾಟಕದಲ್ಲಿ ಹೊಸ ಕಾನೂನು ಬಂದಿದೆ.
ಮೊದಲೆಲ್ಲ ತಂದೆ ತಾಯಿಯ ಆಸ್ತಿ ಮಕ್ಕಳಿಗೆ ಸೇರುತ್ತೆ ಎನ್ನುವ ಕಾನೂನಿತ್ತು. ಕೆಲವರು ಆಸ್ತಿ ಸಿಕ್ಕ ಮೇಲೆ ತಂದೆ-ತಾಯಿಯನ್ನು ನಡುನೀರಿನಲ್ಲಿ ಕೈಬಿಟ್ಟವರೂ ಇದ್ದಾರೆ. ಪೋಷಕರು ಇದ್ದ ಎಲ್ಲವನ್ನೂ ಕಳೆದುಕೊಂಡು ವೃದ್ಧಾಶ್ರಮಗಳಿಗೆ ಸೇರಿರುವ ನಿದರ್ಶನಗಳೂ ಇವೆ. ಇದನ್ನೆಲ್ಲ ಮನಗಂಡಿರುವ ಕರ್ನಾಟಕ ಕರ್ನಾಟಕ ಸರ್ಕಾರವು ಆಸ್ತಿಯಲ್ಲಿ ಪಾಲು ಕೇಳುವ ವಿಚಾರದಲ್ಲಿ ಹೊಸ ನಿಯಮಗಳನ್ನು ರೂಪಿಸಿದೆ. ಸರ್ಕಾರ ಸೂಚಿಸಿರುವಂತೆ ಮಕ್ಕಳು ನಡೆದುಕೊಳ್ಳದಿದ್ದರೆ, ಇನ್ನುಮುಂದೆ ನಿಮಗೆ ಪೋಷಕರ ಆಸ್ತಿ ಸಿಗುವುದೇ ಇಲ್ಲ ಎಂದು ಎಚ್ಚರಿಕೆ ನೀಡಿದೆ. ಇಷ್ಟಕ್ಕೂ ಸರ್ಕಾರ ತಂದಿರುವ ಹೊಸ ಕಾನೂನಿನ ವಿವರ ಇಲ್ಲಿದೆ ನೋಡಿ..

ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ಆರೈಕೆ ಮಾಡುತ್ತಿಲ್ಲ. ಇಂತಹ ಹಲವರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪೋಷಕರು ಒಂದು ವೇಳೆ ಮಕ್ಕಳು ಅಥವಾ ಸಂಬಂಧಿಕರು ತಮ್ಮನ್ನು ಆರೈಕೆ ಮಾಡದಿದ್ದರೆ, ಅವರ ಹೆಸರಿಗೆ ಮಾಡಿರುವ ಆಸ್ತಿ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡುವ ಅಧಿಕಾರ ಹೊಂದಿರುತ್ತಾರೆ. ಅವರಿಗೆ ಇಷ್ಟವಿಲ್ಲದಿದ್ದರೆ ಮಕ್ಕಳಿಗೆ ಆಸ್ತಿ ಕೊಡುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರು ಕೇಳಿದ ಪ್ರಶ್ನೆಗೆ ಸರ್ಕಾರದ ಪರವಾಗಿ ಸಚಿವ ಉತ್ತರ ನೀಡಿದ್ದಾರೆ. ತಂದೆ-ತಾಯಿ ಹಾಗೂ ಮನೆಯ ಹಿರಿಯರನ್ನು ಆರೈಕೆ ಮಾಡದಿದ್ದರೆ, ತನ್ನ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಅವರು ನೀಡಿದ ವಿಲ್-ದಾನಪತ್ರವನ್ನು ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರದ ʼಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ʼರಲ್ಲಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾವು ಈ ಸಂಬಂಧ 2007ರಲ್ಲೇ ʼಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆʼಯನ್ನು ಜಾರಿಗೆ ತಂದಿದೆ. ಆದರೆ ಇದರ ಬಗ್ಗೆ ಜನಕ್ಕೆ ಮಾಹಿತಿಯೇ ಇಲ್ಲ. ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರೀಕರನ್ನು ಆರೈಕೆ ಮಾಡಲೇಬೇಕು. ಅವರಿಗೆ ವಯಸ್ಸಾದಾಗ ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ಕೂಡ ಕೊಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡದಿದ್ದರೆ ಪೋಷಕರು ಈ ಕಾಯ್ದೆಯ ಸೆಕ್ಷನ್ 9ರ ಅಡಿ ದೂರು ದಾಖಲಿಸಬಹುದು ಎಂದು ಉಲ್ಲೇಖಿಸಿದ್ದಾರೆ.

