ಬಿಜೆಪಿ ಚುನಾವಣಾ ಪ್ರಣಾಳಿಕೆ ರಚನೆಗೆ ನೀವು ಸಲಹೆ ಕೊಡಿ
ಬೆಂಗಳೂರು, ಅಕ್ಟೋಬರ್ 04 : ಕರ್ನಾಟಕ ಬಿಜೆಪಿ ಮುಂದಿನ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ತಯಾರಿಸಲು ಸಮಿತಿಯನ್ನು ರಚನೆ ಮಾಡಿದೆ. ಮಾಜಿ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ 17 ಸದಸ್ಯರ ಸಮಿತಿ ರಚಿಸಲಾಗಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಪ್ರಣಾಳಿಕೆಗೆ ಜನರಿಂದಲೂ ಸಹ ಸಲಹೆಗಳನ್ನು ಆಹ್ವಾನಿಸಲಾಗಿದೆ.
'ಈ ಪ್ರಣಾಳಿಕೆಗೆ ನೀವೆಲ್ಲಾ ನಿಮ್ಮ ಕೊಡುಗೆಯನ್ನು ಸಲಹೆಗಳ ಮೂಲಕ ನೀಡಬೇಕೆನ್ನುವುದು ನಮ್ಮ ಮನವಿ' ಎಂದು ಸುರೇಶ್ ಕುಮಾರ್ ಅವರು ಫೇಸ್ ಬುಕ್‌ನಲ್ಲಿ ಬರೆದಿದ್ದಾರೆ. ಸುರೇಶ್ ಕುಮಾರ್ ಅವರು ಹಾಕಿರುವ ಪೋಸ್ಟ್ ನ ವಿವರ ಇಲ್ಲಿದೆ....

ಚುನಾವಣೆಗೆ ಸುಮಾರು 6-7 ತಿಂಗಳಿಗೆ ಮುನ್ನವೇ ಈ ಪ್ರಣಾಳಿಕೆ ಸಮಿತಿ ರಚಿಸಿರುವುದು ಅತ್ಯಂತ ಸ್ವಾಗತಾರ್ಹ. ನಮ್ಮ ಪಕ್ಷದ ಗುರಿಯಾದ "ಮಿಷನ್ 150" ಸಾಧಿಸಿ, "ನವಕರ್ನಾಟಕ" ನಿರ್ಮಿಸುವ ದಿಕ್ಕಿನಲ್ಲಿ ಅತ್ಯಂತ ಪೂರಕ ಕ್ರಮಗಳಲ್ಲಿ ಇದೂ ಒಂದು.
ನಮ್ಮ ಸಮಿತಿಯಲ್ಲಿ ಅತ್ಯಂತ ಅನುಭವಿಗಳು, ಪರಿಣಿತರಿದ್ದಾರೆ. ಅತ್ಯಂತ ಹಿರಿಯರಾದ ಮತ್ತು ದೀರ್ಘ ಕಾಲದ ಆಡಳಿತದ ಅನುಭವವುಳ್ಳ ಶ್ರೀ ಶ್ರೀನಿವಾಸ ಪ್ರಸಾದ್, ಜಲ ಸಂಪನ್ಮೂಲ ಮತ್ತು ಅನೇಕ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡಿ ಅಧಿಕೃತವಾಗಿ ಮಾತನಾಡಬಲ್ಲ ಬಸವರಾಜ್ ಬೊಮ್ಮಾಯಿ, ಸಹಕಾರಿ ಕ್ಷೇತ್ರವನ್ನು ಸಂಪೂರ್ಣವಾಗಿ ಬಲ್ಲ ಹಾಗೂ ಸಾಮಾನ್ಯ ವ್ಯಕ್ತಿಯ ನಾಡಿ ಮಿಡಿತವನ್ನು ಬಲ್ಲ ಲಕ್ಷ್ಮಣ ಸವದಿ ಅವರು ಇದ್ದಾರೆ.
