ರೆಸಾರ್ಟ್, ಹೋಂ ಸ್ಟೇಗಳಲ್ಲಿ ಪ್ರವಾಸಿಗರಿಗೆ ಭದ್ರತೆ, ಬಂತು ಕಠಿಣ ನಿಯಮಗಳು
ಬೆಂಗಳೂರು, ಮಾರ್ಚ್ 11: ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಾಣಾಪುರದ ಬಳಿ ಇತ್ತೀಚೆಗೆ ನಡೆದಿದ್ದ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಿದೆ. ರೆಸಾರ್ಟ್/ ಹೋಂ ಸ್ಟೇಗಳಲ್ಲಿನ ಭದ್ರತೆ ಕುರಿತು ಖಡಕ್ ಸೂಚನೆಗಳನ್ನು ನೀಡಲಾಗಿದೆ. ಅತ್ಯಾಚಾರ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಗಂಗಾವತಿಯ ಶರಣಬಸವರಾಜ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರೆಸಾರ್ಟ್/ ಹೋಂ ಸ್ಟೇಗಳಲ್ಲಿನ ಭದ್ರತೆ ಬಗ್ಗೆ ಎಸ್. ಆರ್. ಉಮಾಶಂಕರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಲ್ಲಾ ಜಿಲ್ಲೆಗಳ ಪೊಲೀಸ್ ಅಧೀಕ್ಷಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

ಈ ಸುತ್ತೋಲೆ ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ನಡೆಸಲಾಗುತ್ತಿರುವ ರೆಸಾರ್ಟ್/ ಹೋಮ್‌ಸ್ಟೇಗಳಲ್ಲಿ ಬರುವ ಪ್ರವಾಸಿಗರ ಭದ್ರತೆ ಸುರಕ್ಷತೆಯನ್ನು ನಿರ್ವಹಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದ್ದು, ಡಿಜಿ & ಐಜಿಪಿ ಪತ್ರ ಸಂಖ್ಯೆ 8/3/2025 ಉಲ್ಲೇಖಿಸಲಾಗಿದೆ.
ದಿನಾಂಕ 6.03.2025ರಂದು ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದಲ್ಲಿ ಹಾರ್ಟ್ ಲ್ಯಾಂಡ್ ಹೋಂ ಸ್ಟೇನಲ್ಲಿ ವಾಸವಿದ್ದ ಎರಡು ವಿದೇಶಿಯರು, ಎರಡು ಭಾರತೀಯರನ್ನು ಹೋಮ್ ಸ್ಟೇ ಮಾಲೀಕರು ರಾತ್ರಿ ಭೋಜನದ ನಂತರ ನಿರ್ಜನ ಪ್ರದೇಶದಲ್ಲಿ ನಕ್ಷತ್ರ ವೀಕ್ಷಣೆಗೆಂದು ಕರೆದುಕೊಂಡು ಹೋದ ಸಂದರ್ಭದಲ್ಲಿ ಮೂರು ದುಷ್ಕರ್ಮಿಗಳು ಪುರುಷ ಪ್ರವಾಸಿಗರೊಂದಿಗೆ ವಾಗ್ವಾದ ಮಾಡಿದ್ದಾರೆ.
ಅವರುಗಳನ್ನು ಸಮೀಪದಲ್ಲಿಯೇ ತುಂಗಾಭದ್ರ ಎಡದಂಡೆ ಕಾಲುವೆಗೆ ನೂಕಿರುತ್ತಾರೆಂದು ವರದಿ ಮಾಡಿರುತ್ತಾರೆ. ಮುಂದುವರೆದು, ಹೋಮ್ ಸ್ಟೇ ಮಾಲೀಕಳು ಹಾಗೂ ಮತ್ತೊಬ್ಬ ಇಸ್ರೇಲ್ ಪ್ರಜೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿರುತ್ತಾರೆ. ಕಾಲುವೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ಒರಿಸ್ಸಾ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ.
ಈ ಘಟನೆಯು ಅತ್ಯಂತ ದು:ಖಕರ ಹಾಗೂ ವಿಷಾದನೀಯವಾದುದಾಗಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಈ ರೀತಿಯ ದುರ್ಘಟನೆಗಳು ಜರುಗದ ರೀತಿಯಲ್ಲಿ ಕೆಳಕಂಡ ಸೂಚನೆಗಳನ್ನು ಹಾಗೂ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದೆ.
ಸೂಚನೆ & ನಿರ್ದೇಶನಗಳು
* ರಾಜ್ಯದ ಪ್ರವಾಸಿ ತಾಣಗಳಲ್ಲಿನ ಹೋಮ್ ಸ್ಟೇಗಳು ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳತಕ್ಕದ್ದು.
* ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ, ಅನುಮತಿ ಪಡೆಯತಕ್ಕದ್ದು.
* ಪೊಲೀಸರಿಂದ/ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿಯನ್ನು ಪಡೆಯದೇ ನಿರ್ಜನ ಪ್ರದೇಶ/ ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಆಯಾ ಹೋಮ್ ಸ್ಟೇ ಮಾಲೀಕರೆ ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ.
ಈ ಸಂಬಂಧ ಅಗತ್ಯ ಸೂಚನೆಗಳನ್ನು ನಿಮ್ಮ ಜಿಲ್ಲೆಯ ಪ್ರತಿ ರೆಸಾರ್ಟ್ ಹಾಗೂ ಹೋಮ್ ಸ್ಟೇಗಳಿಗೆ ಖುದ್ದಾಗಿ ಜಾರಿಗೊಳಿಸಿ ಅವರಿಂದ ಸೂಕ್ತ ಮುಚ್ಚಳಿಕೆ ಪಡೆದುಕೊಳ್ಳುವುದು. ಪ್ರತಿ ರೆಸಾರ್ಟ್/ ಹೋಮ್ ಸ್ಟೇಗಳಿಂದ ಅವರ ಸ್ಥಳ ವೀಕ್ಷಣಾ ಕಾರ್ಯಕ್ರಮಗಳ ಪಟ್ಟಿಯನ್ನು ಪಡೆದು ಆ ಕಾರ್ಯಕ್ರಮಗಳಲ್ಲಿ ಯಾವುದೇ ಅಪಾಯವಿಲ್ಲದಿರುವುದನ್ನು ಖಾತರಿಪಡಿಸಿಕೊಳ್ಳಲು ತಿಳಿಸಿದೆ.
ಈ ಪ್ರಕ್ರಿಯೆಯನ್ನು ಒಂದು ವಾರದಲ್ಲಿ ಕೈಗೊಂಡು ದಿನಾಂಕ 18.03.2025ರೊಳಗೆ ತಪ್ಪದೇ ವರದಿಯನ್ನು ಸಲ್ಲಿಸಲು ಸೂಚಿಸಿದೆ ಎಂದು ಸುತ್ತೋಲೆ ಹೇಳಿದೆ.












Click it and Unblock the Notifications