Good News: 200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್: ಎಂ.ಬಿ ಪಾಟೀಲ
ಬೆಂಗಳೂರು, ನವೆಂಬರ್ 18: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹೂಡಿಕೆಗೆ, ಹೊಸ ಹೊಸ ಯೋಜನೆಗಳಿಗೆ ವಿಫುಲ ಅವಕಾಶಗಳು ಇವೆ. ರಾಜ್ಯ ಸರ್ಕಾರ ಆಧುನಿಕ ಬಗೆಯ ಕೈಗಾರಿಕೋದ್ಯಮಗಳ ಮಹತ್ವ ಅರಿತುಕೊಂಡಿದೆ. ಇದೀಗ ಬರೋಬ್ಬರಿ 200 ಎಕರೆ ಜಾಗದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭವಾದ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೆಮಿಕಂಡಕ್ಟರ್ ಪಾರ್ಕ್ ಅಭಿವೃದ್ಧಿಪಡಿಸಿ, ಈ ತರಹದ ಕಂಪನಿಗಳಿಗೆ ಬೇಕಾಗುವ ಸಕಲ ಸೌಲಭ್ಯಗಳನ್ನು ಒದಗಿಸಲಾಗುವುದು. ಇದು ದೇಶ ಮತ್ತು ರಾಜ್ಯ ಮಟ್ಟದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ನಾವೀನ್ಯತಾ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದು ಅವರು ವಿವರಿಸಿದರು.

ಕೈಗಾರಿಕಾ ಇಲಾಖೆಯು ಮುಂಚೂಣಿ ತಂತ್ರಜ್ಞಾನ ಕಂಪನಿಗಳಿಂದ ಮತ್ತು ಪ್ರಮುಖ ಆ್ಯಂಕರ್ ಹೂಡಿಕೆದಾರರಿಂದ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಆದ್ಯತೆ ನೀಡಲಾಗಿದೆ. ಇಂತಹ ಹೂಡಿಕೆಯು ಕೈಗಾರಿಕೋದ್ಯಮದ ವಿವಿಧ ವಲಯಗಳಿಗೆ ಹರಿದು ಬರಬೇಕು ಎನ್ನುವುದು ಸರ್ಕಾರ ಗುರಿ. ಇಂತಹ ವಲಯಗಳಲ್ಲಿ ಡ್ರೋನ್, ಸೆಮಿಕಂಡಕ್ಟರ್ ಸಾಧನಗಳು ಮತ್ತು ಸೌರ ವಿದ್ಯುತ್ ಎಲ್ಲವನ್ನೂ ಪರಿಗಣಿಸಲಾಗಿದೆ. ಇದರ ಜೊತೆಯಲ್ಲಿ ಇಂಡಸ್ಟ್ರಿ 5.0 ಮತ್ತು ಇನ್ನಿತರ ಅತ್ಯಾಧುನಿಕ ಕೈಗಾರಿಕಾ ವಿಧಾನಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿವೆ ಸಾವಿರಾರು ಉದ್ಯಮಗಳು
ಕರ್ನಾಟಕದಲ್ಲಿ ಕೈಗಾರಿಕೆಗಳು ಬೆಳೆಯಬೇಕು. ಬೇರೆ ಬೇರೆ ದೇಶಗಳು ಹೂಡಿಕೆದಾರರು ರಾಜ್ಯಕ್ಕೆ ಬರಬೇಕೆಂದರೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಪರಿಸರ ಚೆನ್ನಾಗಿರಬೇಕು. ರಾಜ್ಯದಲ್ಲಿ 800ಕ್ಕೂ ಹೆಚ್ಚು ಆರ್ & ಡಿ ಕೇಂದ್ರಗಳು, 100ಕ್ಕೂ ಅಧಿಕ ಚಿಪ್ ವಿನ್ಯಾಸ ಕಂಪನಿಗಳು ಮತ್ತು 18,300 ನವೋದ್ಯಮಗಳು ನೆಲೆಸಿವೆ. ಇಲ್ಲಿರುವ ಆರ್ ಮತ್ತು ಡಿ ಕೇಂದ್ರಗಳು