ಬೀದರ್ ಶಾಲೆಯ ಶಿಕ್ಷಕರ ವಿರುದ್ಧದ ದೇಶದ್ರೋಹ ಪ್ರಕರಣ ರದ್ದು
ಬೆಂಗಳೂರು, ಜೂನ್ 15: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ಪ್ರಜೆಗಳ ರಾಷ್ಟ್ರೀಯ ನೋಂದಣಿ (ಎನ್ಆರ್‌ಸಿ) ಕುರಿತು ಬೀದರ್ ಶಾಹೀನ್ ಶಾಲೆಯ ಮಕ್ಕಳು ನಾಟಕ ಪ್ರದರ್ಶಿಸಿದ್ದ ಆರೋಪ ಸಂಬಂಧದ ಶಾಲೆಯ ಆಡಳಿತ ಮಂಡಳಿಯ ನಾಲ್ವರ ವಿರುದ್ಧ ದಾಖಲಿಸಿದ್ದ ದೇಶದ್ರೋಹ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದು ಮಾಡಿದೆ.
ಇದರಿಂದಾಗಿ ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಪ್ರಕರಣಕ್ಕೆ ತೆರೆ ಬಿದ್ಧಂತಾಗಿದೆ.
ಮೇಲ್ನೋಟಕ್ಕೆ ಆರೋಪ ಸಾಬೀತುಪಡಿಸುವ ಅಂಶಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೋರ್ಟ್ ಆದೇಶದಿಂದಾಗಿ ಆರೋಪ ಎದುರಿಸುತ್ತಿದ್ದ ಶಾಹೀನ್ ಶಾಲೆಯ ಮುಖ್ಯಸ್ಥರಾದ ಅಲ್ಲಾವುದ್ದೀನ್, ಅಬ್ದುಲ್ ಖಾಲೀಕ್, ಮೊಹಮ್ಮದ್ ಬಿಲಾಲ್ ಇನಾಂದರ್ ಮತ್ತು ಮೊಹಮ್ಮದ್ ಮೆಹ್ತಾಬ್ ಆರೋಪ ಮುಕ್ತರಾಗಿದ್ದಾರೆ.

ನಾಲ್ವರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಆದೇಶದ ವಿವರಗಳನ್ನೂ ಇನ್ನೂ ಬಿಡುಗಡೆಯಾಗಬೇಕಿದೆ.
ಪ್ರಕರಣದ ಹಿನ್ನೆಲೆ: ಶಾಹೀನ್ ಶಾಲೆಯಲ್ಲಿ ಸಿಎಎ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಗೆ (ಎನ್ಆರ್‌ಸಿ) ಸಂಬಂಧಿಸಿದಂತೆ 4, 5 ಮತ್ತು ಆರನೇ ತರಗತಿ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾದ ನಾಟಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಸಂಭಾಷಣೆ ಇತ್ತು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯ ನೀಲೇಶ್ ರಕ್ಷ್ಯಾಲ್ ದೂರು ದಾಖಲಿಸಿದ್ದರು.
ಸಂಸತ್‌ನಲ್ಲಿ ಒಪ್ಪಿಗೆ ಪಡೆದ ಸಿಎಎ ವಿರುದ್ಧ ಮಕ್ಕಳಲ್ಲಿ ತಪ್ಪು ಮಾಹಿತಿ ಬಿತ್ತಲು ಶಾಲಾ ಆಡಳಿತ ಪ್ರಯತ್ನಿಸಿದ್ದು, ಈ ಮೂಲಕ ಕೋಮು ಪ್ರಚೋದನೆಗೆ ನಾಂದಿ ಹಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆಯ ಹಂತದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಮತ್ತು ವಿದ್ಯಾರ್ಥಿಯೊಬ್ಬರ ತಾಯಿ ತಾಯಿ ನಜಬುನ್ನೀಸಾ ಅವರನ್ನು ಬಂಧಿಸಲಾಗಿತ್ತು. ಆನಂತರ ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಪ್ರಧಾನಿಗೆ ಅಪಮಾನ: ಶಾಹೀನ್ ಶಾಲೆಯ 4, 5 ಮತ್ತು 6ನೇ ತರಗತಿಯ ಮಕ್ಕಳು 2020ರಲ್ಲಿ ಸಿಎಎ ಮತ್ತು ಎನ್ಆರ್‌ಸಿ ಕುರಿತು ನಾಟಕ ಪ್ರದರ್ಶನ ಮಾಡಿದ್ದರು. ಇದನ್ನು ಆಧರಿಸಿ ಶಾಲೆಯಲ್ಲಿ ದೇಶವಿರೋಧಿ ಕೃತ್ಯದ ಆರೋಪದ ಮೇಲೆ ಶಾಲಾ ಆಡಳಿತದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು.
ನಾಟಕದ ಭಾಗವಾಗಿ ಸಂಭಾಷಣೆ ಮಾಡಿದ್ದ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಮತ್ತು ವಿದ್ಯಾರ್ಥಿನಿಯೊಬ್ಬರ ತಾಯಿ ನಜಬುನ್ನೀಸಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಪಮಾನಿಸಿದ್ದಾರೆ ಎಂದು ಬಂಧಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯವು ಅವರಿಗೆ 2020ರ ಫೆಬ್ರವರಿ 14ರಂದು ಜಾಮೀನು ಮಂಜೂರು ಮಾಡಿತ್ತು.
ಸಾಮಾಜಿಕ ಕಾರ್ಯಕರ್ತ ಎನ್ನಲಾದ ನೀಲೇಶ್ ರಕ್ಷ್ಯಾಲ್ ಎಂಬಾತ ನೀಡಿದ್ದ ದೂರಿನ ಮೇರೆಗೆ ಬೀದರ್ ನ್ಯೂ ಟೌನ್ ಠಾಣೆಯಲ್ಲಿ ಶಾಹೀನ್ ಶಾಲೆಯ ಆಡಳಿತ ಮಂಡಳಿಯ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ಗಳಾದ 504, 505 (2), 124ಎ, 153ಎ ಜೊತೆಗೆ ಸೆಕ್ಷನ್ 34ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಈಗ ನ್ಯಾಯಾಲಯ ವಜಾ ಮಾಡಿದೆ.












Click it and Unblock the Notifications