ಪೋಷಕರ ದೂರು ಸಾಬೀತಾದರೆ, ತಂದೆ ತಾಯಿಯಿಂದ ಆಸ್ತಿ ಪಡೆದ ಮೇಲೂ ಅವರ ಆರೈಕೆ ಮಾಡದಿದ್ದರೆ, ಸೆಕ್ಷನ್ 23ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಬಹುದು. ಆಸ್ತಿ ಮತ್ತೆ ಪೋಷಕರ ಹೆಸರಿಗೇ ವಾಪಸ್ ಪಡೆಯುವ ಅವಕಾಶ ಕೂಡ ಕಾನೂನಿನಲ್ಲಿದೆ. ಇದರ ಮೇಲ್ವಿಚಾರಣೆ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಈ ಸಂಬಂಧ ಈಗಾಗಲೇ ಉಪ ವಿಭಾಗಾಧಿಕಾರಿಗಳ ಮುಂದೆ ಸಾವಿರಾರು ಪ್ರಕರಣಗಳು ಬಂದಿವೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಅಪೀಲು ಹೋಗಲು ಕೂಡ ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ವಿವರಿಸಿದ್ದಾರೆ.
ಒಂದೇ ಆಸ್ತಿಯನ್ನು ಹಲವರಿಗೆ ಮಾರುವವರ ಮೇಲೆ ಕ್ರಮ
ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಒಂದೇ ಸೈಟನ್ನು ಹಲವರಿಗೆ ಮಾರುವ ವಂಚನೆಗೆ ಸಂಪೂರ್ಣ ಬ್ರೇಕ್ ಹಾಕಲೇಬೇಕು ಎಂದು ಖಡಕ್ ಸೂಚನೆ ನೀಡಿದ್ದರು. ಬಿಬಿಎಂಪಿಯಲ್ಲಿ ಸುಮಾರು 15 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿರುವುದಿಲ್ಲ. ಇದರಿಂದ ತೆರಿಗೆಯೂ ಕಟ್ಟದ ಕಾರಣ ಸಾವಿರಾರು ಕೋಟಿ ರೂ. ತೆರಿಗೆ ಪ್ರತೀ ವರ್ಷ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ. ಖಾತೆಯಿಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು ಎಂದಿದ್ದರು.
ಸ್ಥಳೀಯ ಸಂಸ್ಥೆಗಳು ಖಾತಾ ನೀಡಿರುವ ಆಸ್ತಿಗಳನ್ನು ಮಾತ್ರ ನೋಂದಣಿ ಇಲಾಖೆಯಡಿ ನೋಂದಣಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ನೀಡಿರುವ ಖಾತಾ ದಾಖಲೆಗಳ ಡಾಟಾಬೇಸ್ ಕಂಪ್ಯೂಟರ್‌ನಲ್ಲಿ ಇರಬೇಕು. ಈ ಡಾಟಾ ಬೇಸ್ ಆಧರಿಸಿ ನೋಂದಣಿ ಪ್ರಕ್ರಿಯೆ ಮಾಡಬೇಕು. ಬಿಬಿಎಂಪಿಯಲ್ಲಿ ವ್ಯಾಪ್ತಿಯಲ್ಲಿ ಖಾತಾ ನೀಡಿರುವುದನ್ನು ಡಾಟಾ ಬೇಸ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಇದರಿಂದ ಖಾತೆಯಾದ ಆಸ್ತಿಗಳನ್ನು ಮಾತ್ರ ನೋಂದಣಿ ಮಾಡಬಹುದು. ಕಾಗದ ದಾಖಲೆಗಳ ಆಧಾರದಲ್ಲಿ ಯಾವುದೇ ಕಾರಣಕ್ಕೂ ನೋಂದಣಿಗೆ ಪರಿಗಣಿಸಬಾರದು. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳ ನಕಲಿ ಖಾತೆ ಸೃಜಿಸಿ, ವಂಚನೆಯಿಂದ ಹೆಚ್ಚು ದಸ್ತಾವೇಜುಗಳ ನೋಂದಣಿ ಮಾಡುವ ಪ್ರಕ್ರಿಯೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದ್ದರು.

ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಇರುವ ಲೇಔಟ್‌ಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.ನಿವೇಶನಗಳಲ್ಲಿರುವ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳಾಗಿ ಪರಿಗಣಿಸುವ ಕುರಿತು ಕ್ರಮ ಪರಿಶೀಲಿಸಬೇಕು. ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು, ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಸರಳೀಕರಣಗೊಳಿಸಲು ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದಿದ್ದರು.












Click it and Unblock the Notifications