ಜೆಡಿಎಸ್, ಕಾಂಗ್ರೆಸ್ ಮೈತ್ರಿಗೆ ಸೀಟು ಹಂಚಿಕೆಯ ಸಂಕಟ!
ಬೆಂಗಳೂರು, ಜನವರಿ 28 : ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ, ಕ್ಷೇತ್ರಗಳ ಹಂಚಿಕೆ ಎರಡೂ ಪಕ್ಷಗಳ ನಡುವೆ ಹಗ್ಗಜಗ್ಗಾಟಕ್ಕೆ ದಾರಿ ಮಾಡಿಕೊಟ್ಟಿದೆ.
ಜೆಡಿಎಸ್‌ಗೆ 12 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಬೇಡಿಕೆ. 8 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಸಾಕು ಎಂಬುದು ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿರುವ ಚರ್ಚೆ.
9 ಹಾಲಿ ಸಂಸದರು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬೇಡ ಎಂಬುದು ಕಾಂಗ್ರೆಸ್ ನಾಯಕರ ವಾದ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂದೆಯೂ ನಾಯಕರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷ ಬೇಡಿಕೆ ಇಟ್ಟಿರುವ ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳು ಇವೆ. ಆದ್ದರಿಂದ, ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಎರಡೂ ಪಕ್ಷಗಳು ಘೋಷಿಸಿದರೂ ಸೀಟು ಹಂಚಿಕೆ ಮಾತ್ರ ಇನ್ನು ಅಂತಿಮವಾಗಿಲ್ಲ.....

ಕಷ್ಟ ಕಾಲದಲ್ಲಿ ಗೆದ್ದ ಸಂಸದರು
'ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ವಿರುದ್ಧ ಪಕ್ಷದಿಂದ 9 ಮಂದಿ ಗೆದ್ದಿದ್ದೇವೆ. ನಾವೆಲ್ಲರೂ ಕಷ್ಟಕಾಲದಲ್ಲಿ ಗೆದ್ದವರು. ಹೀಗಾಗಿ ಈ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂಬುದು ನಮ್ಮ ಅಭಿಪ್ರಾಯ' ಎಂದು ಚಿಕ್ಕಬಳ್ಳಾಪುರ ಸಂಸದ ಮತ್ತು ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸೋಣ
ಕಾಂಗ್ರೆಸ್ ಪಕ್ಷ ಗೆದ್ದಿರುವ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕೋಲಾರ ಕ್ಷೇತ್ರದಲ್ಲಿ ಹೊಸ ನಾಯಕರಿಗೆ ಅವಕಾಶ ನೀಡೋಣ, ಈ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವುದು ಬೇಡ ಎಂದು ಕಾಂಗ್ರೆಸ್ ನಾಯಕರು ಬೇಡಿಕೆ ಇಟ್ಟಿದ್ದಾರೆ. ಜೆಡಿಎಸ್ ಬೇಡಿಕೆ ಇಟ್ಟಿರುವ 12 ಕ್ಷೇತ್ರಗಳಲ್ಲಿ ಈ ನಾಲ್ಕು ಕ್ಷೇತ್ರಗಳು ಸೇರಿವೆ ಎಂಬುದು ವಿಶೇಷ.

12 ಬೇಡ 8 ಕ್ಷೇತ್ರ ಹಂಚಿಕೆ
ಜೆಡಿಎಸ್ 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಆದರೆ, 8 ಸ್ಥಾನಗಳನ್ನು ಪಕ್ಷಕ್ಕೆ ಬಿಟ್ಟುಕೊಡೋಣ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ. 'ಗೆಲ್ಲುವ ಹಾಲಿ ಸಂಸದರಿಗೆ ಮಾತ್ರ ಟಿಕೆಟ್ ನೀಡುಲಾಗುತ್ತದೆ' ಎಂದು ಕೆ.ಸಿ.ವೇಣುಗೋಪಾಲ್ ಹೇಳಿರುವುದು ಕೆಲವು ಕಾಂಗ್ರೆಸ್ ನಾಯಕರ ಲೆಕ್ಕಾಚಾರವನ್ನು ಬದಲಾವಣೆ ಮಾಡಿದೆ.

ಶೀಘ್ರದಲ್ಲೇ ಸಭೆ ನಡೆಸುವೆ
ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಜೊತೆ ಚರ್ಚೆ ನಡೆಸಿ ಸೀಟು ಹಂಚಿಕೆ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಹೇಳಿದ್ದಾರೆ.

ಪ್ರಾಥಮಿಕ ಮಾತುಕತೆ ಮಾಡಿದ್ದೇವೆ
ಲೋಕಸಭಾ ಸೀಟು ಹಂಚಿಯೆ ಸಂಬಂಧ ಮಾತನಾಡಿರುವ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಅವರು, 'ಸ್ಥಾನಗಳ ಬೇಡಿಕೆ ಪ್ರಶ್ನೆ ಇಲ್ಲ. ಬಿಜೆಪಿಯನ್ನು ಕಟ್ಟಿ ಹಾಕುವುದು ಮಾತ್ರ ನಮ್ಮ ಗುರಿ. ಕನಿಷ್ಠ 25 ಕ್ಷೇತ್ರಗಳಲ್ಲಿ ಮೈತ್ರಿಕೂಟ ಗೆಲ್ಲಬೇಕು ಎಂಬ ಉದ್ದೇಶದಿಂದ ತೀರ್ಮಾನ ಕೈಗೊಳ್ಳುತ್ತೇವೆ' ಎಂದರು.












Click it and Unblock the Notifications