ಕೃತಕ ಬುದ್ಧಿಮತ್ತೆ, ಡೀಪ್ ಟೆಕ್, ಕ್ವಾಂಟಂ ಕಂಪ್ಯೂಟಿಂಗ್, ಸ್ಪೇಸ್-ಟೆಕ್ ಮುಂತಾದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ. ಉದ್ದೇಶಿತ ಕ್ವಿನ್ ಸಿಟಿಗೆ ಕೊಟ್ಟಿರುವ 5,000 ಎಕರೆ ಜಾಗದಲ್ಲಿ ಆರ್ ಮತ್ತು ಡಿ ಕೇಂದ್ರಗಳಿಗಾಗಿ ಅಗತ್ಯದ ಜಾಗ ಮೀಸಡಲಾಗುವುದು. ಅದಕ್ಕೆ ಪೂರಕವಾಗಿ ಕಾರ್ಯಪರಿಸರ ಅಭಿವೃದ್ಧಿ ಮಾಡಲಿದ್ದೇವೆ ಎಂದು ಅವರು ಹೇಳಿದರು.
ತಂತ್ರಜ್ಞಾನ ಕಂಪನಿಗಳಿಗೆ 600 ಕೋಟಿ ರೂ. & ಸೌಕರ್ಯ
ರಾಜ್ಯದಲ್ಲಿ ಹಲವು ತಂತ್ರಜ್ಞಾನ ಕಂಪನಿಗಳು ಎಐ, ಎಂಎಲ್ (ಮಷೀನ್ ಲರ್ನಿಂಗ್), ಕ್ವಾಂಟಂ, ರೋಬೋಟಿಕ್ಸ್, ಆಧುನಿಕ ತಯಾರಿಕೆ ಮತ್ತು ಸುಸ್ಥಿರ ನಾವೀನ್ಯತೆಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿವೆ. ಇಂತಹ ಕಂಪನಿಗಳಿಗೆ ಬೆಂಬಲ ಕೊಡಲೆಂದೇ ರಾಜ್ಯು ಸರ್ಕಾರ 600 ಕೋಟಿ ರೂ. ಒದಗಿಸಿದೆ. ರಾಜ್ಯವು ಡೀಪ್ ಸೈನ್ಸ್ ಮತ್ತು ಮುಂಚೂಣಿ ತಂತ್ರಜ್ಞಾನ ಎರಡರಲ್ಲೂ ಅಗ್ರಸ್ಥಾನದಲ್ಲಿ ಇರಬೇಕೆನ್ನುವುದು ನಮ್ಮ ಸರ್ಕಾರದ ಸಂಕಲ್ಪ ಆಗಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಧಾರವಾಡದಲ್ಲಿ ಎಐ ಮತ್ತು ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಕೃಷ್ಟತಾ ಕೇಂದ್ರ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಜೈವಿಕ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ತರಹದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೈಗಾರಿಕೆಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿವೆ ಎಂದು ಸಚಿವರು ಮಾಹಿತಿ ನೀಡಿದರು.
ರ್ನಾಟಕ ರಾಜ್ಯವು ಇ.ಎಸ್.ಡಿ.ಎಂ., ಸಂಚಾರ ವ್ಯವಸ್ಥೆ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮ ಪರಿಪೋಷಣೆಗೆ ಸಂಬಂಧಿಸಿದಂತೆ ಪುರೋಗಾಮಿ ನೀತಿಗಳನ್ನು ಹೊಂದಿದೆ. ಅಷ್ಟು ಮಾತ್ರವಲ್ಲದೇ ಅಮೆರಿಕ, ಜರ್ಮನಿ, ಸಿಂಗಪುರ ಮತ್ತು ಜಪಾನ್ ನಂತಹ ರಾಷ್ಟ್ರಗಳೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.












Click it and Unblock the Notifications