ಹೊಸ-ಹೊಸ ಅವಿಷ್ಕಾರಗಳನ್ನು ಮಾಡುತ್ತಾ ಬಂದಿರುವ ಶಾಸಕ ಡಾ. ಅಶ್ವತ್ಥನಾರಾಯಣ, ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರಾದ ಡಾ.ಪ್ರಭಾಕರ ಕೋರೆ, ಕಾರ್ಮಿಕ ಕ್ಷೇತ್ರದ ಮುಂದಾಳು ಹಾಗೂ ನೊಂದ ಜನರ ಬವಣೆ ಅರಿತಿರುವ ಶಾಣಪ್ಪ, ಸಚಿವರಾಗಿ-ಸಂಸದರಾಗಿ ಕರಾವಳಿಯ ವಸ್ತುಸ್ಥಿತಿಯ ಅನುಭವವುಳ್ಳ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಮತ್ತು ನಮ್ಮ ಸಂಘಟನೆಯಲ್ಲಿ ಹಲವಾರು ದಶಕಗಳಿಂದ ಕಾರ್ಯ ನಿರ್ವಹಿಸಿರುವ ಡಾ. ವಾಮನಾಚಾರ್ಯ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಯುವ ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಂಸದ ಬಸವರಾಜು, ಕರ್ನಾಟಕದ ದಕ್ಷ ಅಧಿಕಾರಿಗಳ ಪಟ್ಟಿಯಲ್ಲಿ ಮೊದಲು ಕೇಳಿಬರುವ "No nonsense" ಹಾಗೂ ಅಂತಃಕರಣದಿಂದ ಕೂಡಿದ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ (ಅವರ ಕುರಿತು ನಾನೊಂದು ಅಂಕಣ ಬರೆದಿದ್ದೆ), ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿ-ವಚನ ಸಾಹಿತ್ಯದ ಪ್ರಭಾವಿ ವಾಗ್ಮಿಯಾದ ನಿವೃತ್ತ ಐಎಎಸ್ ಅಧಿಕಾರಿ ಡಾ. ಸೋಮಶೇಖರ್, ಬೆಂಗಳೂರಿನ ನಗರಪಾಲಿಕೆ ಸದಸ್ಯರಾಗಿ-ಐದು ಬಾರಿ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ, ಮಾಜಿ ಸಚಿವರಾಗಿ ಅಪಾರ ಅನುಭವದ ಹೆಗ್ಗಳಿಕೆಯ ರಾಮಚಂದ್ರಗೌಡ, ಹಿಂದೊಮ್ಮೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ ಅನುಭವವುಳ್ಳ ಜಿ.ಎಸ್ ಹೆಗ್ಡೆ, ರವೀಂದ್ರ ಪೈ, ನಮ್ಮ ಪಕ್ಷದ ಕಾರ್ಯಾಲಯ ಕಾರ್ಯದರ್ಶಿ ಗಣೇಶ್ ಯಾಜಿ.....ಹೀಗೆ ಅನುಭವ-ಪರಿಣಿತಿಯ ಗಣಿಯಾಗಿದೆ ಈ ಸಮಿತಿ.
ಜೊತೆಗೆ ನಾನೂ ಇದ್ದೇನೆ.
ಸಾಮಾನ್ಯವಾಗಿ ಚುನಾವಣೆಯ ಸಮಯದಲ್ಲಿ ಅವಸರದಿಂದ ಕೂಡಿದ ಕಾರ್ಯ ಮಾಡಿ ಚುನಾವಣಾ ಪ್ರಣಾಳಿಕೆ ತಯಾರಿಸಿ ಮಾಧ್ಯಮಗಳ ಮೂಲಕ ಪ್ರಣಾಳಿಕೆ ಬಿಡುಗಡೆ ಮಾಡುವ ಯಾಂತ್ರಿಕ ಪದ್ಧತಿ ನಡೆದುಕೊಂಡು ಬಂದಿರುವುದಕ್ಕೆ ಇದು ಸಂಪೂರ್ಣ ಭಿನ್ನ.
ನಮ್ಮ ಪ್ರಣಾಳಿಕೆ "ಸರ್ವ ಸ್ಪರ್ಷಿ-ಸರ್ವ ವ್ಯಾಪಿ" ಆಗಿ ನಾಡಿನ ಎಲ್ಲಾ ಕ್ಷೇತ್ರದ, ವರ್ಗಗಳ ಆಶೋತ್ತರಗಳನ್ನು ಪ್ರತಿಬಿಂಬಿಸಬೇಕೆನ್ನುವುದು ನಮ್ಮ ಹಂಬಲ.
ಇದು "ನವ ಕರ್ನಾಟಕ" ನಿರ್ಮಾಣದ ದಿಕ್ಕಿನಲ್ಲಿ ನಾಡಿನ ಜನತೆಯ ಪ್ರಣಾಳಿಕೆ (ಜನರಿಂದ ಜನರಿಗಾಗಿ ಜನರ ಮೂಲಕ) ಆಗಬೇಕೆನ್ನುವುದು ನಮ್ಮ ಹೆಬ್ಬಯಕೆ.
It should be real Democratic Script, reflecting the aspirations of all the sections of our State especially the Common Man.
ಈ ಪ್ರಣಾಳಿಕೆಗೆ ನೀವೆಲ್ಲಾ ನಿಮ್ಮ ಕೊಡುಗೆಯನ್ನು ಸಲಹೆಗಳ ಮೂಲಕ ನೀಡಬೇಕೆನ್ನುವುದು ನಮ್ಮ ಮನವಿ.
ನಿಮ್ಮ ಸಲಹೆಗಳನ್ನು ನನ್ನ [email protected] ಗೆ "Elections 2018" ಎಂದು ಬರೆದು ಕಳಿಸಿ.
ನಿಮ್ಮ ಎಲ್ಲಾ ಮುಕ್ತ, ಧನಾತ್ಮಕ, ದಿಶಾಪೂರ್ಣ ಸಲಹೆಗಳಿಗಾಗಿ ಎದುರು ನೋಡುತ್ತಿದ್ದೇವೆ.












Click it and Unblock the Notifications